ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಸಚಿವ ಸಂಪುಟ ಸಭೆ: ಜಿಲ್ಲೆಯ ಜನರ ಹಲವು ನಿರೀಕ್ಷೆ

Published : 16 ಸೆಪ್ಟೆಂಬರ್ 2024, 4:29 IST
Last Updated : 16 ಸೆಪ್ಟೆಂಬರ್ 2024, 4:29 IST
ಫಾಲೋ ಮಾಡಿ
Comments

ರಾಯಚೂರು: ಕಲ್ಯಾಣ ಕರ್ನಾಟಕ ಉತ್ಸವದ ದಿನವೇ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದ್ದು, ರಾಯಚೂರು ಜಿಲ್ಲೆಯ ನಿರೀಕ್ಷೆ ಪಟ್ಟಿಯಲ್ಲಿ 10 ಪ್ರಮುಖ ಯೋಜನೆಗಳು ಇದ್ದರೂ ಕೊನೆಯ ಕ್ಷಣದಲ್ಲಿ ನಾಲ್ಕು ಯೋಜನೆಗಳಿಗೆ ಮಾತ್ರ ಅನುಮೋದನೆ ದೊರೆಯುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿರುವ ಕಾಂಗ್ರೆಸ್‌ ಮುಖಂಡರ ಬಣ ರಾಜಕೀಯವು ಅಭಿವೃದ್ಧಿ ವೇಗಕ್ಕೆ ಕೊಕ್ಕೆ ಹಾಕಿದಂತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಜಿಲ್ಲೆಗೆ ಅಪರೂಪಕ್ಕೆ ಬಂದು ಹೋಗುತ್ತಾರೆ. ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಅವರಿಗೆ ತಮ್ಮ ಇಲಾಖೆ ಬಿಟ್ಟು ಬೇರೇನೂ ಮಾಡಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಲ್ಲಿ ಸಭೆಗಳನ್ನು ನಡೆಸುತ್ತಿದ್ದರೂ ಅವು ಪರಿಣಾಮಕಾರಿ ಇಲ್ಲ. ಜಿಲ್ಲೆಯ ಅಧಿಕಾರಿಗಳ ಮೇಲಿನ ಸರ್ಕಾರದ ಹಿಡಿತ ತಪ್ಪಿದೆ. ಜಿಲ್ಲಾಡಳಿತದ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ಬಂದ ನಂತರ ರಾಯಚೂರು ಜಿಲ್ಲಾಡಳಿತ ನಾಲ್ಕು ಪ್ರಮುಖ ಪ್ರಸ್ತಾವಗಳನ್ನು ಸರ್ಕಾರಕ್ಕೆ ಕಳಿಸಿಕೊಟ್ಟಿದೆ.

ರಾಯಚೂರು ನಗರ ಕೊಳಚೆಯಿಂದ ತುಂಬಿಕೊಂಡಿದೆ. ಹೊಲಸು ನಗರದ ಪಟ್ಟಿಯಲ್ಲಿದೆ. ಸಿಬ್ಬಂದಿ ಕೊರತೆ ಕಾಡುತ್ತಿದೆ. ‘ನಾನು ರಾಯಚೂರು ಜಿಲ್ಲಾಧಿಕಾರಿಯಾದಾಗಿನಿಂದ ನಗರದ ಹಾಗೂ ಜಿಲ್ಲೆಯ ಸ್ಥಿತಿ ಬದಲಾಗಿಲ್ಲ’ ಎಂದು ಸ್ವತಃ ರಾಯಚೂರು ಸಂಸದರೇ ಕೇಂದ್ರ ಸಚಿವರ ಸಭೆಯಲ್ಲಿ ಅಸಹಾಯಕತೆ ತೋಡಿಕೊಂಡಿದ್ದಾರೆ.

ನಗರದ ಜನಸಂಖ್ಯೆ ಹೆಚ್ಚಿರುವ ಕಾರಣ ನಗರದ ವ್ಯಾಪ್ತಿ ವಿಸ್ತರಿಸಿದೆ. ನಗರದ ಅಭಿವೃದ್ಧಿಗೆ ಈಗಿನ ಅನುದಾನ ಹಾಗೂ ಸಂಪನ್ಮೂಲಗಳು ಸಾಲುತ್ತಿಲ್ಲ. ರಾಯಚೂರು ನಗರದ ಜನಸಂಖ್ಯೆ 3 ಲಕ್ಷ ದಾಟಿದೆ. ನಗರಸಭೆಯನ್ನು ಮೇಲ್ದರ್ಜೆಗೇರಿಸಲು ಅಗತ್ಯವಿರುವ ಮಾನದಂಡಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿತ್ತು. ಹೀಗಾಗಿ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

‘ಮುಖ್ಯಮಂತ್ರಿ ಅವರು ರಾಯಚೂರು ಜಿಲ್ಲೆಯನ್ನೇ ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು. ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ಕಳಚಿ ಹಾಕಬೇಕು’ ಎಂದು ಜನಶಕ್ತಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಾರೆಪ್ಪ ಹರವಿ ಮನವಿ ಮಾಡಿದ್ದಾರೆ.

ಮಸ್ಕಿ ತಾಲ್ಲೂಕಿಗೆ ಪೂರ್ಣ

ಪ್ರಮಾಣದ ಕಚೇರಿ ಆರಂಭಕ್ಕೆ ಬಸನಗೌಡ ಪತ್ರ ಮಸ್ಕಿ ತಾಲ್ಲೂಕು ಕೇಂದ್ರವಾಗಿ ಆರು ವರ್ಷಗಳಾದರೂ ಪೂರ್ಣಪ್ರಮಾಣದ ತಾಲ್ಲೂಕು ಕಚೇರಿಗಳು ಆರಂಭವಾಗಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಸಚಿವ ಸಂಪುಟ ನಡೆಯುತ್ತಿದ್ದರಿಂದ ಪೂರ್ಣ ಪ್ರಮಾಣದ ತಾಲ್ಲೂಕು ಕಚೇರಿ ಅರಂಭಕ್ಕೆ ಸಚಿವ ಸಂಪುಟ ನಿರ್ಣಯ ತೆಗೆದುಕೊಳ್ಳಬೇಕು ಎಂದು ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರುವಿಹಾಳ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಇದರ ಜೊತೆಗೆ ಮಸ್ಕಿ ತಾಲ್ಲೂಕಿನ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಕನಕನಾಲ ಯೋಜನೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಬೇಕು. ಮಸ್ಕಿ ತಾಲ್ಲೂಕಿನ ಸಮಗ್ರ ರಸ್ತೆಗಳ ಅಭಿವೃದ್ಧಿಗೆ ₹150 ಕೋಟಿ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು. ₹20 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಹಾಗೂ ರಾಯಚೂರು ಕೊಪ್ಪಳ ಜಿಲ್ಲೆಗಳ ರೈತರ ಜೀವನಾಡಿ ಯೋಜನೆಯಾದ ನವಲಿ ಜಲಾಶಯ ಶೀಘ್ರ ನಿರ್ಮಾಣಕ್ಕೆ ಸಂಪುಟ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಿರವಾರ ತಾಲ್ಲೂಕು ಅಭಿವೃದ್ಧಿಗೆ ನೆರವು

ನಿರೀಕ್ಷೆ ಸಿರವಾರ ತಾಲ್ಲೂಕು ಕೇಂದ್ರವಾಗಿ 6 ವರ್ಷಗಳು ಕಳೆದರೂ ತಹಶೀಲ್ದಾರ್ ಕಚೇರಿ ತಾಲ್ಲೂಕು ಪಂಚಾಯಿತಿ ಕಚೇರಿ ತಾಲ್ಲೂಕು ಆರೋಗ್ಯ ಕೇಂದ್ರ ಉಪ ನೋಂದಣಿ ಕಚೇರಿ ತಾಲ್ಲೂಕು ನ್ಯಾಯಾಲಯದ ಕಟ್ಟಡಗಳಿಲ್ಲ. ಇದಕ್ಕೆ ತಾಲ್ಲೂಕಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಅನುದಾನದ ಕೊರತೆ ಇದೆ. ಹೊಸ ಸಿರವಾರ ತಾಲ್ಲೂಕಿಗೆ ಮೂಲಸೌಕರ್ಯ ಒದಗಿಸಲು ಹಾಗೂ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಮಾನ್ವಿ ಶಾಸಕ ಹಂಪಯ್ಯ ನಾಯಕ ಅವರು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕುಡಿಯುವ ನೀರಿನ ಕೆರೆ ವಿಸ್ತರಣೆಗೆ

₹30 ಕೋಟಿ ಅನುದಾನ ಅನುಮೋದನೆ ಸಾಧ್ಯತೆ ಸಿಂಧನೂರು ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ತುರ್ವಿಹಾಳ ಕೆರೆಯನ್ನು ಅವಲಂಬಿಸಿದೆ. ಈಗ 100 ಎಕರೆ ಜಮೀನಿನಲ್ಲಿ ನಿರ್ಮಿಸಿದ ಕೆರೆಯ ನೀರು ಸಾಕಾಗದ ಕಾರಣ ಇನ್ನೂ 119 ಎಕರೆ ಪ್ರದೇಶದಲ್ಲಿ ಇನ್ನೊಂದು ಕೆರೆ ನಿರ್ಮಿಸಲು ₹122 ಕೋಟಿ ಅಂದಾಜು ಪತ್ರಿಕೆ ಸಲ್ಲಿಸಲಾಗಿದೆ. ಮೊದಲ ಹಂತವಾಗಿ ₹30 ಕೋಟಿ ಅನುಮೋದನೆ ಪಡೆಯಲು ಅಧಿವೇಶನದ ಕಾರ್ಯಸೂಚಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಖಿತಪತ್ರ ಸಲ್ಲಿಸಿ ಮನವಿಯನ್ನೂ ಮಾಡಿಕೊಂಡಿದ್ದಾರೆ.

ಹೊಸ ಜಿಲ್ಲೆ ತಾಲ್ಲೂಕುಗಳಿಗೆ ಬೇಡಿಕೆ

ಸಿಂಧನೂರನ್ನು ಜಿಲ್ಲಾ ಕೇಂದ್ರವಾಗಿ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಹಟ್ಟಿ ಪಟ್ಟಣ ರಾಯಚೂರು ತಾಲ್ಲೂಕಿನ ದೇವಸೂಗೂರು ಹೋಬಳಿಯನ್ನು ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕು ಎನ್ನುವ ಒತ್ತಡ ಇದೆ. ಲಿಂಗಸುಗೂರು ತಾಲ್ಲೂಕು ಕೇಂದ್ರದಿಂದ ಸಿಂಧನೂರಿಗೆ ಸ್ಥಳಾಂತರಗೊಂಡ ಕಚೇರಿ ಆದೇಶ ಪುನರ್ ಪರಿಶೀಲನೆ ನಡೆಸಿ ಮೊದಲಿನ ಸ್ಥಾನದಲ್ಲೇ ಮುಂದುವರಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅಮರೇಶ್ವರ ಹಾಗೂ ಅಂಕಲಿಮಠ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಬೇಕು. ಮುದಗಲ್ ಹಾಗೂ ಜಲದುರ್ಗ ಕೋಟೆಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಿ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು ಎನ್ನುವ ಬೇಡಿಕೆ ಇದೆ.

ನಿರೀಕ್ಷೆ ಪಟ್ಟಿಯಲ್ಲಿದ್ದರೂ ಅನುಮೋದನೆ

ಅನುಮಾನ ರಾಯಚೂರು ವಿಮಾನ ನಿಲ್ದಾಣ ಅಭಿವೃದ್ಧಿ ಮುದಗಲ್‌ ರಾಯಚೂರು ಕೋಟೆ ಅಭಿವೃದ್ಧಿ ರಾಯಚೂರು ಟೆಕ್ಸ್‌ಟೈಲ್‌ ಪಾರ್ಕ್ ನವಲಿ ಸಮತೋಲನ ಜಲಾಶಯ ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ ತುಂಗಭದ್ರ ಎಡದಂಡೆ 5ಎ ಕಾಲುವೆ ಅಭಿವೃದ್ಧಿ ನಂದವಾಡಗಿ ಏತ ನೀರಾವರಿ ಕಾಮಗಾರಿ ಅನುದಾನ

ಯಾರು ಏನಂತಾರೆ?

ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲ ಪ್ರಮುಖ ಯೋಜನೆಗಳ ಅನುಮೋದನೆಗಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಸಂಪುಟ ಸಭೆ ಬಹುತೇಕ ಯೋಜನೆಗಳಿಗೆ ಒಪ್ಪಿಗೆ ಕೊಡುವ ನಿರೀಕ್ಷೆ ಇದೆ.

-ಶಿವಪ್ಪ ಭಜಂತ್ರಿ ಹೆಚ್ಚುವರಿ ಜಿಲ್ಲಾಧಿಕಾರಿ

ರಾಯಚೂರು ಕೊಪ್ಪಳ ಜಿಲ್ಲೆಯ ಜೀವನಾಡಿ ತುಂಗಭದ್ರಾ ಸಮನಾಂತರ ಜಲಾಶಯ ತುರ್ತು ನಿರ್ಮಾಣಕ್ಕೆ ಸಂಪುಟ ಕ್ರಮ ಕೈಗೊಳ್ಳಬೇಕು. ವಿಶೇಷ ಅನುದಾನ ಕೊಟ್ಟು ಹೊಸ ತಾಲ್ಲೂಕು ಅಭಿವೃದ್ಧಿಯ ವೇಗ ಹೆಚ್ಚಿಸಬೇಕು.

-ಸಂತೋಷ ಹಿರೇದಿನ್ನಿ ಅಧ್ಯಕ್ಷ ಕರ್ನಾಟಕ ರೈತ ಸಂಘ ಮಸ್ಕಿ

ಸಿರವಾರ ತಹಶೀಲ್ದಾರ್ ತಾಲ್ಲೂಕು ಪಂಚಾಯಿತಿ ಕಚೇರಿ ಸೇರಿ ಎಲ್ಲ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಿನಿವಿಧಾನಸೌಧಕ್ಕೆ ಅನುದಾನ ಬಿಡುಗಡೆ ಮಾಡಿ ಒಂದೇ ಕಟ್ಟಡದಲ್ಲಿ ಕಚೇರಿಗಳನ್ನು ಆರಂಭಿಸಬೇಕು.

-ಜೆ.ದೇವರಾಜಗೌಡ ಸಿರವಾರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ

ರಾಯಚೂರು ತಾಲ್ಲೂಕಿನ ದೇವಸೂಗೂರು ಗ್ರಾಮ ಪಂಚಾಯಿತಿ ಹೊಸ ತಾಲ್ಲೂಕು ರಚನೆ ಆಗುವುದರಿಂದ ಸರ್ಕಾರದ ಎಲ್ಲ ಯೋಜನೆಗಳನ್ನು ಸದುಪಯೋಗ ಪಡೆಯಲು ಅನುಕೂಲವಾಗಲಿದೆ ಸಿದ್ರಾಮಪ್ಪಗೌಡ ಮಾಲಿಪಾಟೀಲ ಹಿರಿಯ ಮುಖಂಡ ದೇವಸೂಗೂರು ಸಿಂಧನೂರು ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆ ಪಡೆದಿದೆ. ಮಸ್ಕಿ ಹಾಗೂ ಸಿರಗುಪ್ಪ ತಾಲ್ಲೂಕುಗಳು ಕೇವಲ 25ರಿಂದ 30 ಕಿಲೋಮೀಟರ್ ಅಂತರದಲ್ಲಿವೆ. ವಾಣಿಜ್ಯ ನಗರವಾಗಿ ಬೆಳೆಯುತ್ತಿರುವ ಸಿಂಧನೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು

- ಗಂಗಣ್ಣ ಡಿಶ್ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ

ಪೂರಕ ಮಾಹಿತಿ: ಪ್ರಕಾಶ ಮಸ್ಕಿ, ಕೃಷ್ಣಾ ಪಿ.ಸಿರವಾರ, ಡಿ.ಎಚ್‌.ಕಂಬಳಿ, ಉಮಾಪತಿ, ಬಿ.ಎ.ನಂದಿಕೋಲಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT