ಸಿಂಧನೂರು: ಪ್ರತಿಯೊಬ್ಬ ವೈದ್ಯರು ತಮ್ಮ ಸರ್ವಸ್ವವನ್ನೂ ಕುಟುಂಬಕ್ಕಿಂತ ಜನರಿಗಾಗಿ ಮೀಸಲಿಟ್ಟಿರುತ್ತಾರೆ. ವೈದ್ಯರ ಸೇವೆಗೆ ಎಂದಿಗೂ ಬೆಲೆ ಕಟ್ಟಲಾಗದು. ಅವರಿಗೆ ಪ್ರೀತಿ, ಗೌರವ ಕೊಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಹೇಳಿದರು.
ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಸರ್ಕಾರಿ ಮಾದರಿಯ ಶಾಸಕರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ ರಾಯಚೂರು ಹಾಗೂ ಮಾನವಿ, ವನಸಿರಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಅಂಗವಾಗಿ ವನಮಹೋತ್ಸವ ಹಾಗೂ ಸಸಿ ನೆಡುವ ಸಪ್ತಾಹದ ನನ್ನ ಗಿಡ ನನ್ನ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನನಿ ಮಕ್ಕಳ ಆಸ್ಪತ್ರೆಯ ಡಾ.ಚನ್ನಬಸವರಾಜ ಮಾತನಾಡಿ ‘ದೇವರು ಜಗತ್ತಿನಲ್ಲಿ ಸೃಷ್ಠಿಸುವ ಶಕ್ತಿ ನೀಡಿರುವುದು ಒಂದು ತಾಯಿಗೆ ಮತ್ತೊಂದು ಭೂಮಿಗೆ. ತಾಯಿ ಮಗುವಿಗೆ ಜನ್ಮ ನೀಡಿದರೆ ಈ ಭೂಮಿ ತಾಯಿ ಗಿಡಮರಗಳಿಗೆ ಜನ್ಮ ನೀಡುತ್ತಾಳೆ. ಈ ಇಬ್ಬರ ಋಣ ತೀರಿಸಲು ನಾವೆಲ್ಲರೂ ಬದ್ಧರಾಗಿ ತಾಯಿ ಮತ್ತು ಪರಿಸರವನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದರು.
ನಂತರ ಮಕ್ಕಳಿಂದ ವಿವಿಧ ವಾರ್ಡ್‍ಗಳಲ್ಲಿ ಜಾಥಾ ನಡೆಸಿ ಪರಿಸರ ಜಾಗೃತಿ ಮೂಡಿಸಲಾಯಿತು. ಬಸವ ಮಕ್ಕಳ ಆಸ್ಪತ್ರೆಯ ಡಾ.ದೊಡ್ಡಬಸವ, ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಪುರ, ಅರಣ್ಯ ಅಧಿಕಾರಿ ಮುನಿಸ್ವಾಮಿ, ಎಸ್‍ಡಿಎಂಸಿ ಅಧ್ಯಕ್ಷ ಪ್ರವೀಣ, ಉಪಾಧ್ಯಕ್ಷೆ ರಷ್ಮಿ, ಮುಖ್ಯಶಿಕ್ಷಕಿ ಭಾಗ್ಯಶ್ರೀ, ಜೀವಸ್ಪಂದನ ಟ್ರಸ್ಟ್ ಕಾರ್ಯದರ್ಶಿ ಅವಿನಾಶ ದೇಶಪಾಂಡೆ, ಸಹ ಕಾರ್ಯದರ್ಶಿ ಚನ್ನವೀರಗೌಡ, ದಂತ ವೈದ್ಯ ಡಾ.ನವೀನ್ ಕುಮಾರ, ಸನ್ ರೈಸ್ ಕಾಲೇಜು ಪ್ರಾಂಶುಪಾಲ ಹರ್ಷದ್ ಹತ್ತರ್, ಶಿಕ್ಷಕರಾದ ಅಂಬೋಜಿ, ಮಾನಮ್ಮ, ಅಮರಯ್ಯ ಪತ್ರಿಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.