ಭಾನುವಾರ, ಏಪ್ರಿಲ್ 2, 2023
23 °C

ಹೊರಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಿ: ವಸತಿ ನಿಲಯ ಕಾರ್ಮಿಕರ ಸಂಘ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಹಾಸ್ಟೆಲ್ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿ, ನಿವೃತ್ತಿವರೆಗೂ ಅವರನ್ನು ಮುಂದುವರಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಜಿಲ್ಲಾ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ವಸತಿನಿಲಯ, ವಸತಿಶಾಲೆ, ಕಾಲೇಜು, ಆಶ್ರಮಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಿ ಗ್ರೂಪ್ ನ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರನ್ನು ಕಾಯಂಗೊಳಿಸಿ, ಗುತ್ತಿಗೆ - ಹೊರಗುತ್ತಿಗೆ ಪದ್ಧತಿಯನ್ನು ರದ್ದು ಮಾಡಬೇಕು. ವಸತಿನಿಲಯಗಳ ಹೊರಗುತ್ತಿಗೆ ಕಾರ್ಮಿಕರಿಗೆ ನೀಡುತ್ತಿರುವ ಕನಿಷ್ಠ ವೇತನವನ್ನು ಮಾಸಿಕ ₹35,950 ಕ್ಕೆ ಹೆಚ್ಚಿಸಬೇಕು ಮತ್ತು ತುಟ್ಟಿ ಭತ್ಯೆಯನ್ನು ಬೆಲೆ ಏರಿಕೆ, ಹಣದುಬ್ಬರಗಳನ್ನು ಪರಿಗಣಿ ವೈಜ್ಞಾನಿಕವಾಗಿ ಕನಿಷ್ಠ ವೇತನವನ್ನು ನಿಗದಿಮಾಡಬೇಕು ಎಂದು ಒತ್ತಾಯಿಸಿದರು.

ಕಾನೂನುಬದ್ಧವಾಗಿ ನೀಡಲೇಬೇಕಾದ ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ಸಾಂಧರ್ಭಿಕ ರಜೆಗಳನ್ನು ನೀಡಬೇಕು ಅಥವಾ ರಜೆ ದಿನಗಳಲ್ಲಿ ಕೆಲಸ ಮಾಡಿಸಿಕೊಂಡಲ್ಲಿ ಕಾರ್ಮಿಕ ಕಾಯ್ದೆಯನ್ವಯ ದುಪ್ಪಟ್ಟು ವೇತನ ನೀಡಬೇಕು ಎಂಬ ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ದಿನಕ್ಕೆ ಎಂಟು ಗಂಟೆಗಳ ಅವಧಿ ಮಾತ್ರ ದುಡಿಸಿಕೊಳ್ಳಬೇಕು. ಎಂಟು ಗಂಟೆಗಳ ನಂತರದ ಹೆಚ್ಚುವರಿ ಅವಧಿಯ ಕೆಲಸಕ್ಕೆ ಕಾರ್ಮಿಕ ಕಾನೂನುಗಳ ಪ್ರಕಾರ ದುಪ್ಪಟ್ಟು ವೇತನ ನೀಡಬೇಕು ಎಂಬ ಕಾರ್ಮಿಕ ಇಲಾಖೆಯ ಆದೇಶ ತುರ್ತಾಗಿ ಜಾರಿಯಾಗುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ , ವಿಶ್ವವಿದ್ಯಾನಿಲಯಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ರಾಜ್ಯದಾದ್ಯಂತ ವಿವಿಧ ವಸತಿನಿಲಯಗಳಲ್ಲಿ ಹೊರಗುತ್ತಿಗೆ ನೌಕರರಿದ್ದಾರೆ.

ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಈ ಪ್ರತಿಭಟನೆ ನಡೆಸಿ ಬೇಡಿಕೆ ದಿನವಾಗಿ ಆಚರಿಸಲಾಗುತ್ತಿದೆ. ಲಾಕ್ ಡೌನ್ ಅವಧಿಯ ವೇತನವನ್ನು ತಕ್ಷಣವೇ ಪಾವತಿಸಬೇಕು ಮಾಸಿಕ ವೇತನ , ಇಪಿಎಫ್ ಮತ್ತು ಇಎಸ್‌ಐ ವಂತಿಗೆಯನ್ನು ಪ್ರತಿ ತಿಂಗಳು ನೀಡದ ಗುತ್ತಿಗೆ ಏಜೆನ್ಸಿಯವರ ಮೇಲೆ ದೂರು ದಾಖಲಿಸಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಹಾಗು ಕಾರ್ಮಿಕರ ಖಾತೆಗಳಿಗೆ ಪ್ರತಿ ತಿಂಗಳು ಮಾಸಿಕ ವೇತನ , ಇಪಿಎಫ್ ಮತ್ತು ಇಎಸ್‌ಐ ವಂತಿಗೆ ಜಮಾ ಆಗುವಂತೆ ಕ್ರಮವಹಿಸಬೇಕು ಎಂದರು.

ಪದಾಧಿಕಾರಿಗಳಾದ ಮಹೇಶ್ ಚೀಕಲಪರ್ವಿ, ಅಣ್ಣಪ್ಪ ಶಿರಶ್ಯಾಡ, ಸುಲೋಚನಾ, ಅಂಬಿಕಾ, ಉಮಾದೇವಿ, ಮಹೇಶ್ವರಿ, ಪಾರ್ವತಿ, ನಾಗಮ್ಮ ಅಶ್ವತ್ಥಾಮ, ಅಮರೇಶ, ಹುಲಿಗೆಪ್ಪ, ಹನುಮಂತ, ಹುಚ್ಚಣ್ಣ, ಹನುಮರೆಡ್ಡಿ, ಮೋಹನ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು