ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಬಾಕಿ ಕಾಮಗಾರಿ: ಕ್ರಮ ಜರುಗಿಸಲು ಡಿಸಿಗೆ ಸೂಚನೆ

ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ
Last Updated 30 ನವೆಂಬರ್ 2022, 13:50 IST
ಅಕ್ಷರ ಗಾತ್ರ

ರಾಯಚೂರು: ನಗರದ ಆರ್‌ಟಿಓ ಕಚೇರಿ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ–167) ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಮುಂದಾಗಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ ಹಾಗೂ ಕರಡಿ ಸಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕುರಿತು ಬುಧವಾರ ಪ್ರಸ್ತಾಪಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಕಚೇರಿಯ ಅಧಿಕಾರಿ ಮಾತನಾಡಿ, ಬಾಕಿ ಕಾಮಗಾರಿ ಸ್ಥಳದ ದಾಖಲಾತಿಗಳು ಮತ್ತು ಕಾನೂನಿಗೆ ಸಂಬಂಧಿಸಿದ ಮಾಹಿತಿಯನ್ನೆಲ್ಲ ಜಿಲ್ಲಾಧಿಕಾಗೆ ಸಲ್ಲಿಸಿ ಚರ್ಚಿಸಲಾಗುವುದು. ಸದ್ಯ ಅಸ್ತಿತ್ವದಲ್ಲಿರುವ ಹೆದ್ದಾರಿ ಮಾರ್ಗದ ಜಾಗ ಮತ್ತು ಹೆದ್ದಾರಿ ಮಾರ್ಗದ ಮೂಲ ದಾಖಲಾತಿಯಲ್ಲಿ ತೋರಿಸಿದ ಜಾಗಕ್ಕೂ ವ್ಯತ್ಯಾಸ ಕಂಡುಬಂದಿದೆ ಎಂದು ತಿಳಿಸಿದರು.

ಗಂಜ್‌ ವೃತ್ತದಿಂದ ಶಕ್ತನಗರದವರೆಗೂ ರಾಷ್ಟ್ರೀಯ ಹೆದ್ದಾರಿ ಬಾಕಿ ಕಾಮಗಾರಿಯನ್ನು ಇದೇ ಡಿಸೆಂಬರ್‌ 10 ರಿಂದ ಪ್ರಾರಂಭಿಸಲಾಗುವುದು. ದೇವುಸುಗೂರು ಸೇತುವೆ ಮೇಲೆ ನಿರಂತರ ವಾಹನಗಳ ಸಂಚರಿಸುವುದರಿಂದ ಡಾಂಬರ್‌ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ. 2023 ಮೇ ಒಳಗಾಗಿ ದೇವಸುಗೂರು ನೂತನ ಸೇತುವೆ ಕಾಮಗಾರಿ ಪೂರ್ಣ ಮಾಡಲಾಗುವುದು ಎಂದು ಹೇಳಿದರು.

ಆರು ಪಥದ ಹೆದ್ದಾರಿ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ. ಗಂಜಳ್ಳಿ, ಗಿಲ್ಲೇಸುಗೂರು, ಯರಗೇರಾ ಹಾಗೂ ತುಂಗಭದ್ರಾ ಗ್ರಾಮಗಳಲ್ಲಿ ಸರ್ವೇಗೆ ರೈತರು ಅಡ್ಡಿಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಹೆದ್ದಾರಿ ಸರ್ವೇ ಮಾಡುವುದಕ್ಕೆ ಯಾವ ಗ್ರಾಮದಲ್ಲೂ ರೈತರು ಅಡ್ಡಿಪಡಿಸುವುದಿಲ್ಲ. ಹೆದ್ದಾರಿ ಬರುತ್ತದೆ ಎಂದು ರೈತರು ಖುಷಿಯಿಂದ ಕಾಯುತ್ತಿದ್ದಾರೆ. ಬೆಳೆ ಹಾಳಾಗದಂತೆ ಸರ್ವೇ ಆರಂಭಿಸಬೇಕು. ಏನಾದರೂ ಸಮಸ್ಯೆ ಎದುರಾದರೆ ಜಿಲ್ಲಾಧಿಕಾರಿಗೆ ತಿಳಿಸಬೇಕು ಎಂದರು.

ಮುನಿರಾಬಾದ್‌–ಮಹೆಬೂಬನಗರ ರೈಲ್ವೆ ಯೋಜನೆ ತುಂಬಾ ಹಳೆಯ ಯೋಜನೆಯಾಗಿದ್ದು, ಬೇಗನೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸಂಸದರು ಸೂಚಿಸಿದರು.

ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ಮಾತನಾಡಿ, ‘ಇದುವರೆಗೂ ಭೂಸ್ವಾಧೀನ ನಿಧನವಾಗಿತ್ತು. ಈಗ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳು ತ್ವರಿತವಾಗಿ ಕಾರ್ಯ ಕೈಗೊಳ್ಳುತ್ತಿದ್ದು, ಆದಷ್ಟು ಬೇಗ ಭೂಸ್ವಾಧೀನ ಪೂರ್ಣ ಮಾಡುತ್ತಾರೆ ಎನ್ನುವ ವಿಶ್ವಾಸ ಬಂದಿದೆ‘ ಎಂದರು.

ತೋಟಗಾರಿಕೆ ಇಲಾಖೆಯಡಿ ರೈತರು ಯಾವ ರೀತಿ ಸೋಲಾರ್‌ ಅಳವಡಿಸಿಕೊಂಡಿದ್ದಾರೆ. ಎಷ್ಟು ಸಾಮರ್ಥ್ಯದವರೆಗೂ ಅಳವಡಿಸಿಕೊಳ್ಳಬಹುದು. ಸಹಾಯಧನ ಎಷ್ಟಿದೆ ಎಂಬುದರ ಸಂಪೂರ್ಣ ವಿವರವನ್ನು ಒದಗಿಸಬೇಕು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹ್ಮದ್‌ ಅಲಿ ಅವರಿಗೆ ಸೂಚಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT