ಬುಧವಾರ, ಜೂಲೈ 8, 2020
28 °C
ಕೋವಿಡ್‌ ದೃಢವಾದವರ ಸಂಖ್ಯೆ 72 ಕ್ಕೆ ಏರಿಕೆ

ರಾಯಚೂರಿನಲ್ಲಿ ‘ಸೋಂಕು’ ಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಒಪೆಕ್‌ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಇರಿಸಿದ್ದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಪಿ–2423 (ವಯಸ್ಸು 39) ವ್ಯಕ್ತಿಗೆ ಕೋವಿಡ್‌ ದೃಢವಾಗಿದೆ. ಈ ಮಧ್ಯೆ ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡು ರಾಯಚೂರು ನಗರದ ವಾರ್ಡ್‌ ಸಂಖ್ಯೆ–4 ಗೋಲ್‌ ಮಾರ್ಕೆಟ್‌ ಪ್ರದೇಶದಲ್ಲಿದ್ದ ಮನೆಯಲ್ಲಿ ಉಳಿದು ಹೋಗಿರುವುದು ಹೊಸ ಸಂಚಲನ ಸೃಷ್ಟಿಸಿದೆ.

ಮಹಾರಾಷ್ಟ್ರದ ಮುಂಬೈನಿಂದ ಹಿಂತಿರುಗಿದ್ದ ವ್ಯಕ್ತಿಗೆ ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿತ್ತು. ಚೆಕ್‌ಪೋಸ್ಟ್‌ನಿಂದ ನೇರವಾಗಿ ಆಸ್ಪತ್ರೆಗೆ ಕಳುಹಿಸಿ, ಗಂಟಲು ಮಾದರಿ ದ್ರುವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ಬರಲು ಕೆಲವು ದಿನಗಳಾಗಿದ್ದು, ಈಗ ಪಾಸಿಟಿವ್‌ ವರದಿ ಬಂದಿದೆ. ಕ್ವಾರಂಟೈನ್‌ನಿಂದ ಹೊರಬಂದು ಆತ ಮನೆಯಲ್ಲಿ ಉಳಿದಿದ್ದರಿಂದ ಆತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಪತ್ನಿ, ತಾಯಿ, ಪುತ್ರಿ, ಆತನಿಗೆ ಹೇರ್‌ ಕಟಿಂಗ್‌ ಮಾಡಿದ್ದ ವ್ಯಕ್ತಿಯು ಸೇರಿದಂತೆ ಆರು ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಕರೆದೊಯ್ಯಲಾಗಿದೆ.

ಸೋಂಕಿತ ವ್ಯಕ್ತಿಯು ಸಂಚರಿಸಿದ ಗೋಲ್‌ ಮಾರ್ಕೆಟ್‌ ಪ್ರದೇಶವನ್ನು ಸೀಜ್‌ ಮಾಡಲಾಗಿದ್ದು, ಪೊಲೀಸರನ್ನು ಕಾವಲಿಗೆ ನೇಮಿಸಲಾಗಿದೆ. ಮಾರ್ಗದುದ್ದಕ್ಕೂ ರಾಸಾಯನಿಕ ಸಿಂಪರಣೆ ಮಾಡಲಾಗುತ್ತಿದೆ. ಜನರು ಮನೆಗಳಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರದಿಂದ ಹಿಂತಿರುಗಿದವರಲ್ಲಿ ಕೊರೊನಾ ಸೋಂಕು ದೃಢವಾಗುವ ಪ್ರಕರಣಗಳು ಮುಂದುವರಿದಿವೆ. ರಾಯಚೂರು ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆಯು ಒಟ್ಟು 18 ಕ್ಕೆ ಏರಿಕೆಯಾಗಿದೆ.

ಕಠಿಣ ಕಾನೂನು ಕ್ರಮ: ಜಿಲ್ಲೆಯಲ್ಲಿ ಗೃಹ ಕ್ವಾರೆಂಟೈನ್‌ನಲ್ಲಿರುವ ವ್ಯಕ್ತಿಗಳು ಮನೆಗಳಿಂದ ಹೊರಗಡೆ ಬಂದು ಕ್ವಾರೆಂಟೈನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಮೊದಲನೇ ಬಾರಿ ಗೃಹ ಕ್ವಾರೆಂಟೈನ್ ಉಲ್ಲಂಘಿಸಿದವರಿಗೆ ದೂರವಾಣಿ ಸಂದೇಶದ ಮೂಲಕ ಎಚ್ಚರಿಕೆ ನೀಡಲಾಗುವುದು. ಎರಡನೇ ಬಾರಿ ಉಲ್ಲಂಘಿಸಿದ್ದಲ್ಲಿ ಅವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರೆಂಟೈನ್‌ಗೆ ದಾಖಲಿಸಲಾಗುವುದು. ಈ ಎರಡು ಅಂಶಗಳಿಗೆ ಅಡ್ಡಿ ಪಡಿಸುವವರ ವಿರುದ್ದ ವಿಪತ್ತು ನಿರ್ವಹಣೆ ಕಾಯ್ದೆ 2005ರ 34(ಎಂ) ಭಾರತ ದಂಡ ಸಂಹಿತೆ 1860 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್-19 ನಿಯಂತ್ರಣ ನಿಯಮಾವಳಿಗಳು 2020 ರನ್ವಯ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಕ್ವಾರೆಂಟೈನ್ ವ್ಯಕ್ತಿಗಳ ಸಂಪರ್ಕ ಮತ್ತು ನಿಖರ ಮಾಹಿತಿಯನ್ನು ಸಂಬಂಧಪಟ್ಟ ತಾಲೂಕು ಅಧಿಕಾರಿಗಳು ಕಲೆ ಹಾಕಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು