ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕಾನೂನಿನಂತೆ ಮರಳು ಗಣಿಗಾರಿಕೆಗೆ ಅವಕಾಶ -ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ
Last Updated 2 ಆಗಸ್ಟ್ 2021, 14:44 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಹೊಸ ಮರಳುನೀತಿ ಅನ್ವಯ ಮರಳು ಗಣಿಗಾರಿಕೆ, ಮರಳು ದಾಸ್ತಾನು ಹಾಗೂ ಮರಳು ಸಾಗಾಣಿಕೆ ಚಟುವಟಿಕೆಗಳು ನಡೆಯಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಕಾನೂನು ಚೌಕಟ್ಟಿನಲ್ಲಿ ಮರುಳು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಧ ಇಲಾಖೆ ಅಧಿಕಾರಿಗಳಿಗೆ ಹಾಗೂ ಮರಳು ಗಣಿಗಾರಿಕೆ ಪರವಾನಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ ಒಟ್ಟು 21 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಮರಳು ಗಣಿಗಾರಿಕೆ ಮತ್ತು ಮರಳು ದಾಸ್ತಾನು, ಮರಳು ಸಾಗಣಿಕೆ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕ್ರಮ ವಹಿಸಬೇಕು. ಮರಳು ದಾಸ್ತಾನಿಗೆ ಬಳಕೆಮಾಡುವ ಭೂಮಿಯನ್ನು ಕೃಷಿಯೇತರ ಭೂಮಿ ಎಂದು ಪರಿವರ್ತಿಸಿಕೊಳ್ಳಬೇಕು. ಮರಳು ದಾಸ್ತಾನು ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ. ಮರಳುಗಣಿಗಾರಿಕೆ ಪರವಾನಿಗೆದಾರರು ಮರಳು ಸಾಗಾಣಿಕೆಯ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಕೆ ಮಾಡಿಕೊಳ್ಳಬೇಕು ಎಂದರು.

2020 ಹೊಸ ಮರಳು ನೀತಿ ಪ್ರಕಾರ ಗ್ರಾಮಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಭ್ಯವಿರುವ ಹಳ್ಳ, ನದಿ ಪಾತ್ರದಲ್ಲಿ ಮರಳು ನಿಕ್ಷೇಪಗಳನ್ನು ಗುರುತಿಸಬೇಕು. ಮರಳು ನಿಕ್ಷೇಪಗಳ ಗುರುತಿಸುವುದು, ತೆಗೆಯುವ ಮತ್ತು ವಿಲೇವಾರಿ ಮಾಡುವ ಸಂಪೂರ್ಣ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಯೂಸರ್‌ ನೇಮ್‌ ಮತ್ತು ಪಾಸ್ವರ್ಡ್ ಪಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮರಳು ನಿಕ್ಷೇಪಗಳನ್ನು ಮತ್ತು ಅಲ್ಲಿನ ಸಂಪನ್ಮೂಲಗಳನ್ನು ₹300 ರಾಜ್ಯಧನ ವಸೂಲಿ ಮಾಡಿ ಪಂಚಾಯಿತಿ ಅಭಿವೃದ್ಧಿಗೆ ಅನುದಾನ ಬಳಕೆ ಮಾಡುವಂತೆ ತಿಳಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮರಳು ನಿಕ್ಷೇಪಗಳನ್ನು ಗುರುತಿಸಲು ಮತ್ತು ಸಮಿತಿಯಲ್ಲಿರುವ ಸದಸ್ಯರಿಗೆ ತರಬೇತಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ವಿಶ್ವನಾಥ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ಅಮೃತ ನಿಕ್ಕಂ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಅಧಿಕಾರಿಯು ಗ್ರಾಮ ಪಂಚಾಯಿತಿ ವತಿಯಿಂದ ಮನೆ ಅಥವಾ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಪರವಾನಿಗೆ ಪಡೆದ ವಾರಸುದಾರರಿಗೆ ಅಗತ್ಯವಿರುವ ಮರಳಿನ ಅಂದಾಜನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಖಾತ್ರಿಪಡಿಸಿ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್, ಉಪವಿಭಾಗಾಧಿಕಾರಿಗಳಾದ ಸಂತೋಷ್ ಕಾಮಗೌಡ, ರಾಹುಲ್ ಸಂಕನೂರು, ತಹಶೀಲ್ದಾರ್ ಡಾ. ಹಂಪಣ್ಣ ಸಜ್ಜನ್ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT