ಸಿಂಧನೂರು: ನಗರದ ಪಟೇಲವಾಡಿಯಲ್ಲಿ ಪತಿಯೊಬ್ಬರು ನೇಣು ಬಿಗಿದು ಪತ್ನಿಯನ್ನು ಕೊಲೆ ಮಾಡಿದ ಘಟನೆ ನಡೆದಿದ್ದು, ಪತಿಯನ್ನು ಬಂಧಿಸಲಾಗಿದೆ.
ನಾಗರಾಜ ಬಂಧಿತ ಆರೋಪಿ. ನಗರದ ನಟರಾಜ ಕಾಲೊನಿಯ ಭುವನೇಶ್ವರಿ (31) ಮೃತರು.
ತಾಲ್ಲೂಕಿನ ಹೊಸಳ್ಳಿ ಇ.ಜೆ ಗ್ರಾಮದ ನಾಗರಾಜ ಹಾಗೂ ಭುವನೇಶ್ವರಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿ 14 ವರ್ಷಗಳಾಗಿವೆ. ಇಬ್ಬರು ಪುತ್ರಿಯರಿದ್ದಾರೆ. ಆರಂಭದ ಮೂರ್ನಾಲ್ಕು ವರ್ಷ ಸುಖವಾಗಿದ್ದರು. ನಂತರದ ದಿನಗಳಲ್ಲಿ ಪತಿ ನಾಗರಾಜ ಪ್ರತಿನಿತ್ಯ ಮದ್ಯ ಸೇವಿಸಿ ಪತ್ನಿಗೆ ಹೊಡೆದು ದೌರ್ಜನ್ಯ ನಡೆಸಿ, ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದರು. ಈ ಕುರಿತು ಅನೇಕ ಬಾರಿ ಹಿರಿಯರು ಬುದ್ಧಿ ಹೇಳಿದರೂ ಸರಿಪಡಿಸಿಕೊಂಡಿರಲಿಲ್ಲ ಎಂದು ಮೃತ ಭುವನೇಶ್ವರಿ ತಾಯಿ ಲಲಿತಮ್ಮ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಹೊಸಳ್ಳಿ ಇ.ಜೆ ಗ್ರಾಮ ಬಿಟ್ಟು ನಗರದ ಪಟೇಲವಾಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಲ್ಲಿಯೂ ಪ್ರತಿನಿತ್ಯ ದುಡಿಯದೆ, ಮದ್ಯಸೇವಿಸಿ ಬಂದು ಜಗಳ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಪತ್ನಿ ಭುವನೇಶ್ವರಿಗೆ ಹೊಡೆದಿದ್ದು, ಪ್ರಜ್ಞೆ ತಪ್ಪಿ ಬಿದ್ದಾಗ ಕೊರಳಿಗೆ ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸ್ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ ತನಿಖೆ ಕೈಗೊಂಡಿದ್ದಾರೆ.
ಆಕ್ರಂದನ: ಭುವನೇಶ್ವರಿ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮೃತಳ ತಂದೆ–ತಾಯಿ, ಸಂಬಂಧಿಕರು ಹಾಗೂ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.