ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕುಡಿಯುವ ನೀರಿನ ಕೆರೆಯಲ್ಲಿ ಮುಳ್ಳು–ಕಂಟಿ!

ಜೂಜಾಟದ ಕೇಂದ್ರಗಳಾಗಿ ಮಾರ್ಪಟ್ಟ ಸಿಬ್ಬಂದಿ ವಸತಿ ಗೃಹ
ಅಕ್ಷರ ಗಾತ್ರ

ಲಿಂಗಸುಗೂರು: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಕೆರೆಯಲ್ಲಿ ಗಿಡ–ಮರ, ಮುಳ್ಳು–ಕಂಟಿ ಬೆಳೆದಿದೆ. ತ್ಯಾಜ್ಯ ಸಂಗ್ರಹವಾಗಿ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.

ನಾರಾಯಣಪುರ ಬಲದಂಡೆ ಮುಖ್ಯನಾಲೆ ಬಳಿ ಈ ಕೆರೆ ನಿರ್ಮಿಸಲಾಗಿದೆ. ಕೆರೆಗೆ ಅವೈಜ್ಞಾನಿಕ ನಕ್ಷೆ ತಯಾರಿಸಲಾಗಿದೆ. ಅಂಗಳ ಸಮತಟ್ಟಾಗಿಲ್ಲ. ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಆರೋಪಿಸಿ ಜನ ಪ್ರತಿಭಟನೆ ನಡೆಸಿದ್ದರು.

ಕೆರೆಯಲ್ಲಿ ಮೊದಲ ಬಾರಿಗೆ ನೀರು ಸಂಗ್ರಹ ಮಾಡಿದಾಗ ತಳದಲ್ಲಿ ಸೋರಿಕೆ ಉಂಟಾಗಿತ್ತು. ಬಸಿ ನೀರು ಎತ್ತಿ ಹಾಕಲು ಅಲ್ಲಲ್ಲಿ ಪಂಪ್‌ಸೆಟ್‍ ಅಳವಡಿಸಲಾಗಿದೆ. ಅದು ಇಂದಿಗೂ ಕಾಣ ಸಿಗುತ್ತದೆ. ಕೆರೆಯ ಪಶ್ಚಿಮ ಭಾಗದಲ್ಲಿನ ಮಣ್ಣಿನ ದಿಬ್ಬವನ್ನು ಭಾಗಶಃ ಸಮತಟ್ಟು ಮಾಡದೆ ಹೋದ ಕಾರಣ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ.

ಕೆರೆ ಕಾವಲು ಮತ್ತು ಮೇಲುಸ್ತುವಾರಿ ಸಿಬ್ಬಂದಿಗೆ ನಿರ್ಮಿಸಿದ ವಸತಿ ಗೃಹಗಳು ಜೂಜಾಟದ ಕೇಂದ್ರಗಳಾಗಿ ಮಾರ್ಪಟ್ಟಿವೆ. ಕೆರೆ ಸುತ್ತ ನಿರ್ಮಿಸಿದ ಒಡ್ಡಿನ ಮೇಲ್ಭಾಗದ ರಸ್ತೆಯನ್ನು ಗಿಡ–ಮರಗಳು ಮುಚ್ಚಿಕೊಂಡಿವೆ. ವಾಹನ ಸವಾರರು ಸಂಚರಿಸದಂಥ ಸ್ಥಿತಿ ನಿರ್ಮಾಣವಾಗಿದೆ.

‘ಮುಳ್ಳು–ಕಂಟಿ ಮಧ್ಯೆ ವಿದ್ಯುತ್‍ ಪರಿವರ್ತಕ ಜಲಾವೃತಗೊಂಡು ಅಪಾಯದ ಮುನ್ಸೂಚನೆ ನೀಡುತ್ತಿದೆ. ಕೆರೆ ಒಡ್ಡಿನ ಒಳ ಮೈಯ ಕಲ್ಲಿನ ಚಾಪು ಅಲ್ಲಲ್ಲಿ ಕುಸಿದಿದೆ. ಕೆರೆ ಅಂಗಳ ಹಾಗೂ ಒಡ್ಡಿನ ಮೇಲೆ ಬೆಳೆದ ಮುಳ್ಳು–ಕಂಟಿ, ಕಸ–ಕಡ್ಡಿ ತ್ಯಾಜ್ಯವನ್ನು ತೆರವು ಮಾಡಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು’ ಎಂದು ಸಮಾಜ ಸೇವಕ ಅಕ್ರಂಪಾಷ ಒತ್ತಾಯಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಮಾತನಾಡಿ, ‘ಕೆರೆ ಅಂಗಳದ ಕೆಲ ಪ್ರದೇಶದಲ್ಲಿ ಹಾಗೂ ಒಡ್ಡಿನ ಮೇಲೆ ಮುಳ್ಳು–ಕಂಟಿ, ಗಿಡ–ಮರ ಬೆಳೆದಿರುವುದು ನಿಜ. ಕೆರೆಯಲ್ಲಿ ನೀರು ಕಡಿಮೆ ಆಗಿದೆ. ಮುಳ್ಳು–ಕಂಟಿ ಮತ್ತು ಕಸ–ಕಡ್ಡಿ ತೆರವಿಗೆ ಈಗಾಗಲೇ ಸೂಚಿಸಲಾಗಿದೆ. ನೀರು ಭರ್ತಿ ಮಾಡುವಷ್ಟರಲ್ಲಿ ಸ್ವಚ್ಛತಾ ಕಾರ್ಯ ಮುಗಿಯಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT