ಮಂಗಳವಾರ, ಜೂನ್ 28, 2022
25 °C
ತರಬೇತಿ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ ಹೇಳಿಕೆ

ಸೋಂಕು ದೃಢ ಪ್ರಮಾಣ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಸಾರ್ವಜನಿಕರ ಸಹಕಾರ ಹಾಗೂ ಜಿಲ್ಲಾಡಳಿತದ ಕಠಿಣ ಕ್ರಮಗಳಿಂದಾಗಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಇಳಿಮುಖವಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೋವಿಡ್ ಆಸ್ಪತ್ರೆಗಳ ಹಾಸಿಗೆಗಳ ನಿರ್ವಹಣಾ ವ್ಯವಸ್ಥೆ (ಸಿಎಚ್‍ಬಿಎಂಎಸ್) ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ ಎರಡನೇ ಅಲೆಯ ಪ್ರಭಾವ ಹೆಚ್ಚು ಕಂಡುಬಂದಿತ್ತು. ಅದನ್ನು ಹತೋಟಿಗೆ ತರುವಲ್ಲಿ ತಾಲ್ಲೂಕು ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಜಿಲ್ಲಾಧಿಕಾರಿ ಅವರ ನಿರ್ದೇಶನದ ಮೇರೆಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ, ವಿಡಿಯೊ ಸಂವಾದದ ಮೂಲಕ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿ, ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸೂಚನೆಗಳನ್ನು ನೀಡಲಾಯಿತು. ನಿಯಮಗಳ ಪಾಲನೆ ಕುರಿತು ಗಮನಹರಿಸಲಾಯಿತು. ಪರಿಣಾಮ ಸೋಂಕು ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.

ಸೋಮವಾರದಿಂದ ಜಿಲ್ಲಾಡಳಿತದ ನಡೆ-ಹಳ್ಳಿ ಕಡೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಜಿಲ್ಲೆಯ ಗ್ರಾಮಗಳಿಗೆ ಭೇಟಿ ನೀಡಿ, ಮನೆ ಮನೆ ಸಮೀಕ್ಷೆ ಕಾರ್ಯವನ್ನು ಕೈಗೊಂಡು ಸೋಂಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಸೋಂಕಿತರು ಕಂಡುಬಂದಲ್ಲಿ ಕೂಡಲೇ ಅವರ ಮನವೊಲಿಸಿ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗುತ್ತಿದೆ. ಅದರೊಂದಿಗೆ ಔಷಧಿ ಕಿಟ್ ವಿತರಣೆ ಕಾರ್ಯ ನಡೆಯುತ್ತಿದೆ ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರ ಬಾಬು ಮಾತನಾಡಿ,‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಮಾಣ ಇಳಿಕೆ ಕಂಡಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತ ವ್ಯಕ್ತಿಗೆ ಬೇಕಾದ ಹಾಸಿಗೆ ಮುಂಗಡವಾಗಿ ಕಾಯ್ದಿರಿಸಿಕೊಳ್ಳಲು ಸಿಎಚ್‌ಬಿಎಂಎಸ್ ಆ್ಯಪ್‍ನಲ್ಲಿ ಹೆಸರು ನೋಂದಾಯಿಸಕೊಳ್ಳಬೇಕು. ಐಸಿಯು, ಆಮ್ಲಜನಕ, ವೆಂಟಿಲೇಟರ್ ಹಾಸಿಗೆ ಲಭ್ಯವಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಡಿಎಸ್‍ಒ ಡಾ. ನಾಗರಾಜ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ಡಾ.ನಾಗರಾಜ ಭಾಲ್ಕಿ ಇದ್ದರು.

ವಕೀಲರಿಗೆ ಶ್ರದ್ಧಾಂಜಲಿ

ರಾಯಚೂರು: ಜಿಲ್ಲೆಯ ಕೆಲವು ವಕೀಲರು, ನ್ಯಾಯಾಂಗ ನೌಕರರು ಕೋವಿಡ್‌ನಿಂದ ಮೃತಪಟ್ಟಿದ್ದು, ಅವರ ಸೇವೆ ಸದಾ ಸ್ಮರಣೀಯ. ಮೃತರ ಕುಟುಂಬದೊಂದಿಗೆ ನಾವು ಇರುತ್ತೇವೆ. ಮುಂಬರುವ ದಿನಗಳಲ್ಲಿ ನಾವು ಕೊರೊನಾ ವಾರಿಯರ್ಸ್‍ಗಳಾಗಿ ಕರ್ತವ್ಯ ನಿರ್ವಹಿಸಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ನ್ಯಾಯಾಲದ ಕಾರ್ಯ ಕಲಾಪದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಸತ್ರ ಮತ್ತು ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಆರ್.ನಾಗರಾಜ ತಿಳಿಸಿದರು.

ಕೊರೊನಾ ಸೋಂಕಿನಿಂದ ಮೃತಪಟ್ಟ ವಕೀಲರು ಹಾಗೂ ನ್ಯಾಯಾಂಗ ಇಲಾಖೆ ನೌಕರರ ಸ್ಮರಣಾರ್ಥ ಜಿಲ್ಲಾ ನ್ಯಾಯಾಲಯದ ಸಂಕಿರ್ಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಅವರು ಮೃತಪಟ್ಟ ವಕೀಲರ ವಿವರ ನೀಡಿದರು. ನ್ಯಾಯಾಂಗ ಇಲಾಖೆಯ ನೌಕರ ಬಸವರಾಜ ಶಿವಂಗಿ ಅವರು ಮೃತಪಟ್ಟ ನೌಕರರ ಕುರಿತು ಮಾತನಾಡಿದರು.

ಈ ವೇಳೆ ಮೌನ ಆಚರಣೆ ಮಾಡಲಾಯಿತು. ನ್ಯಾಯಾಧೀಶರಾದ ಹೇಮ ಪಸ್ತಪೂರ್, ಈಶ್ವರಪ್ಪ, ನರಸಿಂಹಮೂರ್ತಿ, ಅವಿನಾಶ ಘಾಳೆ, ಸುರೇಶ್ ವಾಗಣ್ಣನವರ್ ಹಾಗೂ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ ನಾಯಕ, ವಕೀಲ ನಾಗರಾಜ ಮಸ್ಕಿ ಸೇರಿ ವಕೀಲರು ,ಇಲಾಖೆ ನೌಕರರು ಇದ್ದರು.

ಆರೈಕೆ ಕೇಂದ್ರದಲ್ಲಿ ಸೀಮಂತ

ಮಾನ್ವಿ: ಇಲ್ಲಿನ ಕೋವಿಡ್ ಆರೈಕೆ ಕೇಂದ್ರದಲ್ಲಿ 10 ದಿನ ಇದ್ದು ಕೋವಿಡ್‌ನಿಂದ ಗುಣಮುಖರಾದ ಗರ್ಭಿಣಿ ಶರಣಮ್ಮ ಅವರಿಗೆ, ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಸೋಮವಾರ ಸೀಮಂತ ನೆರವೇರಿಸಿ ಬೀಳ್ಕೊಟ್ಟರು.

ತಾಲ್ಲೂಕಿನ ಉಟಕನೂರು ಗ್ರಾಮದ ಶರಣಮ್ಮ ಅವರಿಗೆ ಕೋವಿಡ್‌ ದೃಢಪಟ್ಟಿತ್ತು. ಅವರನ್ನು ಈ ಆರೈಕೆ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯ ಸಲಹೆ, ಸೂಚನೆಗಳನ್ನು ಅವರು ಕಟ್ಟುನಿಟ್ಟಾಗಿ ಪಾಲಿಸಿದರು. ಪತಿ ಭೀಮಣ್ಣ ಅವರಿಗೆ ಸೋಂಕು ತಗುಲಿರಲಿಲ್ಲ. ಆದರೂ ಸಹ ಅವರು ಆರೈಕೆ ಕೇಂದ್ರದಲ್ಲಿದ್ದು ಪತ್ನಿಯ ಕಾಳಜಿವಹಿಸಿದ್ದರು.

ಕೋವಿಡ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿ ಸೋಮವಾರ ಅವರು ಸ್ವಗ್ರಾಮಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಆಗ ಕೋವಿಡ್ ಆರೈಕೆ ಕೇಂದ್ರದಲ್ಲಿರುವ ವೈದ್ಯಾಧಿಕಾರಿ ಡಾ.ಅಂಬಿಕಾ ಮಧುಸೂದನ್ ಹಾಗೂ ಶುಶ್ರೂಷಕಿಯರು ಶರಣಮ್ಮಗೆ ಸೀಮಂತ ಕಾರ್ಯಕ್ರಮ ನೆರವೇರಿಸಿ ಶುಭ ಹಾರೈಸಿದರು.

ಕೋವಿಡ್ ಆರೈಕೆ ಕೇಂದ್ರದ ನೋಡಲ್ ಅಧಿಕಾರಿ ಚಂದ್ರಶೇಖರ, ಶುಶ್ರೂಷಕಿಯರಾದ ಲತಾದೇವಿ, ಶ್ರುತಿ, ನೇತ್ರಾವತಿ, ಸಿಬ್ಬಂದಿಯಾದ ವೆಂಕಟೇಶ, ಹುಚ್ಚಣ್ಣ, ಸುಂದರರಾಜ್, ರೇವಣಸಿದ್ದ, ವೀರೇಶ, ಬೀರಲಿಂಗಪ್ಪ ಹಾಗೂ ಮಾರುತಿ ಇದ್ದರು.

ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷೆ

ಮಸ್ಕಿ: ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದೆ. ಮಂಗಳವಾರ ಐವರಿಗೆ ಕೋವಿಡ್ ದೃಢಪಟ್ಟಿದೆ.

‘ತಾಲ್ಲೂಕು ಆಡಳಿತ ಲಾಕ್‌ಡೌನ್‌ ಅನ್ನು ಸರಿಯಾಗಿ ಅನುಷ್ಠಾನ ಮಾಡಿದ್ದರಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು’ ಎಂದು ತಹಶೀಲ್ದಾರ್ ಬಲರಾಮ ಕಟ್ಟಿಮನಿ ತಿಳಿಸಿದ್ದಾರೆ.

‘ಆರೋಗ್ಯ ಇಲಾಖೆ ಕಾರ್ಯಕರ್ತರು ಪಟ್ಟಣದಲ್ಲಿ ಮನೆ ಮನೆಗೆ ತೆರಳಿ‌ ಮೂಗು ಹಾಗೂ ಗಂಟಲು ದ್ರವ ಮಾದರಿ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸಹಕಾರ ನೀಡುತ್ತಿದ್ದಾರೆ. ಜನರ ಮನವೊಲಿಸಿ ಅವರಿಂದ ಮೂಗು ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುತ್ತಿದೆ’ ಎಂದು ವೈದ್ಯಾಧಿಕಾರಿ ಡಾ. ಮೌನೇಶ ತಿಳಿಸಿದ್ದಾರೆ.

‘ಪಟ್ಟಣದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಆದರೂ ಜನರು‌ ಮೈಮರೆಯಬಾರದು. ಕೋವಿಡ್‌ನ ಸಂಪೂರ್ಣ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಪರೀಕ್ಷೆಗೆ ಒಳಗಾಗುವುದು ಅವಶ್ಯ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು