ರಾಯಚೂರು: ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯನ್ನು ಶಾಲೆಯ ಪಕ್ಕದ ರಾಮಕೃಷ್ಣ ಆಶ್ರಮದ ವ್ಯಕ್ತಿಯೊಬ್ಬರು ಮನಬಂದಂತೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಕೊಪ್ಪಳ ಮೂಲದ ಬಾಲಕ ಶ್ರವಣಕುಮಾರನಿಗೆ ಆಶ್ರಮದ ಉಸ್ತುವಾರಿ ಪಿ. ವೇಣುಗೋಪಾಲ ಮನಬಂದಂತೆ ಹೊಡೆದು ಚಿತ್ರಹಿಂಸೆ ನೀಡಿದ್ದಲ್ಲದೇ ಕತ್ತಲ ಕೋಣೆಯಲ್ಲಿ ಹಾಕಿ ವಿಕೃತಿ ಮೆರೆದಿದ್ದಾನೆ.
ಶುಕ್ರವಾರ ಸಂಜೆ ಮಗನನ್ನು ನೋಡಲು ಬಂದಿದ್ದ ತಾಯಿಗೆ ವಿಷಯ ಗೊತ್ತಾಗಿದೆ. ತೊಡೆಗಳು ಹಾಗೂ ಕಣ್ಣಿನ ಗುಡ್ಡೆಗಳ ಮೇಲೆ ಬಲವಾದ ಗಾಯದ ಗುರುತುಗಳಾಗಿವೆ. ನೋವಿನಿಂದ ನರಳುತ್ತಿದ್ದ ಮಗುವನ್ನು ತಾಯಿ ತಕ್ಷಣ ನಗರದ ಚಂದ್ರಬಂಡ ಮಾರ್ಗದಲ್ಲಿರುವ ಜನತಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ನಂತರ ಬಾಲಕನ ತಾಯಿ ರಾತ್ರಿ ನಗರದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಬೆಳಿಗ್ಗೆ ಬರುವಂತೆ ಹೇಳಿ ಕಳಿಸಿದ್ದರು. ಹೀಗಾಗಿ ಪೊಲೀಸರು ಸ್ಪಂದಿಸಿಲ್ಲ ಎನ್ನುವ ಸುದ್ದಿ ರಾತ್ರಿ ವಾಟ್ಸ್ ಆ್ಯಪ್‌ನಲ್ಲಿ ಹರಿದಾಡಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಆಶ್ರಮದ ಉಸ್ರುವಾರಿ ಪಿ. ವೇಣುಗೋಪಾಲ ವಿರುದ್ಧ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.