15 ದಿನಗಳಲ್ಲಿ ಬದಲಾವಣೆ ಕಾಣದಿದ್ದರೆ ಕ್ರಮ

7
ರಾಯಚೂರು ನಗರಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ

15 ದಿನಗಳಲ್ಲಿ ಬದಲಾವಣೆ ಕಾಣದಿದ್ದರೆ ಕ್ರಮ

Published:
Updated:
Prajavani

ರಾಯಚೂರು: ನಗರದೊಳಗೆ ಸ್ವಚ್ಛತೆ ವಿಷಯದಲ್ಲಿ 15 ದಿನಗಳಲ್ಲಿ ಬದಲಾವಣೆ ಕಾಣಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಬದಲಾವಣೆ ಮಾಡಿ, ಕ್ರಮ ವಹಿಸುವುದು ಅನಿವಾರ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ. ಶರತ್‌ ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ವಿಶೇಷ ಸಭೆ ನಡೆಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಪಡೆದು ಮಾತನಾಡಿದರು.

 ಅಧಿಕಾರಿಗಳೆಲ್ಲ ಬಯೋಮೆಟ್ರಿಕ್‌ ಹಾಜರಾತಿ ಕೊಡಬೇಕು. ಮೊಬೈಲ್‌ ಗುಂಪು ರಚಿಸಿ ಜಿಪಿಎಸ್‌ ಲೋಕೆಷನ್‌ ಪತ್ತೆ ಮಾಡಲಾಗುವುದು. ವಾರ್ಡ್‌ವಾರು ಹಾಜರಾಗಿ ತಪ್ಪದೇ ವಹಿಸಿದ ಕೆಲಸ ಮಾಡಬೇಕು. ನಗರಸಭೆಯಲ್ಲಿ ಅಧಿಕಾರಿಗಳ ಕೊರತೆ ಇದೆ ಎನ್ನುವುದು ಗೊತ್ತು. ಇದನ್ನು ಗಮನಿಸಿ ಜಿಲ್ಲಾಧಿಕಾರಿ ಕಚೇರಿಯಿಂದ ಎಇಇ ಒಬ್ಬರನ್ನು ನಗರಸಭೆಗೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

’ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸುವ ಜನಸ್ಪಂದನೆ ಸಭೆಗೆ ಸಲ್ಲಿಕೆಯಾಗುವ ಬಹುತೇಕ ದೂರುಗಳು ನಗರಸಭೆಗೆ ಸಂಬಂಧಿಸಿದ್ದಾಗಿವೆ. ದೂರುಗಳನ್ನು ಇತ್ಯರ್ಥ ಪಡಿಸುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪ್ರತಿ 15 ದಿನಕ್ಕೊಮ್ಮೆ ನಗರಸಭೆಯಲ್ಲಿಯೇ ಸಭೆ ನಡೆಸಿ ಪರಿಶೀಲನೆ ಮಾಡಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದರು.

’ಬೀದರ್‌ ಜಿಲ್ಲಾ ಪಂಚಾಯಿತಿಯಲ್ಲಿ ನಾನು ಸಿಇಓ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಬಗೆಯನ್ನು ಕೇಳಿ ತಿಳಿದುಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದ ಅವರು, ಕೆಲಸ ಮಾಡದವರನ್ನು ಅಮಾನತುಗೊಳಿಸಲು ಶಿಫಾರಸು ಮಾಡುತ್ತಿದ್ದೆ. ಈಗ ಜಿಲ್ಲಾಧಿಕಾರಿ ಆಗಿರುವುದರಿಂದ ಮೈಗಳ್ಳ ಅಧಿಕಾರಿಗಳನ್ನು ನೇರವಾಗಿ ಅಮಾನತು ಮಾಡಲಾಗುವುದು ಎಂದು ಹೇಳಿದರು.

ಜನಪ್ರತಿನಿಧಿಗಳು ಕೂಡಾ ಸಾರ್ವಜನಿಕರ ಸೇವೆ ಮಾಡುವುದಕ್ಕೆ ಆಯ್ಕೆಯಾಗಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಅಧಿಕಾರಿಗಳು ಕೆಲಸ ಮಾಡುವಾಗ ಯಾರಾದರೂ ಅಡ್ಡಿಪಡಿಸುವುದು ಅಪರಾಧ. ಅಧಿಕಾರಿಗಳಿಗೆ ಇಂತಹ ಪ್ರಕರಣಗಳಾದರೆ ಕೂಡಲೇ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಈರಣ್ಣ ಬಿರಾದಾರ ಇದ್ದರು.

**

ಕಚೇರಿಯಲ್ಲಿಯೆ ಶುಚಿತ್ವವಿಲ್ಲ

ರಾಯಚೂರು ನಗರಸಭೆ ಕಚೇರಿಯಲ್ಲಿಯೇ ಶುಚಿತ್ವ ಕಾಣುತ್ತಿಲ್ಲ. ನಗರದ ಸ್ವಚ್ಛತೆ ಕಾಪಾಡುವ ಬಗ್ಗೆ ಜನರಿಗೆ ಹೇಗೆ ವಿಶ್ವಾಸ ಮೂಡಿಸುತ್ತೀರಿ ಎಂದು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.

ರಾಯಚೂರಿನಲ್ಲಿ ಸಮಸ್ಯೆಗಳಿಗೆ ಕೊನೆಯಿಲ್ಲ ಎಂಬುದು ಗೊತ್ತಿದೆ. ಸಮಸ್ಯೆಗಳನ್ನು ಹೇಳುತ್ತಾ ಕುಳಿತರೆ ಮುಗಿಯುವುದಿಲ್ಲ. ಆದರೆ, ತರ್ತಾಗಿ ಮಾಡಬೇಕಿರುವ ಕೆಲಸಗಳನ್ನು ಬೇಗನೆ ಮಾಡಿಕೊಡಬೇಕು. ದೂರು ಹಿಡಿದುಕೊಂಡು ಬರುವ ಜನರನ್ನು ಕಂಬ ಸುತ್ತಿಸುವುದನ್ನು ಸಹಿಸುವುದಿಲ್ಲ ಎಂದರು.

ಬೇಡಿದರೆ ಶುಲ್ಕ ಬರುವುದಿಲ್ಲ

ನಗರದಲ್ಲಿ ಬಾಕಿ ಇರುವ ನೀರಿನ ಶುಲ್ಕ ವಸೂಲಿಗೆ ನಿಯಮಾನುಸಾರ ಅಧಿಕಾರಿಗಳು ಕ್ರಮ ವಹಿಸಬೇಕು. ದಯನೀಯವಾಗಿ ಬೇಡಿಕೊಂಡು ವಸೂಲಿಗೆ ಹೋದರೆ ಶುಲ್ಕ ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ಸೂಚಿಸಿದರು.

ಸಂಗ್ರಹವಾಗುವ ಶುಲ್ಕದಿಂದಲೇ ಸಿಬ್ಬಂದಿಗೆ ವೇತನ ನೀಡಬೇಕೆನ್ನುವುದು ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನ ವಹಿಸಿರುವುದು ಸರಿಯಲ್ಲ. ಕೂಡಲೇ ಕಾನೂನು ಪ್ರಕಾರ ಶುಲ್ಕ ಪಡೆದುಕೊಳ್ಳಬೇಕು. ವಸೂಲಿಗೆ ಯಾರಾದರೂ ಅಡ್ಡಿಪಡಿಸಿದರೆ ಗಮನಕ್ಕೆ ತರಬೇಕು. ಅಧಿಕಾರಿಗಳ ಕೆಲಸಕ್ಕೆ ಜನಪ್ರತಿನಿಧಿಗಳು ಅಡ್ಡಿಪಡಿಸಿದರೆ, ಅವರಿಗೂ ನೋಟಿಸ್‌ ಜಾರಿಗೊಳಿಸಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ಕೆಲಸ ಮಾಡಿದ ಬಗ್ಗೆ ಮಾತ್ರ ಸಭೆಯಲ್ಲಿ ಹೇಳಬೇಕು. ಕೆಲಸವಾಗಿಲ್ಲ ಎನ್ನುವುದಕ್ಕೆ ನೂರೊಂದು ಕಥೆ ಹೇಳಿದರೆ ಸಹಿಸುವುದಿಲ್ಲ. ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಲು ಆದ್ಯತೆ ವಹಿಸಬೇಕು. ಹಳೇ ಕಡತಗಳನ್ನು ಹಿಡಿದುಕೊಂಡು ಕಾರಣ ಹೇಳಬಾರದು ಎಂದು ತಾಕೀತು ಮಾಡಿದರು.

ಸಾರ್ವಜನಿಕರ ಅಹವಾಲುಗಳು

* ಹರಿಜನವಾಡದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿ, ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು.

* ಉಸ್ಮಾನಿಯಾ ಮಾರುಕಟ್ಟೆ ಹಿಂಭಾಗ ರಸ್ತೆ ಅತಿಕ್ರಮಣ ತಪ್ಪಿಸಬೇಕು. ಮೂಲ ಸೌಕರ್ಯ ಒದಗಿಸಬೇಕು.

* ಬೇಕಾಬಿಟ್ಟಿ ರಸ್ತೆ ಅಗೆದು ಹಾಕಲಾಗುತ್ತಿದೆ. ಇಂಥವರನ್ನು ನೋಡಿಯೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.

* ಫ್ಲೆಕ್ಸ್‌ ಹಾವಳಿ ತಡೆಗಟ್ಟಬೇಕು.

ಈ ಅಹವಾಲುಗಳನ್ನು ಬೇಗನೆ ಇತ್ಯರ್ಥ ಮಾಡುವಂತೆ ನಗರಸಭೆ ಪೌರಾಯುಕ್ತ ರಮೇಶ ನಾಯಕ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !