ಗುಜರಾತ್‌ನಲ್ಲೂ ಪ್ರಧಾನಿಯನ್ನು ನಂಬುತ್ತಿಲ್ಲ: ರಾಹುಲ್‌ ಗಾಂಧಿ

ಸೋಮವಾರ, ಮೇ 27, 2019
33 °C
ರಾಯಚೂರಿನಲ್ಲಿ ನಡೆದ ಪ್ರಚಾರ ಸಭೆ

ಗುಜರಾತ್‌ನಲ್ಲೂ ಪ್ರಧಾನಿಯನ್ನು ನಂಬುತ್ತಿಲ್ಲ: ರಾಹುಲ್‌ ಗಾಂಧಿ

Published:
Updated:
Prajavani

ರಾಯಚೂರು: ‘ಪ್ರಧಾನಿ ನರೇಂದ್ರ ಮೋದಿ ದೇಶ ಅಭಿವೃದ್ಧಿ ಮಾಡುವುದು ದೂರದ ವಿಷಯ. ಮುಖ್ಯಮಂತ್ರಿ ಆಗಿದ್ದಾಗ ಗುಜರಾತ್‌ ರಾಜ್ಯ ಕೂಡಾ ಅಭಿವೃದ್ಧಿ ಮಾಡಿಲ್ಲ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಗುಜರಾತ್‌ ಜನರೂ ಪ್ರಧಾನಿಯನ್ನು ನಂಬುತ್ತಿಲ್ಲ’ ಎಂದು ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ರೈತರ ಸಮಸ್ಯೆ ಹಾಗೂ ಉದ್ಯೋಗ ಸೃಷ್ಟಿ ವಿಷಯಗಳನ್ನು ಪ್ರಧಾನಿ ಎಲ್ಲಿಯೂ ಪ್ರಸ್ತಾಪ ಮಾಡುತ್ತಿಲ್ಲ. ರಕ್ಷಣೆಗೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸಿ ಭಾವನಾತ್ಮಕ ಮಾಡುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳು ಏನಾದವು ಎಂಬುದರ ಬಗ್ಗೆ ಚರ್ಚಿಸುತ್ತಿಲ್ಲ’ ಎಂದರು.

‘ದೇಶ ರಕ್ಷಣೆಗೆ ಸಂಬಂಧಿಸಿದಂತೆ ನನ್ನ ಎರಡು ಸಂದೇಹಗಳಿಗೆ ಪ್ರಧಾನಿ ಉತ್ತರ ಕೊಡಬೇಕು. ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ಏಕಾಯಿತು ಮತ್ತು ಎಚ್‌ಎಎಲ್‌ ಸಿಗಬೇಕಿದ್ದ ವಿಮಾನ ಖರೀದಿ ಗುತ್ತಿಗೆಯನ್ನು ಅನಿಲ ಅಂಬಾನಿಗೆ ಏಕೆ ವಹಿಸಲಾಯಿತು’ ಎಂದು ಕೇಳಿದರು.

‘ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ, ದೇಶದಲ್ಲಿ ಖಾಲಿ ಇರುವ 22 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶೇ 20 ರಷ್ಟಿರುವ ಐದು ಕೋಟಿ ಬಡ ಕುಟುಂಬಗಳ ಬ್ಯಾಂಕ್‌ ಖಾತೆಗೆ ಪ್ರತಿ ವರ್ಷ ₹72 ಸಾವಿರ ಜಮಾಗೊಳಿಸಲಾಗುವುದು. ಜಿಎಸ್‌ಟಿ ನೀತಿಯನ್ನು ಸರಳೀಕರಣ ಮಾಡಲಾಗುವುದು’ಎಂದು ಹೇಳಿದರು.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾತನಾಡಿ, ’ದೇಶದಲ್ಲಿ ಎನ್‌ಡಿಎ ವಿರೋಧಿ ಅಲೆಯಿದ್ದು, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದಿಕ್ಕಾಪಾಲಾಗಿ ಓಡಿ ಹೋಲಿದ್ದಾರೆ’ ಎಂದರು.

‘ಆಂಧ್ರದಲ್ಲಿ ತೆಲುಗು ದೇಶಂ ಪ್ರಚಂಡ ಬಹುತದಿಂದ ಅಧಿಕಾರಕ್ಕೆ ಬರಲಿದೆ. ದೇಶದಲ್ಲಿಯೂ ಬಿಜೆಪಿ ಹೊರತು ಪಡಿಸಿ ಅನ್ಯ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸುಳ್ಳು ಹೇಳಿ ಜನರನ್ನು ಬಿಜೆಪಿ ಮರಳು ಮಾಡುತ್ತಿದೆ’ ಎಂದು ಕಿಡಿಕಾರಿದರು.

ಮತಯಂತ್ರದ ಜೊತೆ ವಿವಿ ಪ್ಯಾಟ್ ರಸೀದಿಗಳನ್ನು ಎಣಿಕೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮಾತನಾಡಿ, ‘ಮೂರು ರಾಜ್ಯಗಳಲ್ಲಿ ಬಿಜೆಪಿ ಸೋತ ಬಳಿ ಪ್ರಧಾನಿ ನರೇಂದ್ರ ಮೋದಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಲಬೆರಿಕೆ ಸರ್ಕಾರ ಎಂದು ಟೀಕಿಸುವ ನೈತಿಕತೆ ಅವರಿಗಿಲ್ಲ’ ಎಂದು ಗುಡುಗಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಬಾಗಲಕೋಟೆಯಲ್ಲಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಾಕೋಟ್‌ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಪಾಕಿಸ್ತಾನದ ಮೇಲೆ ಬಿಜೆಪಿ ಒಂದು ಸಲ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದೆ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ 12 ಬಾರಿ ಸರ್ಜಿಕಲ್‌ ಸ್ಟ್ರೈಕ್‌ ನಡೆದಿವೆ. ದೇಶ ಸ್ವಾತಂತ್ರ್ಯ ಪಡೆದ ನಂತರ ಪಾಕಿಸ್ತಾನದ ವಿರುದ್ಧ ನಡೆದ ಮೊದಲ ಯುದ್ಧದ ವೇಳೆ ಪ್ರಧಾನಿ ನರೇಂದ್ರ ಮೋದಿ ಇನ್ನು ಹುಟ್ಟಿರಲಿಲ್ಲ’ ಎಂದು ಲೇವಡಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಸಂಸದರಾದ ವೀರಪ್ಪ ಮೊಯ್ಲಿ, ಕೆ.ಎಚ್‌. ಮುನಿಯಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !