ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮುನ್ನಚ್ಚರಿಕೆ: ಶಾಲಾ, ಕಾಲೇಜು ಬಂದ್‌

ಚಿತ್ರಮಂದಿರ, ಶಾಪಿಂಗ್‌ ಸೆಂಟರ್‌ ಬಂದ್‌ ಮಾಡಿಸಿದ ಅಧಿಕಾರಿಗಳು
Last Updated 14 ಮಾರ್ಚ್ 2020, 14:45 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಾದ್ಯಂತ ಎಲ್ಲ ಶಾಲಾ, ಕಾಲೇಜುಗಳು, ಚಿತ್ರಮಂದಿರಗಳು, ಮಾಲ್‌ಗಳನ್ನು ಬಂದ್‌ ಮಾಡಲಾಗಿದೆ. ಈ ವಾರ ಆಯೋಜಿಸಲಾಗುತ್ತಿದ್ದ ಎಲ್ಲ ಕಾರ್ಯಕ್ರಮಗಳನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ.

ಮೊದಲೇ ನಿಗದಿಯಾಗಿದ್ದ ನಾಮಕರಣ ಕಾರ್ಯಕ್ರಮಗಳು ಹಾಗೂ ಮದುವೆ ಪೂರ್ವ ದೇವರ ಕಾರ್ಯಗಳನ್ನು ಅನಿವಾರ್ಯವಾಗಿ ಕುಟುಂಬದ ಸದಸ್ಯರಷ್ಟೆ ಆಚರಿಸಿಕೊಡರು. ಮಾರುಕಟ್ಟೆಯಲ್ಲಿ ಜನ ಸಂಚಾರ ಎಂದಿನಂತೆ ಇತ್ತಾದರೂ ವ್ಯಾಪಾರ ನಿರೀಕ್ಷಿತ ಪ್ರಮಾಣದಲ್ಲಿ ನಡೆಯಲಿಲ್ಲ. ಪ್ರತಿದಿನ ಜನದಟ್ಟಣೆಯಿಂದ ಕೂಡಿರುತ್ತಿದ್ದ ರೈಲ್ವೆ ನಿಲ್ದಾಣ ಕೂಡಾ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡುಬಂತು.

ವೃತ್ತಿಪರ ಕಾಲೇಜು ಬಂದ್‌

ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ವೃತ್ತಿಪರ ಕಾಲೇಜುಗಳಿಗೂ ರಜೆ ಘೋಷಿಸಿದ್ದರಿಂದ ಅನೇಕ ವಿದ್ಯಾರ್ಥಿಗಳು ಸ್ವಗ್ರಾಮಕ್ಕೆ ತೆರಳುತ್ತಿರುವುದು ಕಂಡುಬಂತು. ವೈದ್ಯಕೀಯ ವಿದ್ಯಾರ್ಥಿಗಳು ಮಾತ್ರ ಹಾಸ್ಟೇಲುಗಳಲ್ಲಿಯೇ ಉಳಿದುಕೊಳ್ಳಲು ಅವಕಾಶ ಮಾಡುವಂತೆ ರಾಜೀವ್‌ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಸೂಚನೆ ನೀಡಿದೆ. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಜೆ ಅನ್ವಯಿಸಿಲ್ಲ.

ಎಲ್ಲೆಡೆಯಲ್ಲೂ ಕೊರೊನಾ ಚರ್ಚೆ

ಎಲ್ಲೆಡೆಯಲ್ಲೂ ಜನರು ಕೊರೊನಾ ವೈರಸ್‌ ಕುರಿತಾದ ಚರ್ಚೆಯಲ್ಲಿ ತೊಡಗಿದ್ದರು. ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಪರಸ್ಪರ ಸಲಹೆ ಪಡೆಯುತ್ತಿರುವುದು ಸಾಮಾನ್ಯವಾಗಿತ್ತು. ಗ್ರಾಮೀಣ ಭಾಗಗಳಿಂದ ನಗರಕ್ಕೆ ಬರುತ್ತಿದ್ದ ಜನರು ಮುಖಗವುಸು ಧರಿಸುವುದನ್ನು ನಿರಾಕಿಸಿದ್ದರು.

27 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನಲ್ಲಿ ಕೊರೊನಾ ವೈರಸ್‌ ಬದುಕುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ರಾಯಚೂರಿನಲ್ಲಿ 35 ಕ್ಕಿಂತ ತಾಪಮಾನ ಇರುವುದರಿಂದ ಕೊರೊನಾ ವೈರಸ್‌ ಅಸ್ತಿತ್ವ ಉಳಿದುಕೊಳ್ಳಲು ಸಾಧ್ಯವಿಲ್ಲ ಎನ್ನುವ ಸಮರ್ಥನೆಯ ಮಾತುಗಳು ಜನರಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿವೆ.

‘ತಾಪಮಾನ ಇದ್ದರೂ ಮುನ್ನಚ್ಚರಿಕೆ ಕ್ರಮಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಕಲಬುರ್ಗಿಯಲ್ಲೂ ತಾಪಮಾನ ರಾಯಚೂರಿಗಿಂತಲೂ ಅಧಿಕವಾಗಿದೆ. ಶುಚಿತ್ವ ಕಾಪಾಡಿಕೊಳ್ಳಲು ಮೇಲಿಂದ ಮೇಲೆ ಕೈ ತೊಳೆದುಕೊಳ್ಳಬೇಕು. ಅನಗತ್ಯವಾಗಿ ಸಂಚಾರ ಹೋಗಬಾರದು’ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೀದಿ ವ್ಯಾಪಾರಿಗಳಿಗೆ ಜಾಗೃತಿ

ರಾಯಚೂರಿನ ಬೀದಿ ವ್ಯಾಪಾರಿಗಳಿಗೆ ಕೊರೊನಾ ವೈರಸ್‌ ಕುರಿತು ಜಾಗೃತಿ ಮೂಡಿಸಲಾಯಿತು. ಸರ್ಕಾರಿ ಅಧಿಕಾರಿಗಳು ಕರಪತ್ರಗಳನ್ನು ವಿತರಿಸಿ, ಶುಚಿತ್ವ ಕಾಪಾಡಲು ಸೂಚನೆ ನೀಡಿದರು. ಮೇಲಿಂದ ಮೇಲೆ ಕೈ ತೊಳೆದುಕೊಳ್ಳುವಂತೆ ಹಾಗೂ ಕಡ್ಡಾಯವಾಗಿ ಮುಖಗವುಸು ಧರಿಸಿಕೊಳ್ಳುವಂತೆ ತಿಳಿವಳಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT