ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಸದಸ್ಯರ ಅತಂತ್ರ ಅಲೆದಾಟ!

13 ತಿಂಗಳುಗಳಾದರೂ ಪ್ರಮಾಣ ಸ್ವೀಕರಿಸುವ ಸುಯೋಗ ಬಂದಿಲ್ಲ
Last Updated 2 ಅಕ್ಟೋಬರ್ 2019, 12:28 IST
ಅಕ್ಷರ ಗಾತ್ರ

ರಾಯಚೂರು: ನಗರಸಭೆಗೆ ವಾರ್ಡ್‌ ಸದಸ್ಯರನ್ನು ಆಯ್ಕೆಗೊಳಿಸಿ 13 ತಿಂಗಳುಗಳಾದರೂ, ಸದಸ್ಯರಿಗೆ ಆಡಳಿತಾತ್ಮಕ ಅಧಿಕಾರ ಹೊಂದುವ ಅವಕಾಶ ಸಿಕ್ಕಿಲ್ಲ!

ಕಳೆದ ವರ್ಷ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರವು ಪ್ರಕಟಿಸಿದ್ದ ಮೀಸಲಾತಿ ಪಟ್ಟಿ ವಿರುದ್ಧ ಹೈಕೋರ್ಟ್‌ಗೆ ಕೆಲವು ನಗರಸಭೆಗಳಿಂದ ತಕರಾರು ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆ ಮುಂದಕ್ಕೆ ಹಾಕಲಾಗುತ್ತಿದೆ. ಅಲ್ಲಿಂದ ಇಲ್ಲಿಯವರೆಗೂ ತಡೆಯಾಜ್ಞೆ ತೆರವುಗೊಳಿಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತಿಲ್ಲ ಎನ್ನುವ ಆರೋಪವನ್ನು ಸದಸ್ಯರು ಮಾಡುತ್ತಿದ್ದಾರೆ.

ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ನಗರಸಭೆಗೆ ಅಯ್ಕೆಯಾದ ಸದಸ್ಯರು, ಆಡಳಿತಾತ್ಮಕ ಅಧಿಕಾರ ಇಲ್ಲದೆ ಅತಂತ್ರರಾಗಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ನಗರಸಭೆ ಅಧಿಕಾರಿಗಳಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ!

ವಾರ್ಡ್‌ ಸಮಸ್ಯೆಗಳನ್ನು ನಗರಸಭೆಯಲ್ಲಿ ಚರ್ಚಿಸಿ ಪರಿಹಾರ ಪಡೆದುಕೊಳ್ಳಬೇಕಿದ್ದ ನಗರಸಭೆ ಸದಸ್ಯರೇ ಸಮಸ್ಯೆಯಲ್ಲಿ ಮುಳುಗಿದ ಅನುಭವ ವ್ಯಕ್ತಪಡಿಸುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ತ್ಯಾಜ್ಯ ವಿಲೇವಾರಿ, ಬೀದಿದೀಪ ಹಾಗೂ ಇತರೆ ಮೂಲ ಸೌಕರ್ಯಗಳ ಕುರಿತು ಅಹವಾಲು ಆಲಿಸಬೇಕಿದ್ದ ಅಧಿಕಾರಿಗಳು ವಾರ್ಡ್‌ಗಳಿಗೆ ಭೇಟಿ ನೀಡಿಲ್ಲ. ಕಳೆದ ತಿಂಗಳು ಸೆಪ್ಟೆಂಬರ್‌ ಮೂರನೇ ವಾರ ಸಿಂಧನೂರು ಮತ್ತು ರಾಯಚೂರು ನಗರಗಳಲ್ಲಿ ಭಾರಿ ಮಳೆ ಸುರಿಯಿತು. ಬಡಾವಣೆಯ ರಸ್ತೆಗಳು ಹಾಗೂ ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿವೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಆದರೆ ಅಧಿಕಾರಿಗಳು ಸಮಸ್ಯೆ ಸ್ಪಂದಿಸಿ ಕೆಲಸ ಮಾಡಿಸುತ್ತಿಲ್ಲ ಎಂದು ಆಯ್ಕೆಯಾದ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಮಳೆಯಿಂದ ಜನರು ತೊಂದರೆ ಅನುಭವಿಸಿದರೂ ಯಾವುದೇ ಅಧಿಕಾರಿ ಸ್ಥಳಕ್ಕೆ ಬಂದಿಲ್ಲ. ಯಾರಿಗೆ ದೂರು ಸಲ್ಲಿಸಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ನಗರಸಭೆ ಸಿಬ್ಬಂದಿ ಕೂಡಾ ಸಮಸ್ಯೆಗಳ ಕಡೆಗೆ ನೋಡುವುದಿಲ್ಲ. ನಗರಸಭೆ ಸದಸ್ಯರನ್ನು ಆಯ್ಕೆ ಮಾಡಿದರೂ ಅನುಕೂಲ ಇಲ್ಲದಂತಾಗಿದೆ’ ಎಂದು ಅಸ್ಕಿಹಾಳ ನಿವಾಸಿ ಸಿದ್ರಾಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸಮಸ್ಯೆಗಳು ಶಾಶ್ವತವಾಗಿದ್ದು, ಪರಿಹಾರವೆ ತಾತ್ಕಾಲಿಕ ಎನ್ನುವಂತಾಗಿದೆ. ಕನಿಷ್ಠಪಕ್ಷ ಸಾಮಾನ್ಯ ಸಭೆಯಲ್ಲಾದರೂ ವಿರೋಧ ಪಕ್ಷದವರು ನಗರದ ಸಮಸ್ಯೆಗಳನ್ನು ಪ್ರಸ್ತಾಪಿಸುವುದಕ್ಕೆ ಅವಕಾಶ ಇರುತ್ತಿತ್ತು. ಈಗ ಆಡಳಿತ ಪಕ್ಷವು ಇಲ್ಲ; ವಿರೋಧ ಪಕ್ಷವೂ ಇಲ್ಲ ಪರಿಸ್ಥಿತಿ ಇದೆ.

ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ತಕರಾರಿಗೆ ರಾಜ್ಯದ ಅರ್ಧದಷ್ಟು ನಗರಸಭೆಗಳು ಸಮಸ್ಯೆಗಳ ಸುಳಿಗೆ ಸಿಲುಕಿವೆ. ಸದಸ್ಯರಿಲ್ಲದ ಕಾರಣ 2019–20ನೇ ಸಾಲಿನಲ್ಲಿ ರಾಯಚೂರು ನಗರಸಭೆ ಬಜೆಟ್‌ ಮಂಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT