ಶನಿವಾರ, ಅಕ್ಟೋಬರ್ 31, 2020
26 °C

ಅಶೋಕ ಗಸ್ತಿ ಅವರ ಪಾರ್ಥಿವ ಶರೀರ ದರ್ಶನಕ್ಕೆ ಮುಗಿಬಿದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಶೋಕ ಗಸ್ತಿ ಅವರ ಭಾವಚಿತ್ರವನ್ನಿಟ್ಟು ಅಭಿಮಾನಿಗಳು, ಹಿತೈಷಿಗಳು ಶ್ರದ್ಧಾಂಜಲಿ ಸಲ್ಲಿಸಿದರು.

ರಾಯಚೂರು: ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ರಾಯಚೂರಿಗೆ ತರಲಾಗುತ್ತಿದ್ದು, ಅವರ ಅಂತಿಮ ದರ್ಶನ ಪಡೆಯಲು ನಗರದ ಆರ್‌ಟಿಒ ವೃತ್ತದಲ್ಲಿ ಜನರು ಮುಗಿಬಿದ್ದು ಕಾಯುತ್ತಿದ್ದಾರೆ.

ಪೊಲೀಸ್‌ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ವಾಹನ ಸಂಚರಿಸುವ ಕಡೆಗಳಲ್ಲಿ ಜನದಟ್ಟಣೆ ಆಗದಂತೆ ನಿಯಂತ್ರಣ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪಾರ್ಥಿವ ಶರೀರದ ಹತ್ತಿರ ಹೋಗುವುದಕ್ಕೆ ಸಾರ್ವಜನಿಕರಿಗೆ ಆವಕಾಶ ಇರುವುದಿಲ್ಲ. ಹೂಗುಚ್ಛಗಳನ್ನು ಹಿಡಿದು ನಿಂತಿರುವವರು ಆ್ಯಂಬುಲೆನ್ಸ್‌ ಹತ್ತಿರ ಹೋಗುವುದಕ್ಕೆ ಪ್ರಯತ್ನ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಶ್ರದ್ಧಾಂಜಲಿ: ರಾಯಚೂರಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ಆರ್‌ಟಿಒ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಅಶೋಕ ಗಸ್ತಿ ಅವರ ಭಾವಚಿತ್ರವನ್ನು ಅಳವಡಿಸಿ ಅಭಿಮಾನಿಗಳು, ಹಿತೈಷಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಶಾಸಕ ಡಾ. ಶಿವರಾಜ ಪಾಟೀಲ ಹಾಗೂ ಬಿಜೆಪಿ ಮುಖಂಡರು ಆರ್‌ಟಿಒ ವೃತ್ತದಲ್ಲಿ ಅಳವಡಿಸಿದ್ದ ಭಾವಚಿತ್ರದ ಎದುರು ಮೌನಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿದರು.

'ರಾಜ್ಯಸಭಾ ಸದಸ್ಯರಾದ ಅಶೋಕ ಗಸ್ತಿ ಅವರು ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಪಕ್ಷವು ಅವರ ಕೆಲಸವನ್ನು ಗುರುತಿಸಿ ಈ ಸ್ಥಾನ ನೀಡಿತ್ತು. ಕೋವಿಡ್‌ನಿಂದ ಅವರು ಮೃತಪಟ್ಟಿರುವುದರಿಂದ ರಾಯಚೂರು ತಬ್ಬಲಿ ಆದಂತಾಗಿದೆ' ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ಅಂತ್ಯಕ್ರಿಯೆ ತಯಾರಿ: ಕೋವಿಡ್‌ನಿಂದ ಮೃತಪಟ್ಟಿರುವ ಅಶೋಕ ಗಸ್ತಿ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಮರ್ಯಾದೆಯೊಂದಿಗೆ ನೆರವೇರಿಸಲು ಜಿಲ್ಲಾಡಳಿತವು ತಯಾರಿ ಮಾಡಿಕೊಂಡಿದೆ. ರಾಯಚೂರು ನಗರ ಹೊರವಲಯ ಪೋತಗಲ್‌ ಬಳಿ ಸರ್ಕಾರಿ ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು