ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಭೀತಿ: ರಾಯಚೂರಿನಲ್ಲಿ ಕಟ್ಟೆಚ್ಚರ

Last Updated 3 ಮಾರ್ಚ್ 2020, 13:34 IST
ಅಕ್ಷರ ಗಾತ್ರ

ರಾಯಚೂರು: ಕೊರೊನಾ ವೈರಸ್‌ ಭೀತಿ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಲಾಯಿತು.

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್‌ ಇರುವುದು ಸೋಮವಾರ ಪತ್ತೆಯಾಗಿದೆ. ರಾಯಚೂರು ಸಮೀಪದಲ್ಲಿಯೇ ಇರುವುದರಿಂದ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸುವುದು ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ಎಚ್‌. ಸಭೆಯಲ್ಲಿ ತಿಳಿಸಿದರು.

‘ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ವಿದೇಶಗಳಿಂದ ಬಂದಿರುವವರಲ್ಲಿ ಹಾಗೂ ತೆಲಂಗಾಣ, ಆಂಧ್ರಪ್ರದೇಶಗಳಿಂದ ವಾಹನಗಳಲ್ಲಿ ರಾಯಚೂರಿಗೆ ಬರುವವರಲ್ಲಿ ಜ್ವರ, ಕೆಮ್ಮಿನಂತಹ ರೋಗದ ಲಕ್ಷಣಗಳು ಕಂಡುಬಂದರೆ ಕೂಡಲೇ ತಪಾಸಣೆ ಮಾಡಲಾಗುವುದು. ಇದಕ್ಕಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ತಪಾಸಣೆ ಮಾಡುವುದಕ್ಕೆ ಕಿಟ್‌ಗಳು, ಮುಖದ ಗವುಸುಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ’ ಎಂದರು.

ರಿಮ್ಸ್ ಆಸ್ಪತ್ರೆಯ ಎರಡನೇ ಮಹಡಿ 242 ಕೋಣೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ. ಐದು ಹಾಸಿಗೆಯ ವಿಶೇಷ ವಾರ್ಡ್‌ನಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲಿ ಆಮ್ಲಜನಕ, ವೆಂಟಿಲೇಶನ್, ಮಾಸ್ಕ್, ಔಷಧಿ ವ್ಯವಸ್ಥೆ ಮಾಡಲಾಗಿದೆ. ನವೋದಯ ಮೆಡಿಕಲ್‌ ಕಾಲೇಜಿನಲ್ಲೂ ಪ್ರತ್ಯೇಕ ಹಾಸಿಗೆಗಳ ವ್ಯವಸಸ್ಥೆ ಎಂದು ತಿಳಿಸಿದರು.

ಕೊರೊನಾ ವೈರಸ್‌ ಸೋಂಕಿತ ರೋಗವಾಗಿದ್ದು, ಮುಖ್ಯವಾಗಿ ಇದರಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಜ್ವರ ಹಾಗೂ ಕೆಮ್ಮು ರೋಗದ ಲಕ್ಷಣಗಳು. ಮುನ್ನಚ್ಚರಿಕೆ ಕ್ರಮವಾಗಿ, ಸೋಂಕಿತರಿಂದ ದೂರ ಇರುವುದು, ಮನೆಯಲ್ಲಿ ಶಂಕಿತರು ಪ್ರತ್ಯೇಕವಾದ ಕೋಣೆಯಲ್ಲಿ ಇರಬೇಕು. ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕಾಗುತ್ತದೆ. ಮುಖ ಮತ್ತು ಕೈ ಗವುಸು ಹಾಕಿಕೊಳ್ಳಬೇಕು. ಮಾಂಸವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಮಾತನಾಡಿ, ‘ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ಬರುವವರನ್ನು ತಪಾಸಣೆ ಮಾಡಲು ಶಕ್ತಿನಗರ, ಸಿಂಗನೋಡಿ, ಯರಗೇರಾ ಚೆಕ್ ಪೋಸ್ಟ್‌, ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT