ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಬೇಸಿಗೆಯಲ್ಲೂ ಮಣ್ಣು ಮಿಶ್ರಿತ ನೀರು!

ನೀರು ಶುದ್ಧೀಕರಣ ಘಟಕ ಹಾಳಾಗಿದ್ದರೂ ಕೇಳುವವರಿಲ್ಲ
Last Updated 28 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ನಗರಸಭೆಯಿಂದ ಪೂರೈಕೆ ಆಗುತ್ತಿರುವ ನೀರು ಮಳೆಗಾಲ ನೆನಪಿಸುತ್ತಿದ್ದು, ಬೇರೆ ಆಯ್ಕೆಯಿಲ್ಲದೆ ಅದೇ ಕಲುಷಿತ ನೀರನ್ನು ಜನರು ಬಳಸುತ್ತಿದ್ದಾರೆ.

ಕೊರೊನಾದಿಂದಾಗಿ ಲಾಕ್‌ಡೌನ್‌ ಸಂಕಷ್ಟದಲ್ಲಿರುವ ಜನರು ಆರೋಗ್ಯ ಕಾಪಾಡಿಕೊಳ್ಳುವ ಚಿಂತೆಯಲ್ಲಿದ್ದರೆ, ಸರ್ಕಾರಿ ವ್ಯವಸ್ಥೆಯಿಂದಲೇ ಅನಾರೋಗ್ಯ ಹರಿದು ಬರುತ್ತಿದೆ ಎಂದು ಶಪಿಸುತ್ತಿದ್ದಾರೆ. ನಲ್ಲಿಯಲ್ಲಿ ಬರುವ ಮಣ್ಣುಮಿಶ್ರಿತ ನೀರು ನೋಡುವುದಕ್ಕೂ ಯೋಗ್ಯವಿಲ್ಲ; ವಾಕರಿಕೆ ಬರಿಸುತ್ತದೆ. ಸಾಮಾನ್ಯವಾಗಿ, ಮಳೆಗಾಲದಲ್ಲಿ ರಾಡಿಮಿಶ್ರಿತ ನೀರು ಪೂರೈಕೆ ಆಗುವುದನ್ನು ಕಂಡಿರುವ ಜನರು ಬೇಸಿಗೆಯಲ್ಲೂ ತಾಪತ್ರಯ ಅನುವಿಸುತ್ತಿದ್ದಾರೆ. ನಗರಕ್ಕೆ ನೀರು ಪೂರೈಸುವ ವ್ಯವಸ್ಥೆ ಹಲವು ವರ್ಷಗಳಿಂದಲೂ ಅವ್ಯವಸ್ಥೆಯಾಗಿಯೇ ಉಳಿದಿದೆ.

ಕೊಳೆಗೇರಿಗಳಲ್ಲಿ ವಾಸಿಸುವ ಬಹುತೇಕ ಜನರು ಹಾಗೂ ಶುದ್ಧ ನೀರು ಖರೀದಿಸಲು ಸಾಧ್ಯವಾಗದವರೆಲ್ಲರೂ ಇದೇ ನೀರನ್ನು ನೇರವಾಗಿ ಸೇವಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಕೆಮ್ಮು, ಜ್ವರ ಹಾಗೂ ನೆಗಡಿ ಬರಬಾರದು ಎಂದು ಜನರು ತಮ್ಮನ್ನು ತಾವು ಕಾಳಜಿ ಮಾಡಿಕೊಳ್ಳುತ್ತಿರುವ ಸೂಕ್ಷ್ಮ ಪರಿಸ್ಥಿತಿ ಇದೆ. ಆದರೆ ಬಡವರು ಅನಿವಾರ್ಯವಾಗಿ ಈ ಕಲ್ಮಶ ನೀರನ್ನು ಸೇವಿಸಿ, ಅನಾರೋಗ್ಯದ ತೊಂದರೆಗೆ ಒಳಗಾಗುತ್ತಿದ್ದಾರೆ. ಎಲ್‌ಬಿಎಸ್‌ ನಗರದಲ್ಲಿ ಕೆಲವು ಜನರು ಸೋಮವಾರ ವಾಂತಿಭೇದಿ ಸಮಸ್ಯೆಗೀಡಾಗಿದ್ದರು. ಅದೇ ದಿನ ಪರಿಚಿತ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ.

ರಾಂಪುರ ಕೆರೆಯಲ್ಲಿ ಕಾಲುವೆಯಿಂದ ಸಂಗ್ರಹಿಸಿದ ನೀರು ಮೇಲ್ನೊಟಕ್ಕೆ ಶುಭ್ರವಾಗಿದೆ. ಆದರೆ, ಮನೆಮನೆಗೆ ತಲುಪುವಾಗ ಮಣ್ಣುಮಿಶ್ರಿತವಾಗುತ್ತಿದೆ. ನೀರಿನ ಕೊಳವೆಗಳಲ್ಲಿನ ಸೋರಿಕೆಗಳನ್ನು ನಗರಸಭೆ ಅಧಿಕಾರಿಗಳು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ರಾಂಪುರ ಕೆರೆ ಪಕ್ಕದಲ್ಲಿ ನೀರು ಶುದ್ಧೀಕರಣ ಮಾಡುವುದಕ್ಕೆ ಹಳೇ ಘಟಕ ಹಾಗೂ ಹೊಸ ಘಟಕ ಇವೆ. ಎರಡೂ ಘಟಕಗಳು ಕಾರ್ಯಸ್ಥಗಿತಗೊಳಿಸಿ ವರ್ಷಗಳು ಉರುಳುತ್ತಿವೆ. ಕರ್ನಾಟಕ ನಗರ ನೀರು ಸರಬರಾಜು ಇಲಾಖೆ, ನಗರಸಭೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಗಮನ ಹರಿಸುತ್ತಿಲ್ಲ. ಹೊಸ ಘಟಕ ಸ್ಥಾಪನೆಗೆ ಕೋಟ್ಯಾನುಗಟ್ಟಲೇ ಅನುದಾನ ವ್ಯಯಿಸಿದ್ದರೂ ಉದ್ದೇಶ ಈಡೇರಿಲ್ಲ.

ರಾಯಚೂರು ನಗರದ ಶೇ 30ಕ್ಕಿಂತ ಹೆಚ್ಚು ಭಾಗಕ್ಕೆ ರಾಂಪೂರ ಕೆರೆ ಮೂಲಕ ತುಂಗಭದ್ರಾ ನದಿನೀರು ಶುದ್ಧೀಕರಣವಾಗದೆ ಪೂರೈಕೆ ಆಗುತ್ತಿದೆ. ವಾಟರ್‌ ಬೆಡ್ಡಿಂಗ್‌ ಮಾಡುವುದು, ಬ್ಲಿಚಿಂಗ್‌ ಪೌಡರ್‌ ವೈಜ್ಞಾನಿಕ ವಿಧಾನದಲ್ಲಿ ಮಿಶ್ರಣ ಮಾಡುವ ಕೆಲಸ ಆಗುತ್ತಿಲ್ಲ. ಈ ಮೊದಲಿದ್ದಂತೆ ಕನಿಷ್ಠಪಕ್ಷ ನದಿನೀರನ್ನು ಯಥಾಪ್ರಕಾರ ಮನೆಗಳಿಗೆ ತಲುಪಿಸಿದರೆ ಸಾಕಾಗುತ್ತದೆ.

ಕೆಲವು ಬಡಾವಣೆಗಳಲ್ಲಿ ನಲ್ಲಿ ನೀರಿನಲ್ಲಿ ಮಣ್ಣಿನ ಕಣಗಳು ಹರಿದು ಬರುತ್ತಿವೆ. ಅರಿವೆಯಿಂದ ಸೋಸಿಕೊಂಡು ನೀರು ಪಡೆಯುತ್ತಾರೆ. ಕೊಡದಲ್ಲಿ ತುಂಬಿದ ನೀರನ್ನು ಒಂದು ದಿನ ಹಾಗೇ ಇಟ್ಟು, ನೀರಿನೊಳಗಿನ ಮಣ್ಣು ತಳಭಾಗಕ್ಕೆ ಶೇಖರಣೆ ಆದ ಬಳಿಕ ಕುಡಿಯುವುದಕ್ಕೆ ಬಳಕೆ ಮಾಡುತ್ತಿದ್ದಾರೆ. ಆದರೆ, ನೀರಿನ ವಾಸನೆ ಹಾಗೇ ಉಳಿದುಕೊಳ್ಳುತ್ತದೆ. ರಾಡಿ ನೀರಿನಿಂದಾಗಿ ಸಿಂಟೆಕ್ಸ್‌ ಟ್ಯಾಂಕ್‌ ಹಾಗೂ ಸಂಪ್‌ಗಳಲ್ಲಿ ಕೆಸರು ತುಂಬಿಕೊಳ್ಳುತ್ತಿದೆ. ಈ ರೀತಿ ನೀರು ಪೂರೈಕೆಯ ಅವ್ಯವಸ್ಥೆ ತೀವ್ರ ಸ್ವರೂಪ ಪಡೆದು ಒಂದು ತಿಂಗಳು ಕಳೆದಿದೆ.

‘ಕೆರೆಯಲ್ಲಿ ನೀರು ಕಡಿಮೆ ಆಗಿದ್ದರಿಂದ ನೀರು ಸ್ವಲ್ಪ ಮಣ್ಣಿನ ಬಣ್ಣದಿಂದ ಕೂಡಿದೆ’ ಎನ್ನುವ ಉತ್ತರವನ್ನು ನಗರಸಭೆ ಸಿಬ್ಬಂದಿ ಹೇಳುತ್ತಾ ಬಂದಿದ್ದರು. ಇದೀಗ ಕೆರೆಯಲ್ಲಿ ಸಾಕಷ್ಟು ನೀರಿದ್ದರೂ ಮಣ್ಣು ಮಿಶ್ರಿತ ನೀರು ಪೂರೈಕೆ ಆಗುತ್ತಿದೆ.

‘ರಾಯಚೂರಿಗೆ ನೀರಿನ ಮೂಲಗಳ ಸಮಸ್ಯೆಯಿಲ್ಲ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನೀರು ಉತ್ತಮವಾಗಿದೆ. ಆದರೆ, ಮನೆಗಳಿಗೆ ಪೂರೈಸುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಒಳ್ಳೆಯ ನದಿ ನೀರನ್ನು ಇನ್ನಷ್ಟು ಹಾಳುಮಾಡಿ ಕೊಡುತ್ತಿದ್ದಾರೆ. 24/7 ಗಂಟೆ ನೀರು ಪೂರೈಸುವ ಯೋಜನೆಗಾಗಿ ನೂರಾರು ಕೋಟಿ ಹಣ ಖರ್ಚು ಮಾಡಿದ್ದರೂ ನೀರು ಬಂದಿಲ್ಲ. ಈ ಬಗ್ಗೆ ನಗರಸಭೆಗೆ ಸೂಚನೆ ಕೊಟ್ಟರೆ ಸಾಕಾಗುವುದಿಲ್ಲ, ಕೆಲಸ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಮನಸ್ಸು ಮಾಡಬೇಕು’ ಎಂದು ನಿವೃತ್ತ ಸರ್ಕಾರಿ ನೌಕರ ವೆಂಕಟೇಶ ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT