ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನ್ವಿ: ಆದರ್ಶ ಪಿಯು ಕಾಲೇಜು ಮಂಜೂರು

ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಮೇಲ್ದರ್ಜೆಗೆ
ಬಸವರಾಜ ಭೋಗಾವತಿ
Published 22 ಮೇ 2024, 6:46 IST
Last Updated 22 ಮೇ 2024, 6:46 IST
ಅಕ್ಷರ ಗಾತ್ರ

ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜು ಆಗಿ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ರಾಜ್ಯದ ಆಯ್ದ 60 ತಾಲ್ಲೂಕುಗಳಲ್ಲಿನ ವಿಜ್ಞಾನ ಸಂಯೋಜನೆ ಹೊಂದಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿತ್ತು. ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾನ್ವಿ ಹಾಗೂ ಸಿರವಾರ ಪಟ್ಟಣಗಳಲ್ಲಿ ಆದರ್ಶ ಸರ್ಕಾರಿ ಪಿಯು ಕಾಲೇಜುಗಳನ್ನು ಮಂಜೂರು ಮಾಡಿಸುವಲ್ಲಿ ಶಾಸಕ ಜಿ.ಹಂಪಯ್ಯ ನಾಯಕ ಯಶಸ್ವಿಯಾಗಿದ್ದಾರೆ. ಇವು ಸೇರಿದಂತೆ ಜಿಲ್ಲೆಯ ಐದು ಕಾಲೇಜುಗಳು ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಲ್ಪಟ್ಟಿವೆ.

ಈ ಕಾಲೇಜುಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯ, ಆಧುನಿಕ ತಂತ್ರಜ್ಞಾನ ಆಧಾರಿತ ಬೋಧನಾ ಪರಿಕರಗಳನ್ನು ಒದಗಿಸಿ, ವಿದ್ಯಾರ್ಥಿಗಳನ್ನು ಐಐಟಿ, ಐಐಎಸ್‌ಸಿ, ವೈದ್ಯಕೀಯ ಸಂಸ್ಥೆಗಳಿಗೆ ಪ್ರವೇಶ ಪಡೆಯುವಂತೆ ತರಬೇತುಗೊಳಿಸಲು ತೀರ್ಮಾನಿಸಲಾಗಿದೆ.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಳೆದ ಮಾರ್ಚ್ ತಿಂಗಳಲ್ಲಿ ₹ 9ಲಕ್ಷ ಮಂಜೂರಾಗಿದ್ದು, ಡಿಜಿಟಲ್ ಗ್ರಂಥಾಲಯ, ಕಂಪ್ಯೂಟರ್ ಪ್ರಯೋಗಾಲಯದ ಸಿದ್ಧತೆ ಕೈಗೊಳ್ಳಲಾಗಿದೆ. ತರಗತಿ ಕೊಠಡಿ ದುರಸ್ತಿ, ಶುದ್ಧ ಕುಡಿಯುವ ನೀರು ಹಾಗೂ ಸಮರ್ಪಕ ವಿದ್ಯುತ್ ವ್ಯವಸ್ಥೆ ಸೇರಿದಂತೆ ಇತರ ಪ್ರಯೋಗಾಲಯಗಳಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿಜ್ಞಾನ ವಿಭಾಗಕ್ಕೆ ಹೆಚ್ಚುವರಿಯಾಗಿ ಕಂಪ್ಯೂಟರ್ ವಿಜ್ಞಾನ ವಿಷಯದ ಸಂಯೋಜನೆ ಮಂಜೂರು ಮಾಡಲಾಗಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಸದರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ 110 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. ಇದೀಗ ಆದರ್ಶ ಪಿಯು ಕಾಲೇಜು ಆಗಿ ಪರಿವರ್ತನೆಯಾಗಿರುವ ಕಾರಣ 2024-25ನೇ ಸಾಲಿನಲ್ಲಿ ಹೆಚ್ಚಿನ ಪ್ರಚೇಶದ ನಿರೀಕ್ಷೆ ಇದೆ.

ಹುದ್ದೆಗಳು ಖಾಲಿ: ಕಳೆದ ಎರಡು ವರ್ಷಗಳಲ್ಲಿ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರ ಒಟ್ಟು ಸಂಖ್ಯೆ 600ರ ಗಡಿ ಸಮೀಪಿಸಿದೆ. ಆದರೆ ಕಾಲೇಜಿಗೆ ಮಂಜೂರಾದ ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ರಾಜ್ಯ ಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಉಪನ್ಯಾಸಕರ ಹುದ್ದೆಗಳು ಹಾಗೂ ಪ್ರಥಮ ದರ್ಜೆ ಸಹಾಯಕ, 'ಡಿ' ಗ್ರೂಪ್ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಸ್ಥಳೀಯರ ಮನವಿ.

ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಲು ಮಾನ್ವಿ ಸಿರವಾರ ತಾಲ್ಲೂಕುಗಳಿಗೆ ಆದರ್ಶ ಪಿಯು ಕಾಲೇಜುಗಳನ್ನು ಮಂಜೂರು ಮಾಡಿಸಲಾಗಿದೆ.
-ಜಿ.ಹಂಪಯ್ಯ ನಾಯಕ ಶಾಸಕ ಮಾನ್ವಿ
ಆದರ್ಶ ಪಿಯು ಕಾಲೇಜು ಮಂಜೂರಾಗಿರುವ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಿ ಪಿಯುಸಿ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಗುವುದು.
–ರವೀಂದ್ರ ಬಂಡಿ ಪ್ರಾಂಶುಪಾಲ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT