ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು ಹೆಸರಲ್ಲಿ ಬ್ಲಾಕ್‌ಮೇಲ್‌: ನೌಕರರು ಕಂಗಾಲು

ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಹಣ ದುರ್ಬಳಕೆ ಆರೋಪ: ನಂತರ ನಿರಾಕರಣೆ
ಬಿ.ಎ. ನಂದಿಕೋಲಮಠ
Published 3 ಏಪ್ರಿಲ್ 2024, 5:24 IST
Last Updated 3 ಏಪ್ರಿಲ್ 2024, 5:24 IST
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನಾದ್ಯಂತ ವಿವಿಧ ಇಲಾಖೆಗಳಲ್ಲಿ ಹಣ ದುರ್ಬಳಕೆ ಸೇರಿದಂತೆ ಇತರೆ ಆರೋಪಗಳಡಿ ದೂರು ಸಲ್ಲಿಸುವುದು ಸಾಮಾನ್ಯವಾಗಿದೆ. ವಿಚಾರಣೆ ಮಾಡಿ ವರದಿ ಸಲ್ಲಿಸುವ ಮುಂಚೆ ಅಥವಾ ನಂತರದಲ್ಲಿ ಆರೋಪ ತಪ್ಪು ತಿಳುವಳಿಕೆ ಮೇಲೆ ದೂರು ನೀಡಲಾಗಿತ್ತು ಎಂದು ನಿರಾಪೇಕ್ಷಣೆ ಪತ್ರ ಸಲ್ಲಿಸುತ್ತಿರುವುದು ನೌಕರರನ್ನು ಕಂಗಾಲು ಮಾಡಿದೆ.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‍, ಲೊಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಉದ್ಯೋಗ ಖಾತ್ರಿ ಸೇರಿದಂತೆ ಪ್ರತಿಯೊಂದು ಇಲಾಖೆಗಳಲ್ಲಿ ನೂರಾರು ದೂರುಗಳ ಅರ್ಜಿ ಸಲ್ಲಿಕೆಯಿಂದ ನೌಕರರು ರೋಸಿ ಹೋಗಿದ್ದಾರೆ.

ತಾಲ್ಲೂಕಿನಾದ್ಯಂತ ಸಲ್ಲಿಕೆಯಾಗುವ ದೂರು ಇತ್ಯರ್ಥದವರೆಗೆ ಹೋಗುವುದಿಲ್ಲ. ದೂರು ಸಲ್ಲಿಸಿದ ದಿನದಿಂದ ದೂರವಾಣಿ ಮೂಲಕ ಚಿತ್ರಹಿಂಸೆ ನೀಡಲಾಗುತ್ತಿದೆ ಎನ್ನುತ್ತಾರೆ ನೌಕರರು.

ತಾಲ್ಲೂಕಿನ ಈಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆ ಕೆಲಸ ಮಾಡದೇ ಹಣ ದುರ್ಬಳಕೆ ಮಾಡಿಕೊಂಡಿದ್ದು ಕಾನೂನು ಕ್ರಮ ಕೈಗೊಳ್ಳಲು ಭೀಮಣ್ಣ ಕೆಸರಟ್ಟಿ ಎಂಬುವವರು 2023ರ ನವೆಂಬರ್ 29ರಂದು ದೂರು ಸಲ್ಲಿಸಿದ್ದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ 2024 ಜನವರಿ 22ರಂದು ಕೆಸರಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾಖಲೆ ಪ್ರಕಾರ ಹೆಸರಿರುವ ಕೂಲಿಕಾರರಿಗೆ ಹಣ ಪಾವತಿಸದೇ ಬೇರೆಯವರಿಗೆ ₹1.45ಲಕ್ಷ ಅನುದಾನ ದುರ್ಬಳಕೆ ಮಾಡಿಕೊಂಡ ಬಗ್ಗೆ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಿದ್ದಾರೆ.

ಈ ಪ್ರಕರಣದ ತನಿಖಾ ವರದಿ ಪಡೆದ ದೂರುದಾರ ಭೀಮಣ್ಣ ಅವರು, 2024 ಫೆಬ್ರುವರಿ 27ರಂದು ಅರಣ್ಯ ಇಲಾಖೆ ಕಂದಕ ನಿರ್ಮಾಣ ಕಾಮಗಾರಿಯಲ್ಲಿ ಬೋಗಸ್‍ ಬಿಲ್‍ ಪಾವತಿ ಮಾಡಿಲ್ಲ. ತಪ್ಪಾದ ಮಾಹಿತಿಯೊಂದಿಗೆ ದೂರು ಸಲ್ಲಿಸಿದ್ದೆ ಎಂದು ಆರೋಪ ನಿರಾಕರಿಸಿ ಮತ್ತೊಂದು ಪತ್ರ ಬರೆದಿರುವುದು ಕುತೂಹಲ ಮೂಡಿಸಿದೆ.

ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಅವರನ್ನು ಸಂಪರ್ಕಿಸಿದಾಗ, ‘ನಿತ್ಯ ದೂರು ಬರುವುದನ್ನು ಪರಿಶೀಲಿಸಿ ವರದಿ ಮಾಡುವುದು ಕಷ್ಟದ ಕೆಲಸವಾಗಿದೆ. ವರದಿ ಸಲ್ಲಿಸಿದಾಕ್ಷಣ ದೂರುದಾರ ತಪ್ಪು ಮಾಹಿತಿ ಆಧರಿಸಿ ದೂರು ನೀಡಿದ್ದೆ ಎಂದು ಪತ್ರ ಕೊಡುತ್ತಾರೆ. ಹೀಗಾಗಿ ನೌಕರರು ಕೆಲಸ ಮಾಡಲು ಆಸಕ್ತಿ ಕಳೆದುಕೊಂಡಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT