ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವದುರ್ಗ: ಕೃಷ್ಣಾ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹ ಆತಂಕ

ಯಮನೇಶ
Published : 29 ಆಗಸ್ಟ್ 2024, 15:48 IST
Last Updated : 30 ಆಗಸ್ಟ್ 2024, 5:01 IST
ಫಾಲೋ ಮಾಡಿ
Comments

ದೇವದುರ್ಗ: ತಾಲ್ಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಆತಂಕದ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ 30 ಗೇಟ್ ಮೂಲಕ 1.8 ಲಕ್ಷ ಕ್ಯುಸೆಕ್‌ ನೀರು ಗುರುವಾರ ಕೃಷ್ಣಾ ನದಿಗೆ ಹರಿಸಲಾಯಿತು.

‘ಜುಲೈ ತಿಂಗಳಲ್ಲಿ ಸುಮಾರು 20 ದಿನಗಳ ಕಾಲ ಜಲಾಶಯದಿಂದ 3 ಲಕ್ಷ ಕ್ಯುಸೆಕ್‌ ಅಧಿಕ ನೀರು ಹರಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮದ ನದಿ ತೀರದ ಸುಮಾರು 703 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ’ ಎಂದು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಇತ್ತ ಜಿಲ್ಲಾಡಳಿತದಿಂದ ಬೆಳೆ ಪರಿಹಾರಕ್ಕೂ ಮುಂಚೆ ರೈತರು ಮತ್ತೆ ಪ್ರವಾಹದ ಆತಂಕದಲ್ಲಿದ್ದಾರೆ.

ನಾರಾಯಣಪುರದ ಬಸವಸಾಗರ ಜಲಾಶಯದಿಂದ 2.5 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಿದರೆ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಾಹನ ಸಂಚಾರವನ್ನು ತಡೆಯುತ್ತಾರೆ. ಇದರಿಂದ ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳ ಸಂಪರ್ಕ ಕಡಿತಗೊಳ್ಳಲಿದೆ.

ಹೆಚ್ಚಿನ ಹೊರಹರಿವಿನಿಂದ ಕೃಷ್ಣಾ ನದಿ ಪಾತ್ರದ ತಾಲ್ಲೂಕಿನ 30ಕ್ಕೂ ಹೆಚ್ಚಿನ ಹಳ್ಳಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ನದಿ ದಂಡೆಯ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ‘ಪ್ರತಿಬಾರಿ ಮಳೆಗಾಲದಲ್ಲಿ ನದಿಗೆ 2.50 ಲಕ್ಷ ಕ್ಯುಸೆಕ್ ನೀರು ಹರಿಸಿದರೆ ಈ ಸೇತುವೆ ಮುಳುಗಡೆಯಾಗುತ್ತದೆ. ಹೀಗಾಗಿ ಇದನ್ನು ಎತ್ತರಿಸಬೇಕು ಎಂದು ಜನಪ್ರತಿನಿಧಿಗಳಿಗೆ ಗ್ರಾಮಸ್ಥರು 2009ರಿಂದ ಸತತ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಹೂವಿನಹೆಡಗಿ ಗ್ರಾ.ಪಂ.ಸದಸ್ಯ ಶಿವನಗೌಡ.

ಸೇತುವೆ ಮುಳುಗಡೆಯಾಗಿದ್ದರಿಂದ ವ್ಯಾಪಾರ ವಹಿವಾಟಿಗೆ ಸಮಸ್ಯೆ ಆಗಿದೆ. ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಮತ್ತೆ ಬೆಳೆ ಕೊಳೆತು ಹೋಗುವ ಸಾಧ್ಯತೆ ಇದೆ. ಇಲ್ಲಿ ಬ್ರಿಡ್ಜ್‌ ಕಂ ಬ್ಯಾರೆಜ್ ನಿರ್ಮಿಸಲು ಹಲವು ಬಾರಿ ಒತ್ತಾಯಿಸಿದರೂ ಜನಪ್ರತಿನಿಧಿಗಳು ಗಮನಹರಿಸಿಲ್ಲ ಎಂದು ನದಿ ತೀರದ ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.

3 ಲಕ್ಷ ಕ್ಯುಸೆಕ್ ಮೇಲ್ಪಟ್ಟು ನೀರು ಹರಿದರೆ ತಾಲ್ಲೂಕಿನ ಅಂಜಳ, ಅಂಚೇಸೂಗುರು, ಲಿಂಗದಳ್ಳಿ, ಹೇರುಂಡಿ, ವೋಗಡಂಬಳಿ, ಜೋಳದಹೆಡಗಿ, ಪರತಾಪುರ, ಮೇದರಗೋಳ, ಕರ್ಕಿಹಳ್ಳಿ, ಕೊಪ್ಪರ, ಹೀರೆರಾಯಕುಂಪಿ, ಚಿಕ್ಕರಾಯಕುಂಪಿ, ಮದರಕಲ್, ಅಪ್ರಾಳ ಮತ್ತು ಬಸಂಪುರ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಲಿವೆ. ‘ತಾಲ್ಲೂಕು ಆಡಳಿತದ ವತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಪ್ರಜಾವಾಣಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT