ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್‌, ಬಿಜೆಪಿ ಬಂಡವಾಳಶಾಹಿ ಪರ’

ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)ದಿಂದ ಪ್ರತಿಭಟನೆ
Last Updated 8 ಫೆಬ್ರುವರಿ 2020, 14:53 IST
ಅಕ್ಷರ ಗಾತ್ರ

ರಾಯಚೂರು: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಎರಡು ಬಂಡವಾಳಶಾಹಿಗಳ ಸೇವಕ ಪಕ್ಷಗಳಾಗಿವೆ. ಈ ಪಕ್ಷಗಳಿಂದ ಜನರು ತಮ್ಮ ಪರವಾದ ನೀತಿಗಳು ಜಾರಿಗೆ ಬರುತ್ತವೆ ಎಂದು ಕಾದುಕುಳಿತುಕೊಳ್ಳುವ ಕಾಲ ಇದಲ್ಲ ಎಂದು ಎಸ್‌ಯುಸಿಐ(ಸಿ) ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಎನ್.ಎಸ್.ವೀರೇಶ ಹೇಳಿದರು.

ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆಯಿಂದ ಆರಂಭಿಸಿರುವ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಹಾಗೂ ಎಸ್‌ಯುಸಿಐ(ಕಮ್ಯುನಿಸ್ಟ್)ನಿಂದ ಬೆಂಬಲಿಸಿ ಶನಿವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಅಚ್ಛೇದಿನ್ ತರುತ್ತೇನೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಆರು ವರ್ಷಗಳಾದರೂ ಕೊಟ್ಟಿರುವ ಭರವಸೆಯನ್ನು ಈಡೇರಿಸಿಲ್ಲ. ಮತ ಕೊಟ್ಟಿರುವ ಜನರನ್ನು ಬಿಟ್ಟು ಬಂಡವಾಳಶಾಹಿಗಳಾದ ಅಂಬಾನಿ, ಅದಾನಿ ಸೇವೆ ಮಾಡಲು ಟೊಂಕಕಟ್ಟಿ ನಿಂತಿದೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಗಂಭಿರವಾಗಿದೆ. ನಿರುದ್ಯೋಗದಿಂದ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ ಎಂದರು.

ರೈತ-ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನರ ದಿಕ್ಕು ತಪ್ಪಿಸುವ ಹುನ್ನಾರದಲ್ಲಿ ತೊಡಗಿದೆ. ಆದ್ದರಿಂದಲೇ ಜನರನ್ನು ಧರ್ಮದ ಆಧಾರದಲ್ಲಿ ಒಡೆಯುವ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕಾಯ್ದೆಗಳನ್ನು ಜಾರಿಗೆ ತಂದಿದೆ. ಆ ಮೂಲಕ ತನ್ನ ಕೋಮುವಾದಿ ಅಜೆಂಡಾ, ಅಷ್ಟೇ ಅಲ್ಲ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಪಿತೂರಿ ನಡೆಸಿದೆ. ಈ ನೀತಿ ಜನರ ಐಕ್ಯತೆಯನ್ನಷ್ಟೇ ಅಲ್ಲದೇ ಸ್ವಾತಂತ್ರ್ಯ ನಂತರ ಸಾಧಿಸಲಾದ ದೇಶದ ಆತ್ಮವಾದ ಧರ್ಮನಿರಪೇಕ್ಷ ತತ್ವಕ್ಕೆ ಕೊಡಲಿಪೆಟ್ಟು ನೀಡುತ್ತದೆ ಎಂದರು.

ದೇಶದ ಪರಿಸ್ಥಿತಿಗೆ ಆಳುವ ಬಂಡವಾಳಸಾಹಿ ವರ್ಗದ ಹಿತಾಸಕ್ತಿಯೇ ಕಾರಣವಾಗಿದ್ದು, ಜನರು ಎಚ್ಚೆತ್ತುಕೊಂಡು ಬಂಡವಾಳಶಾಹಿ ವ್ಯವಸ್ಥೆ ಕಿತ್ತುಹಾಕಲು ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಸಮಿತಿ ಸದಸ್ಯ ಚನ್ನಬಸವ ಜಾನೇಕಲ್ ಮಾತನಾಡಿ, ಸಂವಿಧಾನ ಹಕ್ಕುಗಳ ನಾಗರಿಕ ಸಮಿತಿಯ ಕರೆಯಂತೆ ಎಸ್‌ಯುಸಿಐ(ಸಿ) ವತಿಯಿಂದ ಧರಣಿ ನಡೆಸಲಾಗುತ್ತಿದೆ. ಬಡವರ-ಶೋಷಿತ ಜನರ ವಿರುದ್ಧವಾಗಿರುವ ಈ ಪೌರತ್ವ ಕಾಯ್ದೆಗಳನ್ನು ಮನುಷ್ಯರು ಎನ್ನುವ ಎಲ್ಲರೂ ಪ್ರತಿಭಟಿಸಬೇಕಾಗಿದೆ ಎಂದರು.

ಶಾಮಸುಂದರ್, ಮಹೇಶ್ ಚೀಕಲಪರ್ವಿ, ಮಲ್ಲನಗೌಡ, ಜಮಾಲುದ್ದಿನ್, ಸಲೀಂ, ನಿಸಾರ್ ಅಹಮದ್, ಚೋಟು ಬೈಯಾ, ನಾಗರಿಕ ಹಕ್ಕುಗಳ ಸಮಿತಿಯ ಸಂಚಾಲಕರಾದ ಖಾಜಾ ಅಸ್ಲಂ, ಮಾರೆಪ್ಪ, ಎಂ.ಆರ್.ಭೇರಿ, ಮಹ್ಮದ್ ಇಕ್ಬಾದ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಾಂಸ್ಕೃತಿಕ ತಂಡದ ಸದಸ್ಯರು ವಿವಿಧ ಕ್ರಾಂತಿಕಾರಿ ಹಾಡುಗಳನ್ನು ಹಾಡಿದರು. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆ ವಾಪಸಾಗಲಿ. ಕೊಮುವಾದಕ್ಕೆ ಧಿಕ್ಕಾರ, ಜನರ ಐಕ್ಯತೆ ಮರಿಯು ಕಾಯ್ದೆಗಳನ್ನು ಹಿಂಪಡೆಯಲಿ ಎಂದು ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT