ಮಂಗಳವಾರ, ಡಿಸೆಂಬರ್ 1, 2020
18 °C
ದರ ಕುಸಿತದಿಂದ ಕಂಗಾಲಾದ ಭತ್ತ ಬೆಳೆದಿರುವ ರೈತರು

ಹತ್ತಿ ಇಳುವರಿ ಅರ್ಧದಷ್ಟು ಕುಂಠಿತ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಭತ್ತ, ಹತ್ತಿ ಹಾಗೂ ಸಜ್ಜೆ ಬೆಳೆಗಳ ಕೊಯ್ಲು ಆರಂಭವಾಗಿದೆ. ಹತ್ತಿ ಇಳುವರಿಯಲ್ಲಿ ಅರ್ಧದಷ್ಟು ಕುಂಠಿತವಾಗಿದೆ ಹಾಗೂ ಮಾರುಕಟ್ಟೆಯಲ್ಲೂ ದರ ಇಳಿಮುಖವಾಗಿದೆ.‌

ಪ್ರತಿ ಕ್ವಿಂಟಲ್‌ ಹತ್ತಿ ದರ ಸದ್ಯಕ್ಕೆ ₹ 5 ಸಾವಿರಕ್ಕೆ ತಲುಪಿದೆ. ಕಳೆದ ವರ್ಷ ಗರಿಷ್ಠ ₹ 5,800 ತನಕವೂ ದರ ಏರಿಕೆಯಾಗಿತ್ತು. ಇಳುವರಿ ಕುಂಠಿತವಾಗಿದ್ದರಿಂದ ನಷ್ಟ ಅನುಭವಿಸುತ್ತಿರುವ ರೈತರು ಮಾರುಕಟ್ಟೆಯಲ್ಲೂ ದರವಿಲ್ಲದೆ ಕಂಗಾಲಾಗಿದ್ದಾರೆ. ಮುಂಗಾರು ಆರಂಭದಲ್ಲಿ ಸಮರ್ಪಕ ಮಳೆಯಿಂದ ಸಮೃದ್ಧವಾಗಿ ಬೆಳೆದಿದ್ದ ಹತ್ತಿಯು, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಅತಿವೃಷ್ಟಿಯಿಂದ ಹಾಳಾಗಿದೆ. ಒಂದು ಎಕರೆಗೆ 10 ರಿಂದ 12 ಕ್ವಿಂಟಾಲ್‌ ಹತ್ತಿ ಇಳುವರಿ ಬರುತ್ತಿತ್ತು. ಈ ವರ್ಷ 5 ರಿಂದ 6 ಕ್ವಿಂಟಾಲ್‌ ಮಾತ್ರ ರೈತರ ಕೈಸೇರುತ್ತಿದೆ.

ಹತ್ತಿ ಬಿಡಿಸುವುದಕ್ಕೆ ಕಾರ್ಮಿಕರನ್ನು ತಂದುಕೊಳ್ಳಲು ರೈತರ ಸ್ಪರ್ಧೆ ನಡೆಸುವಂತಾಗಿದೆ. ಒಂದು ಕೆಜಿ ಹತ್ತಿ ಬಿಡಿಸಿದರೆ ₹ 6 ರಿಂದ ₹ 7 ಕೂಲಿಯನ್ನು ರೈತರು ಕೊಡುತ್ತಿದ್ದಾರೆ. ಬೆಳಿಗ್ಗೆ 8 ರಿಂದ ಹತ್ತಿ ಬಿಡಿಸುವ ಕೆಲಸ ಆರಂಭಿಸುತ್ತಿರುವ ಕೂಲಿಕಾರ್ಮಿಕರು ದಿನಕ್ಕೆ 800 ರಿಂದ 100 ಕೆಜಿಯಷ್ಟು ಹತ್ತಿ ಬಿಡಿಸುತ್ತಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಗಡಿಗ್ರಾಮಗಳಿಂದಲೂ ಕೂಲಿ ಕಾರ್ಮಿಕರು ರಾಯಚೂರಿಗೆ ಬರುತ್ತಿದ್ದಾರೆ. ಕೆಲವೆಡೆ ಶಾಲಾ ಮಕ್ಕಳು ಹತ್ತಿ ಬಿಡಿಸುವುದಕ್ಕೆ ಹೋಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬಾಲ ಕಾರ್ಮಿಕ ನಿರ್ಮೂಲನೆ ಮಂಡಳಿಯು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಪ್ರತಿದಿನ ವಿವಿಧ ತಾಲ್ಲೂಕುಗಳಲ್ಲಿ ಬಾಲಕಾರ್ಮಿಕರಾಗಿ ದುಡಿಯುವ ಮಕ್ಕಳನ್ನು ರಕ್ಷಿಸಲು ಕಾರ್ಯಾಚರಣೆ ಮಾಡುತ್ತಿದೆ.

ಭತ್ತಕ್ಕೆ ದರವಿಲ್ಲ: ಭತ್ತದ ಇಳುವರಿಯಲ್ಲಿ ಗಣನೀಯ ವ್ಯತ್ಯಾಸ ಆಗಿಲ್ಲ. ಪ್ರತಿ ಎಕರೆಗೆ 40 ಚೀಲ (ಒಂದು ಚೀಲ 80 ಕೆಜಿ) ಭತ್ತದ ಇಳುವರಿ ಬರುತ್ತಿತ್ತು. ಈ ಸಲ 30 ರಿಂದ 35 ಚೀಲ ಇಳುವರಿ ಬರುತ್ತಿದೆ. ಅತಿವೃಷ್ಟಿಯಿಂದಾಗಿ ನದಿತೀರದಲ್ಲಿ ಭತ್ತ ಬೆಳೆಹಾನಿಯಾಗಿದೆ. ಸದ್ಯಕ್ಕೆ ರಾಯಚೂರು, ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ ಭತ್ತದ ಕಟಾವು ಭರದಿಂದ ನಡೆಯುತ್ತಿದೆ. ಮಾನ್ವಿ, ಸಿಂಧನೂರು ತಾಲ್ಲೂಕುಗಳಲ್ಲಿ ಭಾಗಶಃ ಪ್ರದೇಶಗಳಲ್ಲಿ ಕೊಯ್ಲು ನಡೆಯುತ್ತಿದೆ.

ಭತ್ತದ ದರ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಪ್ರತಿ ಕ್ವಿಂಟಾಲ್‌ ಭತ್ತದ ದರ ಕಳೆದ ವರ್ಷ ಗರಿಷ್ಠ ₹ 2,200 ರವರೆಗೂ ತಲುಪಿತ್ತು. ಇದೀಗ ಪ್ರತಿ ಕ್ವಿಂಟಲ್‌ ಭತ್ತವು ₹ 1,500 ಕ್ಕೆ ಮಾರಾಟ ಆಗುತ್ತಿದೆ. ಕೇಂದ್ರ ಸರ್ಕಾರವು ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆ ದರ ಬಹಳ ಕಡಿಮೆ ಇದೆ. ಸಾಮಾನ್ಯ ಭತ್ತಕ್ಕೆ ₹ 1,868 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುವುದಕ್ಕೆ ಇನ್ನೂ ಕೇಂದ್ರವು ಕ್ರಮ ಕೈಗೊಂಡಿಲ್ಲ.

ಭತ್ತ ಕಟಾವು ಮಾಡುವ ಯಂತ್ರಕ್ಕೆ ಪ್ರತಿ ಗಂಟೆಗೆ ₹ 2 ಸಾವಿರ ಬಾಡಿಗೆ ನಿಗದಿಗೊಳಿಸಿ ಜಿಲ್ಲಾಡಳಿತ ಆದೇಶ ನೀಡಿದೆ. ಆದರೆ, ಕೊಯ್ಲು ಮಾಡಿಸಲು ರೈತರಲ್ಲಿಯೇ ಸ್ಪರ್ಧೆ ಏರ್ಪಡುತ್ತಿದ್ದರಿಂದ ಪ್ರತಿ ಗಂಟೆಗೆ ಕೊಡುವ ಬಾಡಿಗೆ ಕಡಿಮೆ ಆಗುತ್ತಿಲ್ಲ . ಜಿಲ್ಲಾಧಿಕಾರಿ ಆದೇಶ ಪಾಲನೆ ಆಗುತ್ತಿಲ್ಲ. ಖಾಸಗಿ ಯಂತ್ರದ ಮಾಲೀಕರಿಗೆ ಆಮಿಷ ತೋರಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಕೆಲವು ಕಡೆಗಳಲ್ಲಿ ಖಾಸಗಿ ಕಟಾವು ಯಂತ್ರದಾರರು ಆದೇಶ ಪಾಲನೆ ಮಾಡದೆ, ಹೆಚ್ಚಿನದ ದರದ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.