ಮಂಗಳವಾರ, ನವೆಂಬರ್ 19, 2019
22 °C
ಟಿಎಲ್‌ಬಿಸಿ, ಎನ್‌ಆರ್‌ಬಿಸಿ ನೀರಿಗಾಗಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ

ಕೊನೆ ಭಾಗಕ್ಕೆ ನೀರೊದಗಿಸದ ಸರ್ಕಾರ ಧೋರಣೆಗೆ ಖಂಡನೆ

Published:
Updated:
Prajavani

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಹಾಗೂ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಕೊನೆಭಾಗಕ್ಕೆ ನೀರು ತಲುಪಿಸುವ ಕಾರ್ಯದಲ್ಲಿ ಸರ್ಕಾರ ವಿಫಲವಾಗಿದೆ. ಜಿಲ್ಲೆಯಲ್ಲಿ ಬರ ಇದ್ದರೂ ಸಮರ್ಪಕವಾಗಿ ನಿರ್ವಹಣೆ ಕಾಮಗಾರಿಗಳಾಗುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ರ‍್ಯಾಲಿ ನಡೆಸಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಧರಣಿ ನಡೆಸಿ, ಬರ ಮತ್ತು ನೆರೆ ನಿರ್ವಹಣೆಯಲ್ಲೂ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಸರ್ಕಾರವು ದ್ವೇಷ ರಾಜಕಾರಣದಲ್ಲಿ ತೊಡಗಿರುವುದು ಖಂಡನೀಯ ಎಂದು ಘೋಷಣೆಗಳನ್ನು ಕೂಗಿದರು.

ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಂಕೇತಿಕ ರ‍್ಯಾಲಿ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ರೈತರ ಜೀವನಾಡಿಯಾಗಿರುವ ಟಿಎಲ್‌ಬಿಸಿ ಹಾಗೂ ಎನ್‌ಆರ್‌ಬಿಸಿ ಕಾಲುವೆಗೆ ನೀರು ಹರಿಸಿ 50 ದಿನಗಳು ಕಳೆದರೂ, ರಾಯಚೂರು, ಮಾನ್ವಿ, ಸಿರವಾರ ಹಾಗೂ ದೇವದುರ್ಗ ತಾಲ್ಲೂಕಿನ ರೈತರ ಜಮೀನುಗಳಿಗೆ ನೀರು ತಲುಪಿಲ್ಲ. 144 ಕಲಂ ಜಾರಿಗೊಳಿಸಿದರೂ ಕೊನೆ ಭಾಗದ ರೈತರಿಗೆ ನೀರು ದೊರೆಯದಿರಲು ಸರ್ಕಾರದ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಆರೋಪಿಸಿದರು.

ವಾಡಿಕೆಗಿಂತಲೂ ಶೇ 45ರಷ್ಟು ಮಳೆ ಮೊರತೆ ಆಗಿರುವುದರಿಂದ ಬಿತ್ತನೆಯೂ ಆಗಿಲ್ಲ. ಅನೇಕ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗಿದೆ. ಬರಗಾಲದ ಹಿನ್ನೆಲೆ ಬಡವರು ಕೂಲಿಗಾಗಿ ಗ್ರಾಮೀಣ ಪ್ರದೇಶ ತೊರೆದು ದೂರದ ಬೆಂಗಳೂರು, ಗೋವಾ, ಮುಂಬೈ ಹಾಗೂ ಹೈದರಾಬಾದ್ ಪಟ್ಟಣಗಳಿಗೆ ಗುಳೆ ಹೋಗಿದ್ದಾರೆ. ನರೇಗಾ ಯೋಜನೆಯಡಿ ಸರಿಯಾಗಿ ಕೆಲಸ ಆರಂಭಿಸದಿರುವುದು ಹಾಗೂ ಕೂಲಿ ಪಾವತಿಸದಿರುವುದು ಸರ್ಕಾರ ದಿವಾಳಿತನವಾಗಿದೆ ಎಂದು ದೂರಿದರು.

ಕೃಷ್ಣಾ ಹಾಗೂ ತುಂಗಭದ್ರಾ ನದಿಯಲ್ಲಿನ ಪ್ರವಾಹದಿಂದ ಸಂಕಷ್ಟಕ್ಕೀಡಾದ ರಾಯಚೂರು, ದೇವದುರ್ಗ ಹಾಗೂ ಲಿಂಗಸುಗೂರು ತಾಲ್ಲೂಕಿನ ಜನರಿಗೆ ಪುನರ್ವಸತಿ ಕಲ್ಪಿಸಿಲ್ಲ. ಬೆಳೆನಷ್ಟ ಪರಿಹಾರ ಸೇರಿದಂತೆ ಯಾವುದೇ ಪರಿಹಾರವೂ ನೀಡದೆ ಸರ್ಕಾರ ಕೈಕಟ್ಟಿಕೊಂಡು ಕುಳಿತಿದೆ. ಪರಿಹಾರ ಕೇಂದ್ರಗಳನ್ನು ಬಂದ್ ಮಾಡಿರುವುದರಿಂದ ಬಡವರ ನಿತ್ಯದ ಬದುಕಿಗೂ ತೊಂದರೆಯಾಗಿದೆ. ಕೇಂದ್ರ ಸರ್ಕಾರ ಕೂಡ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ದ್ವೇಷದ ರಾಜಕಾರಣದಲ್ಲಿ ತೊಡಗಿದ್ದು, ವಿರೋಧ ಪಕ್ಷಗಳ ನಾಯಕರ ವಿರುದ್ಧ ಸಿಬಿಐ, ಐಟಿ, ಇಡಿ ಸಂಸ್ಥೆಗಳ ಮೂಲಕ ತೊಂದರೆ ಮಾಡಲಾಗುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಜಾರಿಮಾಡಿರುವ ಮೋಟಾರು ವಾಹನ ಕಾಯ್ದೆಯಿಂದ ಅವೈಜ್ಞಾನಿಕ ದಂಡ ವಿಧಿಸಿ ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿರುವ ಅಚ್ಚೇದಿನ್‌ ಘೋಷಣೆ ದೇಶದ ಜನರ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನವಿರೋಧಿ ನೀತಿ ಖಂಡನೀಯವಾಗಿದ್ದು, ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಲು ನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯರಾದ ಎನ್‌.ಎಸ್.ಬೋಸರಾಜು, ಬಸವರಾಜ ಪಾಟೀಲ ಇಟಗಿ, ಶಾಸಕರಾದ ಬಸನಗೌಡ ದದ್ದಲ, ಡಿ.ಎಸ್‌.ಹುಲಗೇರಿ, ಮಾಜಿ ಸಂಸದ ಬಿ.ವಿ.ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣ ಇರಬಗೇರಾ, ನಗರಸಭೆ ಸದಸ್ಯ ಜಯಣ್ಣ, ಮುಖಂಡರಾದ ಪಾರಸಮಲ್ ಸುಖಾಣಿ, ಎ.ವಸಂತಕುಮಾರ, ಕೆ.ಶಾಂತಪ್ಪ, ಬಷೀರುದ್ದೀನ್‌, ತಾಯಣ್ಣ ನಾಯಕ, ರುದ್ರಪ್ಪ ಅಂಗಡಿ, ಜಿ.ಬಸವರಾಜರೆಡ್ಡಿ, ಜಯವಂತರಾವ ಪತಂಗೆ, ನಿರ್ಮಲಾ ಬೆಣ್ಣೆ, ಎಂ.ನರಸನಗೌಡ, ಮಲ್ಲಿಕಾರ್ಜುನಗೌಡ, ಅಮರೇಗೌಡ ಹಂಚಿನಾಳ, ಆಂಜನೇಯ ಕುರುಬದೊಡ್ಡಿ, ಅಬ್ದುಲ್ ಕರೀಂ ಇದ್ದರು.

ಪ್ರತಿಕ್ರಿಯಿಸಿ (+)