ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ

Published 6 ಫೆಬ್ರುವರಿ 2024, 16:06 IST
Last Updated 6 ಫೆಬ್ರುವರಿ 2024, 16:06 IST
ಅಕ್ಷರ ಗಾತ್ರ

ರಾಯಚೂರು: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‍ನಲ್ಲಿ ಐಸಿಡಿಎಸ್‌ ಯೋಜನೆಗೆ ಅನುದಾನ ಕಡಿತ ಹಾಗೂ ಗೌರವಧನ ಹೆಚ್ಚಿಸದ ನಡೆ ಖಂಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಮೃತ ಕಾಲದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಈಗ ಸಬ್ ಕಾ ವಿಶ್ವಾಸ್ ಅಂತಾ ಘೋಷಣೆ ಮಾಡುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ದೂರಿದರು.

ರಾಮ ರಾಜ್ಯ ಎನ್ನುವ ಸರ್ಕಾರ ಹಸಿವಿನ ಸೂಚ್ಯಂಕ 111ನೇ ಸ್ಥಾನದಿಂದ ಭಾರತವನ್ನು ಮೇಲೆತ್ತಲು ಯಾವ ಪ್ರಯತ್ನವನ್ನು ಬಜೆಟ್‍ನಲ್ಲಿ ಮಾಡಲಿಲ್ಲ. ಐಸಿಡಿಎಸ್‌ ಗೆ ₹21,521 ಕೋಟಿಯಿಂದ ₹21,200 ಕೋಟಿಗೆ ಇಳಿಸಿ ಮಧ್ಯಂತರ ಬಜೆಟ್‍ನಲ್ಲಿ ₹300 ಕೋಟಿಗಿಂತ ಹೆಚ್ಚು ಬಜೆಟ್ ಕಡಿತ ಮಾಡಲಾಗಿದೆ. ಅನುದಾನ ಕಡಿತದಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ವೇತನ ವಿಳಂಬ, ಬಾಡಿಗೆ ಪಾವತಿ, ಪೌಷ್ಟಿಕ ಆಹಾರಕ್ಕಾಗಿ ಹಣ ಬಿಡುಗಡೆ ಸರಿಯಾಗಿ ಮಾಡಿಲ್ಲ. ಇರುವ ಬಜೆಟ್ ಕಡಿತಗೊಳಿಸುವ ಪರಿಕಲ್ಪನೆಯಿರುವ ಸರ್ಕಾರ 2 ಕೋಟಿ ತಾಯಂದಿರ, 8 ಕೋಟಿ ಮಕ್ಕಳ ಆರೋಗ್ಯ, ಆಹಾರ, ಶಿಕ್ಷಣದ ಹಕ್ಕನ್ನು ಕಾಪಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಳೆದ 5 ವರ್ಷಗಳಲ್ಲಿ 1 ರೂಪಾಯಿ ಅನುದಾನ, ವೇತನ ಹೆಚ್ಚಳ ಮಾಡದೆ ಸಬ್ ಕಾ ವಿಕಾಸ್ ಎಂದರೆ ವಿಕಾಸ್ ಆಗುತ್ತದೆಯೇ? ಕೂಡಲೇ ಐಸಿಡಿಎಸ್ ಯೋಜನೆಗೆ ಕಡಿತಗೊಳಿಸಿರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ, ವರಲಕ್ಷ್ಮೀ, ಇಂದಿರಾ, ಕೆ.ಜಿ.ಗೋಕಾರಮ್ಮ, ಗಂಗಮ್ಮ,  ರಹಿಮತ್ ಬೇಗಂ, ಆಸ್ಮಾ, ಶಿವಶರಣಮ್ಮ, ನಾಗರತ್ನ, ಸುಲೋಚಾನಾ, ಮಹಾದೇವಿ, ಲಕ್ಷ್ಮೀ, ಗೌರಮ್ಮ, ಡಿ.ಎಸ್.ಶರಣಬಸವ, ಕೆ.ಜಿ.ವಿರೇಶ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT