ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಅಪಾಯ ಆಹ್ವಾನಿಸುವ ಅದ್ವಾನ್‌ ರಸ್ತೆ

ವಾಹನ ದಟ್ಟಣೆ ಹೆಚ್ಚಿದ್ದರೂ ರಸ್ತೆ ವಿಸ್ತರಣೆ ಆಗುತ್ತಿಲ್ಲ
Last Updated 19 ಮೇ 2020, 19:45 IST
ಅಕ್ಷರ ಗಾತ್ರ

ರಾಯಚೂರು: ನಗರದ ಆಶಾಪುರ ಮಾರ್ಗದ ಸಿಸಿ ರಸ್ತೆಯು ಕಳೆದ ವರ್ಷ ಮಳೆಗಾಲದಲ್ಲಿಯೆ ಆಧ್ವಾನ್‌ವಾಗಿ ಆಪಾಯ ಆಹ್ವಾನಿಸುತ್ತಿದೆ. ಬೈಕ್‌ ಸವಾರರು ಜಾರಿ ಬೀಳುವುದು ಸಾಮಾನ್ಯವಾಗಿದ್ದರೂ, ಸಂಬಂಧಿಸಿದ ಅಧಿಕಾರಿಗಳಿಂದ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ.

ಸಿಸಿ ರಸ್ತೆಯಲ್ಲಿ ಸೀಳುಗಳು ನಿರ್ಮಾಣವಾಗಿದ್ದರಿಂದ ವಾಹನಗಳ ಸಂಚಾರಕ್ಕೆ ಸ್ವಲ್ಪ ಅಡೆತಡೆ ಅನುಭವಕ್ಕೆ ಬರುತ್ತಿತ್ತು. ಆದರೆ, ಅರ್ಧದಷ್ಟು ರಸ್ತೆ ಕಿತ್ತುಹೋಗಿ ಮೊಣಕಾಲುದ್ದ ತಗ್ಗುಗುಂಡಿ ನಿರ್ಮಾಣವಾಗಿ ಹಲವು ತಿಂಗಳುಗಳಾಗಿದೆ. ನಗರಸಭೆಗೆ ಆಯ್ಕೆಯಾದ ಸದಸ್ಯರಿಗೆ ಅಧಿಕಾರವಿಲ್ಲ ಹಾಗೂ ನಗರಸಭೆ ಅಧಿಕಾರಿಗಳು ಇದುವರೆಗೂ ಗಮನಿಸಿ ದುರಸ್ತಿ ಮಾಡುವುದಕ್ಕೆ ಮುಂದಾಗಿಲ್ಲ. ಪ್ರತಿನಿತ್ಯ ಬೈಕ್‌ ಸವಾರರು ಗಾಯ ಮಾಡಿಕೊಳ್ಳುತ್ತಿದ್ದಾರೆ.

ಇಂಥ ಕೆಟ್ಟುಹೋಗಿರುವ ರಸ್ತೆಯಲ್ಲಿಯೇ ಪಡಿತರ ಸಾಗಿಸುವ ಲಾರಿಗಳ ಆರ್ಭಟ. ಆಶಾಪುರ ಮಾರ್ಗದ ಜನನಿಬಿಡ ಪ್ರದೇಶದೊಳಗೆ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಗೋದಾಮು ಇದೆ. ಪ್ರತಿತಿಂಗಳು ಕೊನೆಯ ವಾರ ಮತ್ತು ಮೊದಲ ವಾರ ಹತ್ತಾರು ಲಾರಿಗಳು ರೈಲ್ವೆ ನಿಲ್ದಾಣದಿಂದ ಅಕ್ಕಿ ಮೂಟೆಗಳನ್ನು ಸಾಗಿಸುತ್ತವೆ. ಗೋದಾಮಿನಿಂದ ಜಿಲ್ಲೆಯ ವಿವಿಧೆಡೆ ಲಾರಿಗಳಿಗೆ ತುಂಬಿಸಿ ರವಾನಿಸಲಾಗುತ್ತದೆ. ಆಶಾಪುರ ಮಾರ್ಗವು 15 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕಿಸುತ್ತದೆ. ಹೀಗಾಗಿ ವಾಹನಗಳ ಎಡೆಬಿಡದೆ ಸಂಚರಿಸುತ್ತವೆ.

ಇದೇ ಮಾರ್ಗದಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಕೇಂದ್ರೀಯ ವಿದ್ಯಾಲಯ ಇದ್ದರೂ, ಶಾಲೆ ಸಂಪರ್ಕಕ್ಕೆ ಯೋಗ್ಯ ರಸ್ತೆ ನಿರ್ಮಾಣ ಮಾಡುವ ಕೆಲಸ ಇದುವರೆಗೂ ಆಗಿಲ್ಲ. ಹತ್ತಾರು ಖಾಸಗಿ ಶಾಲೆಗಳು, ಆಸ್ಪತ್ರೆಗಳು ಹಾಗೂ ಹಾಸ್ಟೇಲ್‌ಗಳಿವೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಅನುಭವಿಸುತ್ತಿರುವ ರಸ್ತೆ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವವರು ಯಾರು ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ.

ಕಳೆದ ವರ್ಷ ಮಳೆಗಾಲ ಮುಕ್ತಾಯದ ಬಳಿಕವೂ ರಸ್ತೆ ತಗ್ಗುಗಳನ್ನು ವೈಜ್ಞಾನಿಕ ದುರಸ್ತಿ ಮಾಡುವ ಕೆಲಸವನ್ನು ನಗರಸಭೆ ಮಾಡಿಲ್ಲ. ರಸ್ತೆ ಯಾವ ಇಲಾಖೆಗೆ ಸಂಬಂಧಿಸಿದ್ದು ಎನ್ನುವ ಯಕ್ಷಪ್ರಶ್ನೆ ಉದ್ಭವವಾಗಿದೆ. ಸಿಸಿ ರಸ್ತೆಗೂ ಮಣ್ಣಿನ ತೇಪೆ ಹಾಕುವ ಪರಿಪಾಠ ರಾಯಚೂರಿನಲ್ಲಿ ಮಾತ್ರ ನೋಡುವುದಕ್ಕೆ ಸಿಗುತ್ತದೆ.

*
ಆಶಾಪುರ ರಸ್ತೆ ಪ್ರತಿದಿನ ಇನ್ನೂ ಹದಗೆಡುತ್ತಿದ್ದರೂ ಯಾರೂ ಕಣ್ಣೆತ್ತಿ ನೋಡಿ ದುರಸ್ತಿ ಮಾಡುತ್ತಿಲ್ಲ. ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ.
–ವೆಂಕಟೇಶ, ಆಫೀಸರ್ಸ್‌ ಕಾಲೋನಿ, ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT