ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಲು ಕ್ರಮ: ಸಚಿವ ರಹೀಂ ಖಾನ್

Published 6 ಫೆಬ್ರುವರಿ 2024, 6:51 IST
Last Updated 6 ಫೆಬ್ರುವರಿ 2024, 6:51 IST
ಅಕ್ಷರ ಗಾತ್ರ

ರಾಯಚೂರು: ‘ದಿನದ 24 ಗಂಟೆಯೂ ನಿರಂತರ ನೀರು ಪೂರೈಕೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ತಾತ್ಕಾಲಿಕ ಪರಿಹಾರಕ್ಕೆ ಜಿಲ್ಲಾಧಿಕಾರಿ ಖಾತೆಯಲ್ಲಿರುವ ₹27 ಕೋಟಿ ವಿನಿಯೋಗಿಸಲಾಗುವುದು’ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದರು.

‘ಏಳು ವರ್ಷಗಳಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ 15 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವುದು ಗಮನಕ್ಕೆ ಬಂದಿದೆ. ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಮಿಕರು ವಾಸವಾಗಿರುವ ಬಡಾವಣೆಗಳಲ್ಲಿ ಪ್ರತಿದಿನ ಸರಬರಾಜು ಮಾಡಲಾಗುತ್ತಿದ್ದು, ಬೇಸಿಗೆ ಮುಗಿಯುವವರೆಗೆ ಕಂಪನಿಯಿಂದ ಪಟ್ಟಣಕ್ಕೆ ನೀರು ಪೂರೈಕೆ ಮಾಡಲು ಸಾಧ್ಯವಿರುವ ಕ್ರಮ ಕೈಗೊಳ್ಳಯವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು’ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಮಂಡ್ಯದಲ್ಲಿ ಬಿಜೆಪಿಯಿಂದ ಬಂದ್‌ಗೆ ಕರೆ ನೀಡಿದ್ದು ಸರಿಯಲ್ಲ. ಬಿಜೆಪಿ ನಾಯಕರು ರಾಜಕೀಯ ಲಾಭಕ್ಕೆ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡದೇ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬೀದಿ ನಾಯಿಗಳ ಕಡಿತಕ್ಕೆ ಒಳಗಾದ ಸಂತ್ರಸ್ತ ಕುಟುಂಬಕ್ಕೆ ಉಚಿತ ಚಿಕಿತ್ಸೆ ನೀಡಿ, ಪರಿಹಾರ ವಿತರಿಸಲಾಗುವುದು ಹಾಗೂ ಬೀದಿನಾಯಿಗಳ ಹಾವಳಿ ಕಡಿವಾಣಕ್ಕೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿ  ಶಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡ ನಿರ್ಮಿಸಿರುವ ಬಗ್ಗೆ ಅನೇಕ ಸಂಘಟನೆಗಳು ದೂರು ಕೊಟ್ಟಿವೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಶಾಲೆ, ರಾಜಕಾಲುವೆಯ ಜಾಗ ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಿಸಿದ್ದರೆ ಪರಿಶೀಲಿಸಿ ತಕ್ಷಣ ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ’ ಎಂದರು.

‘ಬಿಜೆಪಿಯಿಂದ ಸಬ್ ಕಾ ಸಾತ್ ಸಬ್ ವಿಕಾಸ್ ಕೇವಲ ಘೊಷಣೆ ಮಾಡಲಾಗಿದೆ. ಕಾಂಗ್ರೆಸ್ ಐದು ಗ್ಯಾರಂಟಿ ಜಾರಿ ಮಾಡುವ ಮೂಲಕ ಸರ್ವರ ಕಲ್ಯಾಣಕ್ಕೆ ಕೆಲಸ ಮಾಡುತ್ತಿದೆ’ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT