ಗುರುವಾರ , ನವೆಂಬರ್ 26, 2020
22 °C

ರಾಯಚೂರು: ಈದ್ ಮಿಲಾದ್ ಸರಳ ಆಚರಣೆಗೆ ಕರೆ

ಬಾವಸಲಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯ ಅನ್ವಯ ಸರಳ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಆಚರಿಸಲು ಮುಸ್ಲಿಮರು ಮುಂದಾಗಿದ್ದಾರೆ.

ಪ್ರತಿವರ್ಷ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಮರು ತಮ್ಮ ಮನೆಗಳಲ್ಲಿ ಹೋಳಿಗೆ, ಕಡುಬು ಹಾಗೂ ಇತರೆ ಸಿಹಿ ಪದಾರ್ಥ ತಯಾರಿಸಿ ಪರಸ್ಪರ ನೆರೆಹೊರೆಯವರಿಗೆ ಹಂಚುತ್ತಾರೆ. ಪ್ರಮುಖ ಮಸೀದಿ ಹಾಗೂ ದರ್ಗಾಗಳಲ್ಲಿ ದಾನಿಗಳು ಊಟ ಮಾಡಿಸುವುದು ಸಂಪ್ರದಾಯ. ಇಸ್ಲಾಮಿನ ರಬಿವುಲ್ ಅವ್ವಲ್ ತಿಂಗಳಲ್ಲಿ ಈ ಹಬ್ಬ ಬರುವ ಕಾರಣ ಒಂದು ತಿಂಗಳ ಕಾಲ ಮಸೀದಿಗಳಲ್ಲಿ ಮೌಲಿದ್ ಪಾರಾಯಣ (ಮುಹಮ್ಮದ್ ಫೈಗಂಬರ್ ಅವರ ಕೀರ್ತನೆ) ಮಾಡಲಾಗುತ್ತಿದೆ.

ಮೆರವಣಿಗೆ: ಹಬ್ಬದ ನಿಮಿತ್ತ ಮುಸ್ಲಿ ಸಮಾಜದಿಂದ ಎಲ್ಲಾ ಬಡಾವಣೆಗಳ ಪ್ರಮುಖ ಮಸೀದಿಗಳಿಂದ ಮುಹಮ್ಮದ್ ಫೈಗಂಬರ್ ಅವರ ಜನ್ಮಸ್ಥಳ ಮೆಕ್ಕಾ ಹಾಗೂ ಇಸ್ಲಾಂ ಪ್ರಚಾರ ಅರಂಭಿಸಿದ ಮದೀನಾ ನಗರಗಳ ಸ್ಥಬ್ದ ಚಿತ್ರದ ಮೆರವಣಿಗೆ ಮಾಡಲಾಗುತ್ತದೆ. ಆಯಾ ಬಡಾವಣೆಗಳಿಂದ ತೀನ್ ಖಂದಿಲ್ ಮೂಲಕ ಅರಬ್ ಮೊಹಲ್ಲಾ ವರೆಗೆ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯುದ್ದಕ್ಕೂ ಮುಹಮ್ಮದ ಅವರ ಕುರಿತ ನಾತೆ, ಕವ್ವಾಲಿಗಳು ಹಾಡಲಾಗುತ್ತದೆ. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮೆರವಣಿಗೆ(ಜುಲೂಸ್) ರದ್ದು ಮಾಡಲಾಗಿದೆ.

ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಎಲ್ಲಾ ಪಂಗಡದ ಜನರು ಆಚರಿಸುತ್ತಾರೆ. ಹಬ್ಬದ ನಿಮಿತ್ತ ಪ್ರತಿಮನೆ, ಮಸೀದಿಗಳನ್ನು ವಿದ್ಯುತ್ ದೀಪದ ಅಲಂಕಾರ ಮಾಡಲಾಗುತ್ತದೆ. ಪ್ರವಾದಿ ಮುಹಮ್ಮದ್ ಅವರು ಮಾನವಿಯತೆ, ಪರಸ್ಪರ ಸಹೋದರತೆ, ದಯೆ, ದಾನದ ಮಹತ್ವನ್ನು ಸಾರಿದ್ದಾರೆ ಹಾಗೂ ತಮ್ಮ ಜೀವನದುದ್ದಕ್ಕೂಪಾಲಿಸಿಕೊಂಡು ಸಮಸ್ತ ಮುಸಲ್ಮಾನರಿಗೆ ಬೋಧನೆ ಮಾಡಿದ್ದಾರೆ. ಆದ್ದರಿಂದ ಅವರ ಜನ್ಮದಿನದ ಈದ್ ಮಿಲಾದ್ ಸಂದರ್ಭದಲ್ಲಿ ಎಲ್ಲಾ ಮಸೀದಿಗಳಲ್ಲಿ ಅನ್ನ ಸಂತರ್ಪಣೆ ಮಾಡಲಾಗುತ್ತದೆ. 

‘ಪ್ರವಾದಿ ಮುಹಮ್ಮದ್ ಅವರು ಬಡವರ ಹಾಗೂ ಹಸಿವೆ ಹೆಚ್ಚಿನ ಮಹತ್ವ ನೀಡಿದ ಕಾರಣ ಹಬ್ಬದಂದು ಅನ್ನ ಸಂತರ್ಪಣೆ ಮಾಡುವುದು ಸಂಪ್ರದಾಯ. ಉಳ್ಳವರು ಮಸೀದಿಗಳಲ್ಲಿ ಊಟ ಮಾಡಿಸುವುದು ಹಾಗೂ ಬಡವರಿಗೆ ಬಟ್ಟೆ, ನಗದು ದಾನ ಮಾಡುವ ಸಂಪ್ರದಾಯವೂ ಇದೆ. ಅವರ ಅನುಯಾಯಿ ಮುಸ್ಲಿಮರೆಲ್ಲರೂ ಈ ಸಂಪ್ರದಾಯ ಪಾಲನೆ ಮಾಡುತ್ತಾ ಬಂದಿದ್ದಾರೆ’ ಎಂದು ಫಾತಿಮಾ ಮಸೀದಿಯ ಇಮಾಮ್ ನಿಜಾಮುದ್ದೀನ್ ಅವರು ಪ್ರತಿಕ್ರಿಯೆ ನೀಡಿದರು.

‘ಮಿಲಾದ್ ಅಂದರೆ ಹುಟ್ಟು, ಪ್ರವಾದಿ ಮುಹಮ್ಮದ್ ಅವರ ಹುಟ್ಟಿದ ದಿನವನ್ನು ಹಬ್ಬದ ಆಚರಣೆ ಮಾಡಲಾಗುತ್ತದೆ. ಮನೆ, ಮಸೀದಿಗಳ ಅಲಂಕಾರ ವಿಶೇಷವಾಗಿರುತ್ತದೆ. ಹೀಗಾಗಿ ಹಲವರು ಮದರಸಾಗಳ ಮಕ್ಕಳಿಗೆ ಹಾಗೂ ಬಡ ಜನರಿಗೆ ಬಟ್ಟೆದಾನ ಮಾಡಲಾಗಿದೆ. ಹಬ್ಬದ ಆಚರಣೆಯ ಒಟ್ಟು ಉದ್ದೇಶ ಪರಸ್ಪರ ಸಹೋದರತೆ, ಪರಧರ್ಮ ಸಹಿಷ್ಣುತೆ, ಮಾನವೀಯ ಮೌಲ್ಯಗಳನ್ನು ತಿಳಿಸುವುದಾಗಿದೆ. ನಾವಿರುವ ಆಡಳಿತದಲ್ಲಿ ಸರ್ಕಾರದ ಆದೇಶ ಪಾಲನೆ ಮುಖ್ಯವಾಗಿದ್ದು ಸರ್ಕಾರದ ಆದೇಶ ಪಾಲನೆ ಮಾಡಿ ಹಬ್ಬ ಆಚರಣೆ ಮಾಡಬೇಕು’ ಎನ್ನುವುದು ಏಕ್ ಮಿನಾರ್ ಮಸೀದಿಯ ಇಮಾಮ್ ಮೊಹಮ್ಮದ್ ಸುಕುರ್ ಸಾಬ್ ಅವರ ಸಲಹೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.