ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತನೇ ದಿನದ ಗಣೇಶನಿಗೆ ಸಂಭ್ರಮದ ವಿದಾಯ

ಅಹೋರಾತ್ರಿ ನಡೆದ ಮೆರವಣಿಗೆ: ಸಂಗೀತದ ಅಬ್ಬರಕ್ಕೆ ಯುವಕರ ನೃತ್ಯ
Last Updated 9 ಸೆಪ್ಟೆಂಬರ್ 2022, 14:37 IST
ಅಕ್ಷರ ಗಾತ್ರ

ರಾಯಚೂರು: ಚೌತಿ ದಿನದಂದು ಪ್ರತಿಷ್ಠಾಪನೆಯಾಗಿ ಒಂಬತ್ತನೆ ದಿನದಂದು ವಿಸರ್ಜನೆಗೊಂಡ ವಿಘ್ನ ವಿನಾಶಕ ಗಣೇಶನಿಗೆ ಭಕ್ತರು ಸಂಭ್ರಮ, ಸಡಗರದ ವಿದಾಯ ನೀಡಿದರು.

ಒಂಬತ್ತನೇ ದಿನದಂದು ಬಹುತೇಕ ಬಡಾವಣೆ ಗಣೇಶಮೂರ್ತಿಗಳೇ ವಿಸರ್ಜನೆಗೆ ಬಂದಿದ್ದವು. ಗುರುವಾರ ಸಂಜೆಯಿಂದಲೇ ವಿವಿಧ ಬಡಾವಣೆಗಳಿಂದ ಆರಂಭವಾದ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆಯು ಮಾವಿನಕೆರೆ ಪಕ್ಕದ ಖಾಸಬಾವಿ ತಲುಪುವ ಹೊತ್ತಿಗೆ ಶುಕ್ರವಾರ ಬೆಳಗಿನ ಜಾವವಾಗಿತ್ತು. ಕ್ರೇನ್‌ ಯಂತ್ರಗಳ ನೆರವಿನಿಂದ ಒಂದೊಂದೇ ಗಣೇಶನನ್ನು ವಿಸರ್ಜನೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಸರದಿಯಲ್ಲಿದ್ದ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ಮುಗಿಯುವಾಗ ಶುಕ್ರವಾರ ಮಧ್ಯಾಹ್ನವಾಗಿತ್ತು.

100 ಹೆಚ್ಚು ಬೃಹತ್‌ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ರಾತ್ರಿಯಿಡೀ ಸಂಗೀತದ ಅಬ್ಬರಕ್ಕೆ ನೃತ್ಯ ಮಾಡಿ ದಣಿದಿದ್ದ ಯುವಕರು ಟ್ಯಾಂಕ್‌ಬಂಡ ಮಾರ್ಗದ ಪಕ್ಕದಲ್ಲಿಯೇ ಮಲಗಿಕೊಂಡಿದ್ದು ಶುಕ್ರವಾರ ಬೆಳಿಗ್ಗೆ ಕಂಡುಬಂತು. ಗಣೇಶಮೂರ್ತಿಗಳನ್ನು ಮತ್ತು ಧ್ವನಿವರ್ಧಕಗಳನ್ನು ಹೊತ್ತ ಟ್ರ್ಯಾಕ್ಟರ್‌ ಮತ್ತು ಇತರೆ ವಾಹನಗಳು ರಸ್ತೆಯುದ್ದಕ್ಕೂ ನಿಲುಗಡೆಯಾಗಿದ್ದವು.

ಅದ್ಧೂರಿ ಮೆರವಣಿಗೆ: ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಪ್ರತಿ ಬಡಾವಣೆಯಲ್ಲೂ ಒಂಬತ್ತನೇ ದಿನದಂದು ವಿಸರ್ಜನೆಗೆ ಕಳುಹಿಸುವಾಗ ವಿಶೇಷ ಪೂಜೆ, ಪುನಸ್ಕಾರಗಳನ್ನು ನೆರವೇರಿಸಲಾಯಿತು. ಆನಂತರ ನಡೆದ ವಾದ್ಯಗಳ ವಾದನ ಮತ್ತು ಧ್ವನಿವರ್ಧಕಗಳ ಸಂಗೀತದ ಅಬ್ಬರಕ್ಕೆ ಬಡಾವಣೆಗಳಲ್ಲಿರುವ ಜನರೆಲ್ಲ ನೃತ್ಯ ಮಾಡಿ ಸಂಭ್ರಮಿಸಿದರು. ಕೆಲವು ಯುವಕರು ಗುಲಾಲು ಎರಚಿಕೊಂಡು, ಪಟಾಕಿ ಸಿಡಿಸಿ ಗಣೇಶೋತ್ಸವ ಸಂಭ್ರಮವನ್ನು ಆಚರಿಸಿದರು.

’ಗಣಪತಿ ಬಪ್ಪ ಮೊರಯಾ‘ ಎಲ್ಲೆಡೆಯಲ್ಲೂ ಮೊಳಗಿತ್ತು. ಬಡಾವಣೆ ಗಡಿ ದಾಟಿದ ಬಳಿಕ ಆಯಾ ಬಡಾವಣೆಗಳ ಗಜಾನನ ಸಮಿತಿಗಳ ಸದಸ್ಯರು ಮತ್ತು ಗಜಾನನ ಮಿತ್ರ ಮಂಡಳಿ ಸದಸ್ಯರಿಂದ ನೃತ್ಯದ ಅಬ್ಬರ ಇನ್ನೂ ಹೆಚ್ಚಾಯಿತು. ರಂಗುರಂಗಿನ ವಿದ್ಯುತ್‌ ದೀಪಗಳು, ಭಕ್ತಿಗೀತೆಗಳು, ನೃತ್ಯಗೀತೆಗಳು... ಹೀಗೆ ತರಹೇವಾರಿ ಸಂಗೀತದಲ್ಲಿ ತೇಲಾಡಿಕೊಂಡು, ಓಲಾಡಿಕೊಂಡು ಯುವಕರು ಗಣೇಶನನ್ನು ವಿಸರ್ಜನೆ ಕೆರೆತಂದಿದ್ದರು. ಟ್ಯಾಂಕ್‌ಬಂಡ್‌ ರಸ್ತೆ, ಗಂಗಾನಿವಾಸ ರಸ್ತೆಗಳುದ್ದಕ್ಕೂ ವಾಹನಗಳ ಸಾಲು, ಯುವಕರ ಗುಂಪುಗಳಿದ್ದವು.

ಪೊಲೀಸರು ಎಲ್ಲೆಡೆಯಲ್ಲೂ ಬಂದೋಬಸ್ತ್‌ ವ್ಯವಸ್ಥೆ ಏರ್ಪಡಿಸಿದ್ದರು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಅಹೋರಾತ್ರಿ ಯುವಕರ ಗುಂಪುಗಳನ್ನು ನಿಯಂತ್ರಿಸಿದರು. ಒಂಬತ್ತನೇ ದಿನದ ಗಣೇಶ ಮೂರ್ತಿಗಳ ವಿಸರ್ಜನೆಯು ಶಾಂತಿಯುತವಾಗಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT