ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಮುಖಂಡರ ಬೆಂಬಲ ಕೋರುತ್ತಿರುವ ಅಭ್ಯರ್ಥಿಗಳು

ಕೊಪ್ಪಳ ಲೋಕಸಭಾ ಕ್ಷೇತ್ರ– ಕರಡಿ ಸಂಗಣ್ಣ ಬೆಂಬಲಿಗರ ನಡೆ ನಿಗೂಢ
Published 27 ಮಾರ್ಚ್ 2024, 5:33 IST
Last Updated 27 ಮಾರ್ಚ್ 2024, 5:33 IST
ಅಕ್ಷರ ಗಾತ್ರ

ಮಸ್ಕಿ: ಮೇ 7ರಂದು ಎರಡನೇ ಹಂತದಲ್ಲಿ ನಡೆಯುವ ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಕಳೆದ ಮೂರು ದಿನಗಳಿಂದ ಮಸ್ಕಿ ಕ್ಷೇತ್ರದ ಪ್ರಮುಖ ಮುಖಂಡರ ಮನೆ ಮನೆಗಳಿಗೆ ತೆರಳಿ ಬೆಂಬಲ ಕೋರುವ ಮೂಲಕ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.

ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಈ ಭಾರಿ ಟಿಕೀಟ್‌ ಕೈ ತಪ್ಪಿದ್ದರಿಂದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್‌ ಅವರು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರ ಮನೆ ಮನೆಗೆ ತೆರಳಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಅವರ ಸಹೋದರ ಕೆ.ಮಹೇಶ ಮುಖಂಡರೊಂದಿಗೆ ಆಗಮಿಸಿ ಪ್ರಮುಖರನ್ನು ಭೇಟಿಯಾಗಿ ಸಹೋದರನ ಪರವಾಗಿ ಬೆಂಬಲ ಕೋರುತ್ತಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಈಗಾಗಲೇ ಪಟ್ಟಣದ ಗೌಡನಭಾವಿ ಸೇರಿದಂತೆ ವಿವಿಧೆಡೆ ನಡೆದ ಜಾತ್ರಾ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರುವ ಹಿಟ್ನಾಳ ಪ್ರಮುಖರಿಗೆ ಮೊಬೈಲ್‌ ಕರೆ ಮಾಡುವ ಮೂಲಕ ಬೆಂಬಲ ಕೋರುತ್ತಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಅವರ ರಾಜೀನಾಮೆಯಿಂದ ತೆರವಾದ ನಗರ ಬ್ಲಾಕ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರ ನೇಮಕವಾಗದ ಕಾರಣ ಕಾರ್ಯಕರ್ತರು ಗೊಂದಲದಲ್ಲಿ ಸಿಲುಕಿದ್ದಾರೆ.

‘ಬಿಜೆಪಿಯಿಂದ ಟಿಕೆಟ್‌ ಕೈ ತಪ್ಪಿದ್ದರಿಂದ ಹಾಲಿ ಸಂಸದ ಕರಡಿ ಸಂಗಣ್ಣ ಅವರ ಬೆಂಬಲಿಗರ ನಡೆ ನಿಗೂಢವಾಗಿದೆ. ಎರಡು ಭಾರಿ ಸಂಸದರಾಗಿದ್ದರಿಂದ ಕ್ಷೇತ್ರದಲ್ಲಿ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವ ಬೆಂಬಲಿಗರು ಕರಡಿ ಸಂಗಣ್ಣ ಕೈಗೊಳ್ಳುವ ನಿರ್ಧಾರ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಸಂಗಣ್ಣ ಬೆಂಬಲಿಗರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳಿಂದ ಸೋತಿರುವೆ. ಈ ಭಾರಿ ಗೆಲುವು ಖಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದ ವೈಫಲ್ಯಗಳ ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೈಹಿಡಿಯಲಿವೆ.

-ರಾಜಶೇಖರ ಹಿಟ್ನಾಳ ಕಾಂಗ್ರೆಸ್‌ ಅಭ್ಯರ್ಥಿ

ಹಾಲಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ಬಿಜೆಪಿ ಮುಖಂಡರು ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲಾಗುವುದು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಎಲ್ಲರ ಕನಸಾಗಿದೆ. ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವೆ.

-ಡಾ.ಬಸವರಾಜ ಕ್ಯಾವಟರ್‌ ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT