ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಒತ್ತು: ಬಸವರಾಜ ಪಾಟೀಲ ಇಟಗಿ

ಕಾಂಗ್ರೆಸ್ ಜಿಲ್ಲಾ‌ ಘಟಕದ ನೂತನ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ ಹೇಳಿಕೆ
Published 7 ಏಪ್ರಿಲ್ 2024, 15:35 IST
Last Updated 7 ಏಪ್ರಿಲ್ 2024, 15:35 IST
ಅಕ್ಷರ ಗಾತ್ರ

ರಾಯಚೂರು: 'ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರೊಂದಿಗೆ ಸಮಾಲೋಚಿಸುವ ಮೂಲಕ ಪಕ್ಷ ಬಲವರ್ಧನೆಗೆ ಕೆಲಸ ಮಾಡುವೆ. ಎಲ್ಲ ಕಾರ್ಯಕರ್ತರು ಅಗತ್ಯ ಸಹಕಾರ ನೀಡಬೇಕು’ ಎಂದು ಕಾಂಗ್ರೆಸ್ ಜಿಲ್ಲಾ‌ ಘಟಕದ ನೂತನ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ ಮನವಿ ಮಾಡಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ‘ಒಂದು ಕುಟುಂಬದಲ್ಲಿಯೇ ಅನೇಕ ಭಿನ್ನಾಭಿಪ್ರಾಯಗಳಿರುತ್ತವೆ  ಅದರಂತೆ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ನಾನು ಎಲ್ಲರೊಂದಿಗೆ ಸಮನ್ವಯತೆ ಸಾಧಿಸಿ ಸಮಸ್ಯೆಗೆ  ಪರಿಹಾರ ಕಂಡುಕೊಳ್ಳುತ್ತೇನೆ.  ಪಕ್ಷದ ಎಐಸಿಸಿ ಅಧ್ಯಕ್ಷ, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ವಿಶ್ವಾಸವಿಟ್ಟು ನೀಡಿರುವ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವೆ‘ ಎಂದು ಹೇಳಿದರು.

‘ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕಾಗಿದೆ. ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರಿಶ್ರಮದ ಫಲವಾಗಿ ದೊರೆತ 371(ಜೆ) ವಿಶೇಷ ಸ್ಥಾನಮಾನದಿಂದ ಯಾವುದೇ ಒಂದುಜಾತಿ, ಧರ್ಮ ವರಿಗೆ ಮಾತ್ರವಲ್ಲ ಎಲ್ಲರಿಗೂ ಅನುಕೂಲವಾಗಿದೆ. ಪಕ್ಷದ ಕಾರ್ಯಕರ್ತರು ಜನರಿಗೆ ತಿಳಿಸಿ ಹೇಳಬೇಕು ಎಂದು ಮನವಿ ಮಾಡಿದರು.

‘ಇನ್ನು ಕೆಲ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳೂ ಬರಲಿವೆ. ಪಕ್ಷಕ್ಕಾಗಿ ದುಡಿದವರನ್ನುಗುರುತಿಸಿ ಅಧಿಕಾರ ನೀಡವ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ. ಸರ್ಕಾರ ನಾಮನಿರ್ದೇಶನಗಳಲ್ಲಿಯೂ ಅವಕಾಶ ಒದಗಿಸುವ ಕೆಲಸ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ‘ದೇಶದಲ್ಲಿ ಕಾಂಗ್ರೆಸ್ ಬಲಹೀನವಾಗಿರುವುದನ್ನು ಒಪ್ಪಲೇಬೇಕು. ಆದರೆ ಎಲ್ಲರೂ ಸೇರಿ ಕೆಲಸ ಮಾಡಿದರೆ ಪಕ್ಷ ಅಧಿಕಾರಕ್ಕೆ ಬರುವ ಸಂಶಯವೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿದರೆ 20ಕ್ಕೂ ಅಧಿಕ ಸ್ಥಾನ ಗೆಲ್ಲಲು ಸಾಧ್ಯವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಶಾಸಕ‌ ಬಸನಗೌಡ ದದ್ದಲ್ ಮಾತನಾಡಿ, ‘ಕಾಂಗ್ರೆಸ್‌ಗೆ ಸುದೀರ್ಘ ಇತಿಹಾಸವಿವೆ. ಪಕ್ಷ ಸಮುದ್ರದಂತಿದೆ. ಪಕ್ಷ ಕಾರ್ಯಕರ್ತರು ಅಧಿಕಾರ ಸಿಕ್ಕಿಲ್ಲವೆಂದು ಮುನಿಸಿಕೊಳ್ಳದೇ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಇಂದಲ್ಲ ನಾಳೆ ನಿಮ್ಮ ಮನೆಗೆ ಅಧಿಕಾರ ಬರುತ್ತದೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಮಾಜಿ ಶಾಸಕ ಸೈಯದ್ ಯಾಸೀನ್, ಕೆಪಿಸಿಸಿ ಕಾರ್ಯದರ್ಶಿ ರಾಮಣ್ಣ ಇರಬಗೇರಾ, ಮಹ್ಮದ ಶಾಲಂ, ಜಿ.ಬಸವರಾಜರೆಡ್ಡಿ, ರಾಜಶೇಖರ ನಾಯಕ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ಅಬ್ದುಲ್ ಕರೀಂ, ಸಾಜೀದ್ ಸಮೀರ್,ಆಂಜಿನೇಯ ಕುರಬದೊಡ್ಡಿ, ಜಿ.ಶಿವಮೂರ್ತಿ, ತಾಯಣ್ಣನಾಯಕ, ದೇವಣ್ಣನಾಯಕ, ಪ್ರೇಮಲತಾ, ಶಶಿಕಲಾ ಭೀಮರಾಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT