ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಪಾಲಿಸಿ ಸೋಂಕು ನಿಯಂತ್ರಿಸಲು ಸೂಚನೆ

ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ
Last Updated 30 ಏಪ್ರಿಲ್ 2021, 15:38 IST
ಅಕ್ಷರ ಗಾತ್ರ

ರಾಯಚೂರು: ಬೆಂಗಳೂರು, ತುಮಕೂರು ಜಿಲ್ಲೆಗಳ ನಂತರ ಸೋಂಕಿತರ ಪಟ್ಟಿಯಲ್ಲಿ ರಾಯಚೂರು ಜಿಲ್ಲೆ ಮೂರನೇ ಸ್ಥಾನಕ್ಕೆ ಬರಬಾರದು. ಆ ದಿಸೆಯಲ್ಲಿ ಸೋಂಕಿತರ ಸಂಪರ್ಕವನ್ನು ಕಡಿತ ಮಾಡುವುದಕ್ಕೆ ಸರ್ಕಾರದ ಮಾರ್ಗಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸೇಕು ಹಾಗೂ ಜನರು ಗಂಭೀರವಾಗಿ ಪಾಲಿಸಬೇಕು. ಒಂದು ವೇಳೆ ಸಡಿಲವಾದರೆ ಕಠಿಣ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲಾ ತಹಶೀಲ್ದಾರರು, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳೊಂದಿಗೆ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿ ಶುಕ್ರವಾರ ಸಭೆ ನಡೆಸಿದರು.

ಕೆಲವು ದಿನಗಳಿಂದ ಕೋವಿಡ್ ಎರಡನೇ ಅಲೆಗೆ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿದೆ. ರಾಜ್ಯದಾದ್ಯಂತ ಈ ಸೋಂಕು ತಡೆಗಟ್ಟಲು ಸರ್ಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಈ ಸೋಂಕನ್ನು ಪರಿಣಾಮಕಾರಿಯಗಿ ತಡೆಗಟ್ಟಬೇಕಿದೆ. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ, ರೆಮಿಡಿಸಿವಿರ್ ಚುಚ್ಚುಮದ್ದು ಹಾಗೂ ಗಂಭಿರ ಸ್ಥಿತಿಯ ರೋಗಿಗಳನ್ನು ಉಪಚರಿಸಲು ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್‌ಗಳ ಪೂರೈಕೆಗೆ ಸರ್ಕಾರ ಮಟ್ಟದಲ್ಲಿ ಚರ್ಚಿಸಿ, ಶೀಘ್ರವೇ ಜಿಲ್ಲೆಗೆ ಪೂರೈಸಲಾಗುವುದು ಎಂದು ಹೇಳಿದರು.

ಪೊಲೀಸ್ ಇಲಾಖೆಯು ಕಳೆದ ವರ್ಷದಂತೆ, ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಪರಿಣಾಮಕಾರಿಯವಾಗಿ ಅನುಷ್ಠಾನಗೊಳಿಸಬೇಕು. ಆರೋಗ್ಯ ಇಲಾಖೆ ಮತ್ತಷ್ಟು ಚುರುಕಾಗಬೇಕು. ಕೋವಿಡ್ ಫಲಿತಾಂಶದಲ್ಲಿ ಪಾಸಿಟಿವ್ ಬಂದ ರೋಗಿಗಳನ್ನು ಎ, ಬಿ ಹಾಗೂ ಸಿ ಎಂದು ವಿಂಗಡಿಸಿಕೊಂಡು ಗಂಭೀರ ಸ್ಥಿತಿಯಲ್ಲಿರುವವರಿಗೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿಕೊಂಡು ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಬೇಕು. ರೋಗ ಲಕ್ಷಣಗಳಿಲ್ಲದ ಎ-ಸಿಂಪ್ತಮೆಟಿಕ್ ರೋಗಿಗಳನ್ನು ಅವರ ಮನೆಗಳಲ್ಲಿಯೇ ಪ್ರತ್ಯೇಕವಾಗಿರಿಸಬೇಕು ಎಂದರು.

ಅಂಬ್ಯುಲನ್ಸ್‌ಗಳನ್ನು ಸದಾ ಸನ್ನದ ಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಯಾವುದೇ ತಾಲ್ಲೂಕಿನಲ್ಲೂ ಆ ಕೊರತೆಯಾಗಬಾರದು. ಒಂದು ವೇಳೆ ಕೊರತೆಯಾದಲ್ಲೀ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಪಡೆದುಕೊಳ್ಳಬೇಕು. ಆಕ್ಸಿಜನ್ ಸಿಲಿಂಡರ್‌ಗಳು ಅಗತ್ಯ ಇದ್ದರೆ ಖರೀದಿಸಿಟ್ಟುಕೊಳ್ಳಬೇಕು. ಕಳೆದ ವರ್ಷದಂತೆ ಕೋವಿಡ್-19 ಸೋಂಕು ನಿಯಂತ್ರಿಸಿದಂತೆ ಈ ಬಾರಿಯೂ ಜಿಲ್ಲೆಯ ಎಲ್ಲಾ ಶಾಸಕರು, ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕೈಜೋಡಿಸಿ, ಬದ್ದತೆಯಿಂದ ಕೆಲಸ ಮಾಡಬೇಕಿದೆ, ಈ ಬಾರಿ ಲಾಕ್‌ಡೌನ್ ಬದಲಾಗಿ ಜನತಾ ಕರ್ಫ್ಯೂ ವಿಧಿಸಲಾಗಿದೆ ಎಂದು ಹೇಳಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು. ಕಳೆದ ಆರು ತಿಂಗಳ ಹಿಂದೆಯಷ್ಟೆ ಕೇಂದ್ರ ಸರ್ಕಾರದಿಂದ ತಾಲ್ಲೂಕು ಆಸ್ಪತ್ರೆಗಳಿಗೆ ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲಾಗಿದೆ. ಅವು ಕಾರ್ಯನಿರ್ವಹಿಸದಿದ್ದಲ್ಲೀ ಜಿಲ್ಲಾ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದರು. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿಯೂ ಜನತಾ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರುವ ಬಗ್ಗೆ ಅಧಿಕಾರಿಗಳು ಗಸ್ತು ಮಾಡುವಂತೆ ಅವರು ತಿಳಿಸಿದರು

ಶಾಸಕ ಕೆ. ಶಿವನಗೌಡ ಮಾತನಾಡಿ, ಜಿಲ್ಲೆಗೆ ಅತಿ ಹೆಚ್ಚಿನ ಸಂಖ್ಯೆಯ ರೆಮ್‌ಡಿಸಿವಿರ್ ಚುಚ್ಚುಮದ್ದು ಸರಬರಾಜು ಮಾಡುವಂತೆ ಕೋರಿದರು. ಶಾಸಕ ಡಾ. ಶಿವರಾಜ್ ಪಾಟೀಲ ಮಾತನಾಡಿ, ಕೋವಿಡ್ ಸೋಂಕಿತರೆಲ್ಲರಿಗೂ ರೆಮ್‌ಡಿಸಿವಿರ್‌ ಚುಚ್ಚುಮದ್ದು ನೀಡುವ ಅಗತ್ಯವಿಲ್ಲ ಎಂದರು.

ಸಂಸದ ಸಂಗಣ್ಣ ಕರಡಿ, ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ವೆಂಕಟರಾವ್ ನಾಡಗೌಡ ಹಾಗೂ ರಾಯಚೂರು ದದ್ದಲ್ ಬಸವನಗೌಡ, ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರ, ಸಹಾಯಕ ಔಷಧ ನಿಯಂತ್ರಕ ವೆಂಕಟೇಶ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ನಾಗರಾಜ್ ಮಾತನಾಡಿದರು.

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸುರೇಂದ್ರ ಬಾಬು ಸಭೆಯಲ್ಲಿದ್ದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯಾಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT