ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯವನ್ನು ಅನುವಾದ ಮಾಡಬೇಡಿ: ಡಾ.ತಾಳ್ತೆಜೆ ವಸಂತ ಕುಮಾರ

ಎಂ.ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಅಂಗವಾಗಿ ವಿಚಾರ ಸಂಕಿರಣ
Last Updated 6 ಜನವರಿ 2020, 14:09 IST
ಅಕ್ಷರ ಗಾತ್ರ

ರಾಯಚೂರು: ಕಾವ್ಯವನ್ನು ಅನುವಾದ ಮಾಡಲು ಬರುವುದಿಲ್ಲ. ಅನುವಾದ ಮಾಡಬೇಡಿ ಎಂದು ಮೊದಲು ವಾದಿಸಿದವರು ಗೋಪಾಲಕೃಷ್ಣ ಅಡಿಗರು ಎಂದು ನಿವೃತ್ತಪ್ರಾಧ್ಯಾಪಕ ಡಾ.ತಾಳ್ತೆಜೆ ವಸಂತ ಕುಮಾರ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೀಜು ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸೋಮವಾರ ಆಯೋಜಿಸಿದ್ದ ಎಂ.ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಅಂಗವಾಗಿ ಅಡಿಗರ ಸಾಹಿತ್ಯ ವರ್ತಮಾನದ ಮುಖಾಮುಖಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕಾವ್ಯವನ್ನು ಗದ್ಯಕ್ಕೆ ತರಬೇಡಿ, ಅನುವಾದ ಮಾಡಬೇಡಿ, ನೈಜ ಅರ್ಥ ಕೆಡುತ್ತದೆ ಎಂದು ತಕರಾರು ತೆಗೆದಿದ್ದರು. ಅನೇಕ ವೈರುದ್ಯಗಳ ನಡುವೆ ಬೆಳೆದು ಬಂದಿದ್ದ ಅವರು, ಸಾಹಿತ್ಯದ ಕುರಿತಾದ ಪ್ರತಿಸ್ಪಂದನೆ ಮಾಡುವಂತೆ ಸಾಕ್ಷಿ ಪತ್ರಿಕೆ ಆರಂಭಿಸಿದವರು. ನಾಡು, ನುಡಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.

ಅಡಿಗರ ಸಂಪಾದನೆಯ ಸಾಕ್ಷಿ ಪತ್ರಿಕೆ ಮತ್ತು ಬಹುಮುಖಿ ನೆಲೆಗಳು ಕುರಿತು ಪ್ರಾಧ್ಯಾಪಕಿ ಡಾ.ಶೋಭಾ ಚಪ್ಪರದಳ್ಳಿ ಮಠ ಮಾತನಾಡಿ, ಅಡಿಗರ ಸಂಪಾದನೆಯ ಸಾಕ್ಷಿ ಪತ್ರಿಕೆ ವರ್ತಮಾನದ ಸಂದರ್ಭದಲ್ಲಿ ಅನೇಕ ವೈಚಾರಿಕ ಮತ್ತು ಪ್ರಸ್ತುತತೆ ಹೊಂದಿತ್ತು. ಅಡಿಗರು 1962 ರಲ್ಲಿ ಆರಂಭಿಸಿದ ಈ ಪತ್ರಿಕೆಯು ಹೊಸ ಸಾಹಿತ್ಯದ ಸಂಚಲನವನ್ನು ಸೃಷ್ಟಿಸಿತ್ತು ಎಂದರು.

ಕಾವ್ಯದಲ್ಲಿ ಹೊಸ ವಿಮರ್ಶೆ ಮಾಡಿದರು. ನವ್ಯ ಸಾಹಿತ್ಯದಲ್ಲಿ ಮೌಲ್ಯಮಾಪನ ಮಾಡುವುದಕ್ಕೆ ಹೊಸ ಸೈದ್ಧಾಂತಿಕ ನಿಲುವುಗಳನ್ನು ಹಾಕಿಕೊಟ್ಟಿದ್ದರು. ಹೊಸ ವಿಮರ್ಶಕರನ್ನು ಬೆಳಕಿಗೆ ತಂದವರು, ಹಳೆಗನ್ನಡ, ನಡುಗನ್ನಡದಲ್ಲಿ ರಚಿಸಿದ ಕೃತಿಗಳನ್ನು ಮೌಲ್ಯೀಕರಿಸಿ, ಸರಿಯಾಗಿ ಅರ್ಥೈಸಿ, ವಿಮರ್ಶಿಸಿ, ಆ ಕೃತಿಯ ತಾತ್ಪರ್ಯವನ್ನು ಎಲ್ಲರಿಗೂ ತಿಳಿಸಿದರು.

ವಿಮರ್ಶೆ ಪ್ರಾಮಾಣಿಕತೆಯಿಂದ ಕೂಡಿರಬೇಕು. ವಸ್ತು ನಿಷ್ಠ ವಿಚಾರವು ಕೃತಿ ನಿಷ್ಠ ವಿಚಾರಕ್ಕೆ ಹೆಚ್ಚು ಬಲಪಡಿಸುತ್ತದೆ ಎಂದು ವಾದಿಸಿದ್ದರು. ಆ ಹಿನ್ನೆಲೆಯಲ್ಲಿ ಸಾಕ್ಷಿ ಪತ್ರಿಕೆ ಆರಂಭಿಸಿದರು. ರಾಜಕೀಯ, ಸಾಮಾಜಿಕ ವ್ಯವಸ್ಥೆ, ಶಿಕ್ಷಣ, ತಂತ್ರಜ್ಞಾನ, ಮನೋವಿಜ್ಞಾನ, ತತ್ವಶಾಸ್ತ್ರ ಸೇರಿದಂತೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಿ ಬರೆಯುತ್ತಿದ್ದರು ಎಂದು ಹೇಳಿದರು.

ಅಡಿಗರ ಕಾವ್ಯದಲ್ಲಿ ಸಮಾಜೋರಾಜಕೀಯ ಚಿಂತನೆಗಳು ಕುರಿತು ಸಾಹಿತಿ ಮಹಾಂತೇಶ ಮಸ್ಕಿ ಮಾತನಾಡಿ, ರಾಜಕಾರಣಿಗಳನ್ನು ಬಣ್ಣ ಬದಲಿಸುವ ಅಣ್ಣಂದಿರೇ ಎಂದು ಹೆಸರಿಟ್ಟಿದ್ದರು. ಗೋಪಾಲಕೃಷ್ಣ ಅಡಿಗರೂ ಸ್ವಾತಂತ್ರ್ಯ ಹೋರಾಟದಲ್ಲಿ ಜವಾಹರಲಾಲ್ ನೆಹರು ಅವರನ್ನು ಟೀಕಿಸಿದ್ದರು. ರಾಜಕಾರಿಣಿಗಳಿಗೆ ವ್ಯಂಗ್ಯ ಬರವಣಿಗೆ ಮುಖಾಂತರ ಅವರ ತಪ್ಪು ತಿಳಿಸಿದವರು ಎಂದರು.

ಗಾಂಧಿ ರಾಜ್ಯ, ಮೇರಾ ಭಾರತ್ ಮಹಾನ್, ಸತ್ಯಮೇವ ಜಯತೆ, ಸೇರಿದಂತೆ ಇನ್ನಿತರ ಕವಿತೆಗಳನ್ನು ಬರೆದು ದೇಶ ಪ್ರೇಮಿ ಎಂದೆನಿಸಿದರು. ಕಟ್ಟುವೆವು ನಾವು ಎನ್ನುವ ಮಹತ್ವದ ಕೃತಿಯಲ್ಲಿ ಯುವ ಸಮುದಾಯ ನಾಡು ಕಟ್ಟುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ದಸ್ತಗಿರ್ ಸಾಬ್ ದಿನ್ನಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಸದಸ್ಯ ಡಾ.ಬಿ.ಎಂ.ಶರಭೇಂದ್ರಸ್ವಾಮಿ. ಡಾ.ಶಿವಯ್ಯ ಹಿರೇಮಠ, ವೀರಹನುಮಾನ್, ಖಾದರ್ ಬಾಷಾ ಕೆ, ಸೂರ್ಯಪ್ರಕಾಶ ಪಂಡಿತ, ಡಾ.ಶೀಲದಾಸ್,ವೆಂಕಟೇಶ ಬೇವಿನಬೆಂಚಿ, ಡಾ.ರಾಜಶ್ರೀ ಕಲ್ಲೂರಕರ್ ಮಾತನಾಡಿದರು.

ಸಾಹಿತ್ಯಾಸಕ್ತರು, ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT