ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ಹೆಚ್ಚಳ: ಎಪಿಎಂಸಿಯಲ್ಲಿ ವಹಿವಾಟು ಸ್ಥಗಿತ

ಸಚಿವರಿಗೆ ಮನವಿ ಸಲ್ಲಿಸಲು ಬೆಂಗಳೂರಿಗೆ ವ್ಯಾಪಾರಿಗಳ ನಿಯೋಗ
Last Updated 17 ಡಿಸೆಂಬರ್ 2020, 15:39 IST
ಅಕ್ಷರ ಗಾತ್ರ

ರಾಯಚೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಶುಲ್ಕವನ್ನು ಹೆಚ್ಚಳ ಮಾಡಿ ಸರ್ಕಾರವು ಆದೇಶ ನೀಡಿದ ಮರುದಿನ ಗುರುವಾರ, ರಾಯಚೂರು ಎಪಿಎಂಸಿಯಲ್ಲಿರುವ ಕಿಮಿಷನ್‌ ಏಜೆಂಟರು ಹಾಗೂ ಸಗಟು ವ್ಯಾಪಾರಿಗಳು ವಹಿವಾಟು ಸ್ಥಗಿತಗೊಳಿಸಿ ವಿರೋಧ ವ್ಯಕ್ತಪಡಿಸಿದರು.

ಪ್ರತಿ ಕ್ವಿಂಟಲ್‌ ಕೃಷಿ ಉತ್ಪನ್ನಕ್ಕೆ 35 ಪೈಸೆ ಶುಲ್ಕ ಇರುವುದನ್ನು ₹1 ಕ್ಕೆ ಏರಿಕೆ ಮಾಡಿರುವ ನಿರ್ಧಾರ ಕೈಬಿಡುವಂತೆ ಮನವಿ ಸಲ್ಲಿಸುವುದಕ್ಕೆ ಈಗಾಗಲೇ ವ್ಯಾಪಾರಿಗಳ ನಿಯೋಗವೊಂದು ಬೆಂಗಳೂರಿಗೆ ತೆರಳಿದೆ. ದಿಢೀರ್‌ ವಹಿವಾಟು ಸ್ಥಗಿತವಾಗಿದ್ದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಬಂದ್‌ ಬಗ್ಗೆ ಪೂರ್ವ ಮಾಹಿತಿಯಿಲ್ಲದೆ ಅನೇಕ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತಂದಿದ್ದರು.

ಮುಖ್ಯವಾಗಿ ಭತ್ತ, ಸೂರ್ಯಕಾಂತಿ ಹಾಗೂ ತೊಗರಿ ಉತ್ಪನ್ನಗಳನ್ನು ರೈತರು ಮಾರುಕಟ್ಟೆಗೆ ಮಾರಾಟಕ್ಕೆ ತೆಗೆದುಕೊಂಡು ಬಂದಿದ್ದಾರೆ.

ರಾಯಚೂರು ಜಿಲ್ಲೆಯ ರೈತರು ಸೇರಿದಂತೆ ನೆರೆಯ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆ ಮತ್ತು ಜೋಗುಳಾಂಬಾ ಗದ್ವಾಲ್‌ ಜಿಲ್ಲೆಯಿಂದ ಅನೇಕ ರೈತರು ಕೃಷಿ ಉತ್ನನ್ನಗಳನ್ನು ಮಾರಾಟಕ್ಕೆ ತಂದು, ನಿರಾಸೆ ಅನುಭವಿಸಬೇಕಾಯಿತು. ಪ್ರತಿದಿನ ರೈತರು ಮಧ್ಯಾಹ್ನವೇ ಕೃಷಿ ಉತ್ಪನ್ನವನ್ನು ಹರಾಜಿನಲ್ಲಿ ಮಾರಾಟ ಮಾಡಿ, ಕಮಿಷನ್‌ ಏಜೆಂಟ್‌ರಿಂದ ಸಂಜೆ ಹಣ ಪಡೆದು ವಾಪಸ್ಸಾಗುತ್ತಿದ್ದರು. ಮಾರಾಟದ ದಿನವೇ ಹಣ ಸಿಗುತ್ತದೆ ಎನ್ನುವ ಕಾರಣಕ್ಕಾಗಿಯೇ ನೆರೆಯ ರಾಜ್ಯಗಳಿಂದಲೂ ರಾಯಚೂರು ಎಪಿಎಂಸಿಗೆ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತೆಗೆದುಕೊಂಡು ಬರುತ್ತಾರೆ. ಆದರೆ, ಗುರುವಾರ ಮಾತ್ರ ವಹಿವಾಟು ಸಾಧ್ಯವಾಗದೆ ತೊಂದರೆಗೀಡಾದರು.

ಶುಲ್ಕ ಹೆಚ್ಚಳದ ವಿರುದ್ಧ ವರ್ತಕರೆಲ್ಲ ಒಗ್ಗಟ್ಟು ಪ್ರದರ್ಶಿಸಿ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಆದರೆ, ಸಿಂಧನೂರು, ಮಾನ್ವಿ, ಲಿಂಗಸುಗೂರು ತಾಲ್ಲೂಕುಗಳಲ್ಲಿ ವಹಿವಾಟು ಎಂದಿನಂತೆ ನಡೆದಿದೆ. ವಹಿವಾಟು ಸ್ಥಗಿತಗೊಳಿಸುವ ಕುರಿತು ಸಂಘದಲ್ಲಿ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಲಾಗಿದೆ.

ಎಪಿಎಂಸಿ ವಹಿವಾಟು ಆಧರಿಸಿ ಉಪಜೀವನ ಸಾಗಿಸುತ್ತಿರುವ ಹಮಾಲರು, ಧಾನ್ಯಗಳನ್ನು ತುಂಬಿಸುವ ಕೂಲಿಗಳು, ಧಾನ್ಯಗಳನ್ನು ವಿಂಗಡಿಸುವವರು ಹಾಗೂ ಚೀಲ ಮಾರಾಟ ಮಾಡುವವರು ಸಂಕಷ್ಟ ಅನುಭವಿಸಿದರು. ಮಾರಾಟವಾಗುವವರೆಗೂ ಧಾನ್ಯಗಳನ್ನು ಸುಭದ್ರವಾಗಿಟ್ಟುಕೊಳ್ಳಲು ರೈತರು ಎಪಿಎಂಸಿಯಲ್ಲೇ ವಸತಿ ಉಳಿದಿದ್ದಾರೆ. ಕೆಲವು ರೈತರು ಧಾನ್ಯಗಳ ಚೀಲಗಳ ಮೇಲೆಯೇ ನಿದ್ರೆಗೆ ಜಾರಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT