ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಪ್ಯ ಪಿಂಚಣಿಯಿಂದ ಸಾಮಾಜಿಕ ಭದ್ರತೆ: ನಾಜಿಯಾ ಸುಲ್ತಾನ

ಕಾರ್ಮಿಕ ಅಧಿಕಾರಿ ನೇತೃತ್ವದಲ್ಲಿ ಜಾಗೃತಿ ಜಾಥಾ
Last Updated 28 ಫೆಬ್ರುವರಿ 2021, 6:10 IST
ಅಕ್ಷರ ಗಾತ್ರ

ಸಿಂಧನೂರು: ‘ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಪಿಂಚಣಿ ಸೌಲಭ್ಯ ಒದಗಿಸುವ ಮೂಲಕ ಸಾಮಾಜಿಕ ಭದ್ರತೆ ನೀಡಲು ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‍–ಧನ್’ ಯೋಜನೆ ಜಾರಿಗೆ ತರಲಾಗಿದೆ. ಕಾರ್ಮಿಕರು ಹೆಸರು ನೋಂದಾಯಿಸಿಕೊಂಡು ಸದುಪಯೋಗ ಪಡೆಯಬೇಕು’ ಎಂದು ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ನಾಜಿಯಾ ಸುಲ್ತಾನ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು,‘ಭಾರತ ದೇಶದ ಅರ್ಧದಷ್ಟು ಆದಾಯ ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಈ ಯೋಜನೆಯಲ್ಲಿ 18 ರಿಂದ 40 ವರ್ಷದೊಳಗಿನ ಕಾರ್ಮಿಕರು ತಮ್ಮ ವಯಸ್ಸಿಗನುಗುಣವಾಗಿ ಕಂತು ತುಂಬಿದರೆ ಕೇಂದ್ರ ಸರ್ಕಾರ ಶೇ.50 ರಷ್ಟು ಹಣ ತುಂಬುತ್ತದೆ. ಕನಿಷ್ಠ ₹55 ಹಾಗೂ ಗರಿಷ್ಠ ₹200 ವಂತಿಕೆ ಇದೆ. 60 ವರ್ಷ ಪೂರ್ಣಗೊಂಡ ನಂತರ ವಂತಿಕೆದಾರರು ತಿಂಗಳಿಗೆ ₹3 ಸಾವಿರ ಪಿಂಚಣಿ ಪಡೆಯಲು ಅರ್ಹರಿರುತ್ತಾರೆ’ ಎಂದು ತಿಳಿಸಿದರು.

‘ಅಂಬೇಡ್ಕರ್‌ ಕಾರ್ಮಿಕ ಸಹಾಯಹಸ್ತ ಯೋಜನೆ ಅಡಿ ಹೆಸರು ನೋಂದಾಯಿಸಿಕೊಂಡು ಸ್ಮಾರ್ಡ್‌ಕಾರ್ಡ್‌ ಪಡೆದುಕೊಂಡರೆ ಕೊರೊನಾದಂಥ ವಿಪತ್ತು ಸಂದರ್ಭದಲ್ಲಿ ಕಾರ್ಮಿಕ ಮಂಡಳಿಯಿಂದ ಸಹಾಯಧನ ಹಾಗೂ ಇತರ ಸೌಲಭ್ಯಗಳು ದೊರೆಯುತ್ತವೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ. ಇನ್ನೂ ಖಾಸಗಿ ಮತ್ತು ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಅರ್ಜಿ ಸಲ್ಲಿಸಿದರೆ, ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ₹5 ಲಕ್ಷ ಪರಿಹಾರ, ಅಪಘಾತದಲ್ಲಿ ಶಾಶ್ವತ ದುರ್ಬಲತೆ ಹೊಂದಿದಾಗ ಫಲಾನುಭವಿಗೆ ₹2 ಲಕ್ಷವರೆಗೆ ಪರಿಹಾರ ನೀಡಲಾಗುತ್ತದೆ’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ, ಲಘು ಮೋಟಾರು ವಾಹನ ಚಾಲಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶಿವರಾಜ ಉಪ್ಪಲದೊಡ್ಡಿ, ಆಟೊ ಟೆಕ್ನಿಷಿಯನ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಷಿಮ್ ಅಲಿ ಜಾಗೀರದಾರ್, ಮೆಕ್ಯಾನಿಕ್ ಅಸೋಷಿಯೇಶನ್ ಅಧ್ಯಕ್ಷ ಅಬ್ದುಲ್ ರಹೀಮ್‍ಸಾಬ, ಟೇಲರ್ಸ್ ಯೂನಿಯನ್ ಅಧ್ಯಕ್ಷ ಮಹೆಬೂಬ್, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಮ್ಮ, ಖಜಾಂಚಿ ಶರಣಮ್ಮ, ಸಿಐಟಿಯು ಕಾರ್ಯದರ್ಶಿ ಯಂಕಪ್ಪ ಕೆಂಗಲ್, ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಮಹೆಬೂಬ್‍ಸಾಬ ಹಾಗೂ ಕಾರ್ಮಿಕ ಮುಖಂಡ ಚಾಂದಪಾಷಾ ಇದ್ದರು.

ಜಾಥಾ: ಇಲ್ಲಿನ ಇಂದಿರಾಗಾಂಧಿ ಸ್ತ್ರೀಶಕ್ತಿ ಒಕ್ಕೂಟದ ಆವರಣದಿಂದ ಗಾಂಧಿವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಜಿಯಾ ಸುಲ್ತಾನ್ ನೇತೃತ್ವದಲ್ಲಿ ಜಾಥಾ ನಡೆಸಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಬಳಿಕ ಲಘು ಮೋಟಾರು ವಾಹನ ಚಾಲಕರ ಕ್ಷೇಮಾಭಿವೃದ್ದಿ ಸಂಘದ ಕಚೇರಿಯಲ್ಲಿ ಸಭೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT