ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುಪಯುಕ್ತವಾದ ಶುದ್ಧ ಕುಡಿಯುವ ನೀರಿನ ಘಟಕ

ಬೆಣಕಲ್ ಗ್ರಾಮದಲ್ಲಿ ಬೋರ್‌ವೆಲ್‌ ನೀರೇ ಗತಿ
ಯಮನೇಶ
Published 17 ನವೆಂಬರ್ 2023, 5:21 IST
Last Updated 17 ನವೆಂಬರ್ 2023, 5:21 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ ದೊಂಡಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆಣಕಲ್ ಗ್ರಾಮದಲ್ಲಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು, ಕುಡಿಯುವ ನೀರಿಗಾಗಿ ಗ್ರಾಮಸ್ಥರು 5-6 ಕಿ.ಮೀ ಹೋಗಬೇಕಾದ ಪರಿಸ್ಥಿತಿ ಇದೆ.

ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ 1500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು 800ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ದ್ವಿಚಕ್ರ ವಾಹನ ಇರುವವರು ಪಕ್ಕದ ಗ್ರಾಮಗಳಿಗೆ ತೆರಳಿ ಶುದ್ಧ ಕುಡಿಯುವ ನೀರು ತರುತ್ತಾರೆ. ಬಡವರು ಹಾಗೂ ದ್ವಿಚಕ್ರ ವಾಹನ ಇಲ್ಲದವರು ಗ್ರಾಮದಲ್ಲಿನ ಬೋರ್‌ವೆಲ್‌ ನೀರು ಕುಡಿಯುತ್ತಿದ್ದಾರೆ.

ನಾಲ್ಕೈದು ವರ್ಷದ ಹಿಂದೆ ನೀರು ತಪಾಸಣೆಯ ತಂಡ ಗ್ರಾಮಕ್ಕೆ ಭೇಟಿ ನೀಡಿದಾಗ ಹಲವು ಕೊಳವೆ ಬಾವಿಗಳಿಗೆ ಕೆಂಪು ಬಣ್ಣ ಬಳೆದು ಕುಡಿಯಲು ಯೋಗ್ಯವಿಲ್ಲ ಎಂದು ಬರೆದಿದ್ದರು. ಆದರೆ, ಗ್ರಾಮದಲ್ಲಿನ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರವಿದ್ದು ಅನಿವಾರ್ಯವಾಗಿ ಆ ಬೋರ್‌ವೆಲ್‌ಗಳ ನೀರನ್ನೇ ಬಳಸುವ ಸ್ಥಿತಿ ನಿರ್ಮಾಣವಾಗಿದೆ.

ಜಲ ಜೀವನ್‌ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮದ ಪ್ರತಿ ಮನೆಯ ಮುಂಭಾಗದಲ್ಲಿ ಅಳವಡಿಸಿರುವ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಎರಡು ವರ್ಷವಾದರೂ ನಲ್ಲಿಗೆ ಸಂಪರ್ಕ ಕಲ್ಪಿಸಿಲ್ಲ. ಕಿರು ನೀರು ಸರಬರಾಜು ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಎರಡು ಟ್ಯಾಂಕರ್ ಕೆಲ ಕುಟುಂಬಗಳಿಗೆ ಮಾತ್ರ ನೀರು ಪೂರೈಸುವ ಸಾಮರ್ಥ್ಯ ಹೊಂದಿವೆ.

ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆಗೆ ಅಧಿಕಾರಿಗಳಿಗೆ ಕೇಳಿದರೆ. ಗ್ರಾಮ ಪಂಚಾಯತಿಯವರು ನಿರ್ವಹಣೆ ಮಾಡುತ್ತಾರೆ ಎಂದು ಹೇಳುತ್ತಾರೆ. ಗ್ರಾಮ ಪಂಚಾಯಿತಿಯವರಿಗೆ ಕೇಳಿದರೆ ಏಜೆನ್ಸಿಯವರು ನಿರ್ವಹಣೆ ಎಂದು ಒಬ್ಬರ ಮೇಲೊಬ್ಬರು ಹಾಕಿ ಕಾಲಹರಣ ಮಾಡುತ್ತಾರೆ ಎನ್ನುತ್ತಾರೆ ಗ್ರಾಮ ಮುಖಂಡ ಯಂಕಪ್ಪ.

ಗ್ರಾಮ ಪಂಚಾಯಿತಿಗೆ 3 ವರ್ಷ ಅವಧಿಯಲ್ಲಿ ₹4.30 ಕೋಟಿ ರಾಜಧನ ಸಂಗ್ರಹವಾಗಿದೆ. ಗ್ರಾಮದಲ್ಲಿ ಕುಡಿಯುವ, ನೀರು, ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಹೆಸರಿನಲ್ಲಿ ಹಳೆಯ ಪಿಡಿಒ ,ಕಂಪ್ಯೂಟರ್ ಆಪರೇಟರ್ ಸೇರಿ ಹಣ ಲೂಟಿ ಮಾಡಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರ ನೇಮಿಸಿದ್ದ ಲೆಕ್ಕ ಪರಿಶೋಧನಾ ತಂಡದ ವರದಿಯಲ್ಲೂ ಇದು ಬಹಿರಂಗಗೊಂಡಿದೆ ಎಂದು ಗ್ರಾಮ ಪಂಚಾಯಿತಿಯ ಸದಸ್ಯ ಶಿವರಾಜ್ ಕಿಡಿಕಾರಿದರು.

9 ವರ್ಷದ ಹಿಂದೆ ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ ಘಟಕ ಒಂದು ತಿಂಗಳ ಮಾತ್ರ ಕಾರ್ಯನಿರ್ವಹಿಸಿದೆ. ನರೇಗಾ ಯೋಜನೆ ಅಡಿಯಲ್ಲಿ ಎರಡು ಬಾರಿ ಕ್ರಿಯಾ ಯೋಜನ ರೂಪಿಸಿ ಅನುದಾನ ಮೀಸಲಿಟ್ಟರೂ ಹಾಗೆಯೇ ಉಳಿದಿದೆ.

-ಶಿವರಾಜ ಬೇಣಕಲ್‌, ಗ್ರಾಮ ಪಂಚಾಯತಿ ಸದಸ್ಯ

ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಗೆ ರಾ ವಾಟರ್ ಎಂಬ ಸಂಸ್ಥೆಗೆ ನೀಡಲಾಗಿದೆ. ದುರಸ್ತಿಗೆ ಬಂದಿದ್ದು ಪಂಚಾಯಿತಿಗೆ ಹಸ್ತಾಂತರಿಸಿದ ನಂತರ ದುರಸ್ತಿ ಮಾಡುತ್ತೇವೆ.

-ಹನುಮಂತಪ್ಪ, ಪಿಡಿಒ ಗ್ರಾಮ ಪಂಚಾಯಿತಿ ದೊಂಡoಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT