ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗರದ ಹಸಿರೀಕರಣಕ್ಕೆ ಮೂಡಿದ ವಿಶ್ವಾಸ’

ಬೀಜದುಂಡೆ ಅಭಿಯಾನದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಹೇಳಿಕೆ
Last Updated 22 ಜುಲೈ 2018, 17:25 IST
ಅಕ್ಷರ ಗಾತ್ರ

ರಾಯಚೂರು: ‘ಸಾವಿರಾರು ಸಸಿಗಳನ್ನು ನೆಡುವ ಮೂಲಕ ನಗರದಲ್ಲಿ ಹಸಿರೀಕರಣ ಮಾಡುವ ವಿಶ್ವಾಸವನ್ನು ಗ್ರೀನ್ ರಾಯಚೂರು ಸಂಸ್ಥೆ ಮೂಡಿಸಿದೆ’ ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗ್ರೀನ್ ರಾಯಚೂರು ಹಾಗೂ ಪ್ರಾದೇಶಿಕ ಅರಣ್ಯ ವಿಭಾಗದಿಂದ ಭಾನುವಾರ ಆಯೋಜಿಸಿದ್ದ ಪ್ರಕೃತಿಗಾಗಿ ಒಂದು ದಿನ ಬೀಜದುಂಡೆ ಅಭಿಯಾನ, ಸಾರ್ಥಕ ನೂರು ವಾರಗಳ ನಿರಂತರ ಶ್ರಮದಾನ ಸಂಭ್ರಮ, ಪರಿಸರ ಜಾಗೃತಿ ಅಭಿಯಾನ ಮತ್ತು ಸಸಿಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಗರ ವಿಧಾನಸಭಾ ಕ್ಷೇತ್ರದಲ್ಲಿ ಅರಣ್ಯೀಕರಣಕ್ಕೆ ₹30 ಲಕ್ಷ ಅನುದಾನ ಖರ್ಚು ಮಾಡಲಾಗಿದೆ ಎಂದು ಅರಣ್ಯ ಸಚಿವರು ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಅರಣ್ಯ ಇಲಾಖೆ ಮೂವತ್ತು ಗಿಡಗಳನ್ನು ಕೂಡ ಬೆಳೆಸಿಲ್ಲ ಎಂದ ಅವರು ಶೀಘ್ರದಲ್ಲಿ ಈ ಬಗ್ಗೆ ಸಭೆಯನ್ನು ನಡೆಸಲಾಗುತ್ತದೆ’ ಎಂದರು.

40 ಸಾವಿರ ಸಸಿಗಳನ್ನು ನೆಟ್ಟಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲಿ ನೆಟ್ಟಿರುವ ಸಸಿಗಳು ಬೆಳೆಯುತ್ತಿವೆ. ಆದರೆ, ಅರಣ್ಯ ಇಲಾಖೆ ಬೆಟ್ಟ ಸಸಿಗಳು ಮಾತ್ರ ಬೆಳೆಯುವುದಿಲ್ಲ ಎಂದು ಕಾಯ್ರಕಮದಲ್ಲಿ ಉಪಸ್ಥಿತರಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು.

ಜನರಿಗಾಗಿ ಒಳ್ಳೆಯ ಕಾರ್ಯವನ್ನು ಮಾಡುತ್ತಿರುವ ಸಂಸ್ಥೆಗೆ ಅಗತ್ಯ ಸಹಕಾರ ನೀಡುವ ಮೂಲಕ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತನಾಡಿ, ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್‌ನಿಂದ ರಾಜ್ಯದ ಬೇಡಿಕೆಯಲ್ಲಿ ಶೇ 40ರಷ್ಟು ವಿದ್ಯುತ್‌ನ್ನು ಪೂರೈಸಲಾಗುತ್ತಿದ್ದು, ಈ ಘಟಕಗಳಿಂದ ಪರಿಸರ ಹಾಳಾಗಿ ಜನರು ಅನಾರೋಗ್ಯ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯುತ್ ಘಟಕಗಳ ವ್ಯಾಪ್ತಿಯಲ್ಲಿ ಲಕ್ಷಾಂತರ ಗಿಡಗಳನ್ನು ಬೆಳೆಸಲಾಗಿದೆ ಎಂಬ ವರದಿಯನ್ನು ನೀಡಲಾಗುತ್ತದೆ. ಆದರೆ, ಇದು ವಾಸ್ತವದಿಂದ ಕೂಡಿದ್ದರೆ ಈಗಾಗಲೇ ಹಸಿರೀಕರಣ ನೋಡಬಹುದಾಗಿತ್ತು ಎಂದ ಅವರು ಅಧಿಕಾರಿಗಳೊಂದಿಗೆ ಗಿಡಗಳನ್ನು ಬೆಳೆಸಿರುವ ಸ್ಥಳಗಳಿಗೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದರು.

ಶಿಲ್ಪಾ ಮೆಡಿಕೇರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ ಬುತಡ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿಯನ್ನು ನೀಡುತ್ತಾರೆ. ಆದರೆ, ಆರೋಗ್ಯವಿಲ್ಲದಿದ್ದರೆ ಆಸ್ತಿಯಿಂದ ಯಾವುದೇ ಪ್ರಯೋಜನವಿಲ್ಲ ಆದ್ದರಿಂದ ಮುಂದಿನ ಮಕ್ಕಳಿಗೆ ಆಸ್ತಿಗಿಂತ ಪರಿಸರ ಕಲ್ಪಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಪ್ರಜಾಪಿತ ಈಶ್ವರಿಯ ವಿದ್ಯಾಲಯ ಸಂಚಾಲಕಿ ಸ್ಮಿತಾ ಮಾತನಾಡಿದರು.

ಗ್ರೀನ್ ರಾಯಚೂರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು, ಸಿ.ವಿ.ಪಾಟೀಲ, ಲಾಲಜಿ ಪಟೇಲ್, ಸಂಸ್ಥೆಯ ಅಧ್ಯಕ್ಷೆ ಸರಸ್ವತಿ ಕಿಲಕಿಲೆ, ಮಹಮ್ಮದ ಶಬ್ಬೀರ್, ಶಿವಶಂಕರ, ರಾಜೇಂದ್ರ ಶಿವಾಳೆ ಇದ್ದರು.

ಗ್ರೀನ್ ರಾಯಚೂರು ಸಂಸ್ಥೆಯ ಪರಿಸರದ ಜಾಗೃತಿಗಾಗಿ ನಡೆಸುತ್ತಿರುವ ಕಾರ್ಯಕ್ಕೆ ನಗರದ ಜನರು ಬೆಂಬಲಿಸಬೇಕು.
- ಡಾ.ಶಿವರಾಜ ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT