ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಬೈಪಾಸ್ ರಸ್ತೆ ನಿರ್ಮಾಣ ಯೋಜನೆ ವಿಳಂಬ

ಕೇಂದ್ರದ ಅನುಮೋದನೆಯಲ್ಲಿ ಶ್ರೀರಂಗಪಟ್ಟಣ- ಬೀದರ್‌ ರಾಷ್ಟ್ರೀಯ ಹೆದ್ದಾರಿ 150 (ಎ)
Last Updated 3 ಸೆಪ್ಟೆಂಬರ್ 2021, 11:43 IST
ಅಕ್ಷರ ಗಾತ್ರ

ಮಸ್ಕಿ: ಬಹು ದಿನಗಳಿಂದ ನನೆಗುದಿಗೆ ಬಿದ್ದಿರುವ ಮಸ್ಕಿ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (150ಎ) ಬೈಪಾಸ್ ರಸ್ತೆ ನಿರ್ಮಾಣ ಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂದಾಜು ಪಟ್ಟಿ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಸಿದೆ. ಭೂ ಸ್ವಾದೀನಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50 ರಷ್ಟು ಹಣ ಬಿಡುಗಡೆ ಮಾಡದ ಕಾರಣ ಯೋಜನೆ ವಿಳಂಬವಾಗುತ್ತಿರುವುದು ಬೆಳಕಿಗೆ ಬಂದಿದೆ.

ಅಂದಾಜು ₹ 180 ಕೋಟಿ ವೆಚ್ಚದ ಯೋಜನೆಯ ಡಿಪಿಆರ್ ತಯಾರಿಸಲಾಗಿದೆ. ಮಸ್ಕಿ ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವಂತೆ ಬೈಪಾಸ್ ರಸ್ತೆಯ ನೀಲನಕ್ಷೆಯನ್ನು ಹೆದ್ದಾರಿ ಪ್ರಾಧಿಕಾರ ಸಿದ್ಧಪಡಿಸಿದೆ.

ನಗರದ ಹೊರ ವಲಯದ ಲಿಂಗಸುಗೂರು ರಸ್ತೆ ಬಳಿ ಇರುವ ಈಶಾನ್ಯ ಸಾರಿಗೆ ಸಂಸ್ಥೆಯ ಡಿಪೋದಿಂದ ಆರಂಭವಾಗಿ ಸಿಂಧನೂರು ರಸ್ತೆಯ ಗುಡದೂರು ಬಳಿಯ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಬಳಿ ಸಿಂಧನೂರು ರಸ್ತೆಯನ್ನು ಈ ಬೈಪಾಸ್ ರಸ್ತೆ ಸಂಪರ್ಕಿಸಲಿದೆ.

ಒಟ್ಟು 8 ಕಿ.ಮೀ. ಉದ್ದವಿರುವ ಬೈಪಾಸ್ ರಸ್ತೆಯಲ್ಲಿ 11 ಸೇತುವೆಗಳು ನಿರ್ಮಾಣವಾಗಲಿವೆ. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಬೇಕಾಗಿರುವ ಭೂ ಸ್ವಾಧೀನಕ್ಕೆ ₹ 60 ಕೋಟಿ ವೆಚ್ಚವಾಗಲಿದೆ ಎಂದು ಸಲ್ಲಿಕೆಯಾದ ವರದಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಹೆಚ್ಚುವರಿ ಭೂ ಸ್ವಾಧೀನದ ಅವಶ್ಯಕತೆ ಇದ್ದು, ಇದಕ್ಕಾಗಿ ಮಸ್ಕಿ ಮತ್ತು ಸಿಂಧನೂರು ತಾಲೂಕು ವ್ಯಾಪ್ತಿಯ ಹಳ್ಳಿಗಳ ಸಾವಿರಾರು ಎಕರೆ ಭೂಮಿ ಸ್ವಾಧೀನವಾಗಲಿದೆ. ಭೂ ಸ್ವಾಧೀನವಾಗುವ ಪ್ರದೇಶಗಳನ್ನು ಸರ್ವೆ ಮಾಡಿ ಈಗಾಗಲೇ ಗುರುತು ಮಾಡಲಾಗಿದೆ. ಬೈಪಾಸ್ ರಸ್ತೆ ಹಾದು ಹೋಗುವ ಮಾರ್ಗವನ್ನು ಗುರುತು ಮಾಡಿ, ಇದಕ್ಕೆ ಒಳಪಡುವ ಸರ್ಕಾರಿ ಮತ್ತು ಖಾಸಗಿ ಜಮೀನನ್ನು ಪಟ್ಟಿ ಮಾಡಿ, ಎಲ್ಲ ಸರ್ವೆ ನಂಬರ್‌ವಾರು ಅಂಕಿ ಸಂಖ್ಯೆ ವರದಿ ಸಿದ್ಧಪಡಿಸಿಸಲಾಗಿದ್ದು ಸರ್ಕಾರ ಬೈಪಾಸ್ ರಸ್ತೆ ಯೋಜನೆಗೆ ಅನುಮೋದನೆ ನೀಡುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಯೋಜನೆ ಜಾರಿಗೆ ನಿರಂತರ ಯತ್ನ

ಈ ಭಾಗದ ಜನರ ಬೇಡಿಕೆ, ಒತ್ತಾಯ ಹಿನ್ನೆಲೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು, ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ಪತ್ರ ಬರೆದು ಒತ್ತಾಯಿಸುವ ಜೊತೆಗೆ ಕಚೇರಿಯಿಂದ ಕಚೇರಿಗೆ ತೆರಳಿ ಯೋಜನೆ ಅನುಷ್ಠಾನಕ್ಕೆ ತನ್ನೇಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ. ಸಂಸದರ ಕಾಳಜಿಯಿಂದ ಯೋಜನೆಯ ಕೊನೆ ಹಂತಕ್ಕೆ ಬಂದಿದ್ದು ಶೀಘ್ರದಲ್ಲಿ ಅದು ಅನುಷ್ಠಾನಗೊಳ್ಳಲಿದೆ.

***

ಕೇಂದ್ರ ಸರ್ಕಾರದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಬೇಕಾಗುವ ಭೂ ಸ್ವಾಧಿನಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50 ರಷ್ಟು ಹಣ ನೀಡಬೇಕು. ಈಗಾಗಲೇ ಮುಖ್ಯಮಂತ್ರಿ ಅವರು ಹಣ ಮುಂಜೂರು ಮಾಡುವಂತೆ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದಾರೆ. ಶೀಘ್ರ ಹಣ ಬಿಡುಗಡೆಯಾಗಿ ಯೋಜನೆಗೆ ಅನುಮೋದನೆ ದೊರೆತು ಮಸ್ಕಿ ಹಾಗೂ ಸಿಂಧನೂರು ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ

–ಸಂಗಣ್ಣ ಕರಡಿ, ಸಂಸದ, ಕೊಪ್ಪಳ ಜಿಲ್ಲೆ

***

ಬೈಪಾಸ್ ರಸ್ತೆ ನಿರ್ಮಾಣದ ಕುರಿತು ಈಗಾಗಲೇ ಸಮಗ್ರ ಯೋಜನೆ ತಯಾರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರಗಳ ಅನುಮೋದನೆ ಬಾಕಿ ಇದ್ದು, ಅನುಮೋದನೆ ಸಿಕ್ಕ ಬಳಿಕ ಉಳಿದ ಪ್ರಕ್ರಿಯೆಗಳು ನಡೆಯಲಿವೆ.

–ವಿಜಯಕುಮಾರ್, ಸಹಾಯಕ ಕಾರ್ಯನಿರ್ವಾಹ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹುನಗುಂದ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT