ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | 75 ವರ್ಷಗಳಿಂದ ಕಚೇರಿಗಳಿಗೆ ಜಾಗವೇ ಸಿಗುತ್ತಿಲ್ಲ

Published 4 ಡಿಸೆಂಬರ್ 2023, 5:45 IST
Last Updated 4 ಡಿಸೆಂಬರ್ 2023, 5:45 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಅಸ್ತಿತ್ವಕ್ಕೆ ಬಂದಾಗಲೇ ಉದಯವಾದ ರಾಯಚೂರು ಜಿಲ್ಲೆ 75ನೇ ವರ್ಷ ಆಚರಿಸಿಕೊಂಡರೂ ಸರ್ಕಾರಿ ಕಟ್ಟಡಗಳ ಮೂಲಸೌಕರ್ಯದ ಗೋಳೇ ಮುಗಿದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರಾಜಕಾರಣಿಗಳ ನಿರಾಸಕ್ತಿಯಿಂದಾಗಿಯೇ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ.

ರಾಜಕಾರಣಿಗಳು ಹಾಗೂ ಅವರ ಹಿಂಬಾಲಕರು ಬೃಹತ್‌ ಕಟ್ಟಡಗಳನ್ನು ಕಟ್ಟಿ ಸರ್ಕಾರಿ ಕಚೇರಿಗಳಿಗೇ ಬಾಡಿಗೆ ಕೊಟ್ಟಿದ್ದಾರೆ. ಅವರ ವೈಯಕ್ತಿಕ ಆದಾಯಕ್ಕೆ ಕತ್ತರಿ ಬೀಳುವ ಕಾರಣ ಇಲಾಖೆಗಳ ಕಚೇರಿ ಕಟ್ಟಡಗಳ ನಿರ್ಮಾಣಕ್ಕೆ ಅವರು ಇಂದಿಗೂ ಆಸಕ್ತಿ ತೋರಿಸುತ್ತಿಲ್ಲ.

ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಬೀದರ್‌ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿಯ ಚಿತ್ರಣವನ್ನೇ ಬದಲಾಯಿಸಿದರು. 10 ವರ್ಷಗಳಲ್ಲೇ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ರಾಯಚೂರಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿ ಇಲಾಖೆಗಳ ಮುಖ್ಯಸ್ಥರೂ ಒಲ್ಲದ ಮನಸ್ಸಿನಿಂದ ಜಿಲ್ಲೆಗೆ ಬಂದು ಹೋಗುತ್ತಾರೆ. ಅಭಿವೃದ್ಧಿ ಅಂದರೆ ಅವರಿಗೆ ಅಸಡ್ಡೆ. ಜಿಲ್ಲೆಗೆ ಇಂದಿಗೂ ಒಬ್ಬ ಒಳ್ಳೆಯ ಅಧಿಕಾರಿಯೂ ಬಂದಿಲ್ಲ.

ನಗರದ ಯಾವುದೇ ಬಡಾವಣೆಗೆ ಹೋದರೂ ಅಲ್ಲಿ ದೊಡ್ಡ ಮನೆಗಳಲ್ಲೇ ಬಾಡಿಗೆಯಲ್ಲಿ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಜಾತಿ, ಸಮುದಾಯದ ಭವನಗಳಿಗೆ ದೊರೆಯುವ ಜಾಗ ಸರ್ಕಾರಿ ಕಚೇರಿಗಳಿಗೆ ಹೇಗೆ ಸಿಗುವುದಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

‘ರಾಯಚೂರು ಹೊರವಲಯದ ಅಸ್ಕಿಹಾಳದಲ್ಲಿ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಿ ಎರಡು ವರ್ಷವಾಗಿದೆ. ಅಲ್ಲಿಗೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಿಸುವುದು ಒಂದೆ ಇರಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಚೇರಿಗಳನ್ನೂ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧವಿಲ್ಲ. ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಹೇಳಿ ಹೇಳಿ ಮಾಧ್ಯಮ ಪ್ರತಿನಿಧಿಗಳ ಧ್ವನಿಯೂ ನಿಂತು ಹೋಗಿದೆ. ಕಾರಣ ಇಲ್ಲಿ ಅಧಿಕಾರಿಗಳದ್ದೇ ಕಾರಭಾರು. ಯಾರ ಮಾತಿಗೂ ಇಲ್ಲಿ ಬೆಲೆ ಇಲ್ಲ’ ಎಂದು ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಹಾಗೂ ಸಾಮಾಜಿಕ ಕಾರ್ಯಕರ್ತ ಸಾದಿಕ ಪಾಶಾ ಬೇಸರ ವ್ಯಕ್ತಪಡಿಸುತ್ತಾರೆ

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಿಗಮಗಳ ಕಚೇರಿಗಳು, ವಾರ್ತಾ ಇಲಾಖೆಯ ಕಚೇರಿ, ಹೀಗೆ ಪಟ್ಟಿ ಮಾಡುತ್ತ ಹೋದರೆ ಕಚೇರಿಗಳೇ ಇಲ್ಲದ ಇಲಾಖೆಗಳ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತದೆ. 2018ರಲ್ಲಿ ಸರ್ಕಾರವೇ ಮಾಹಿತಿ ಕೇಳಿತ್ತು. ಅದನ್ನೂ ಸಹ ರಾಯಚೂರು ಜಿಲ್ಲಾಡಳಿತ ಕೊಡಲಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಸರಿಯಾದ ಮಾಹಿತಿ ಸಂಗ್ರಹವಿಲ್ಲ. ಇನ್ನು ತಾಲ್ಲೂಕು ಕಚೇರಿಗಳ ಸಮಸ್ಯೆ ಹೇಳ ತೀರದು.

11 ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ

ಮಾನ್ವಿ ಪಟ್ಟಣದಲ್ಲಿ ವಿವಿಧ ಇಲಾಖೆಗಳ 11 ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿವೆ. ಮಿನಿ ವಿಧಾನಸೌಧ ನಿರ್ಮಾಣದ ‌ಹಿನ್ನೆಲೆಯಲ್ಲಿ ಈ ಕಚೇರಿಗಳು ಸ್ವಂತ ಕಟ್ಟಡ ಹೊಂದಿಲ್ಲ.

ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕಾಗಿ ಪಟ್ಟಣದ ಪ್ರವಾಸಿ ಮಂದಿರ ಹತ್ತಿರ ಇರುವ ಜಲಸಂಪನ್ಮೂಲ ಇಲಾಖೆಗೆ ಸೇರಿದ 4ಎಕರ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ ನಾಲ್ಕು ವರ್ಷಗಳು ಗತಿಸಿವೆ. ಆದರೆ ಕಟ್ಟಡ‌ ನಿರ್ಮಾಣ ಕಾಮಗಾರಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಮಾನ್ವಿ ಪಟ್ಟಣದಲ್ಲಿ ಆಹಾರ ನಿರೀಕ್ಷಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಭೂ ದಾಖಲೆಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೇಷ್ಮೆ ಇಲಾಖೆ, ಕಾರ್ಮಿಕ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಸಹಕಾರ ಸಂಘಗಳ ಲೆಕ್ಕಪರಿಶೋಧಕರ ಕಚೇರಿ, ಅಬಕಾರಿ ಇಲಾಖೆ ಕಚೇರಿಗಳು ಸ್ವಂತ ಕಟ್ಟಡವಿಲ್ಲದೆ ದಶಕಗಳಿಂದ ಬಾಡಿಗೆ ಕಟ್ಟಡದಲ್ಲಿವೆ. ಇದು ಸರ್ಕಾರದ ಇಲಾಖೆಗಳ ಬೊಕ್ಕಸಕ್ಕೆ ಹೊರೆಯಾಗಿದೆ.

ಸ್ವಂತ ಕಟ್ಟಡಕ್ಕೆ ಮೀನಮೇಷ

ಲಿಂಗಸುಗೂರು: ತಾಲ್ಲೂಕು ಕೇಂದ್ರದಲ್ಲಿ ಶಿಶು ಅಭಿವೃದ್ದಿ ಯೋಜನೆ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಕಾರ್ಮಿಕ, ಹಿಂದುಳಿದ ವರ್ಗಗಳ ಕಲ್ಯಾಣ, ಅಬಕಾರಿ, ನಗರ ಯೋಜನಾ ಪ್ರಾಧಿಕಾರ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಸೆರಿದಂತೆ ಕೆಲ ಸಂಸ್ಥೆಗಳ ಕಚೇರಿಗಳು ಖಾಸಗಿ ಕಟ್ಟದಲ್ಲಿ ನಡೆಯುತ್ತಿವೆ.
ರಾಜಕೀಯ ಮುಖಂಡರ ಹಿಂಬಾಲಕರ ಹಿತಾಸಕ್ತಿ ಕಾಪಾಡಲು ಅಧಿಕಾರಿಗಳೇ ದುಬಾರಿ ಬಾಡಿಗೆ ನೀಡಿ ಖಾಸಗಿ ಕಟ್ಟಡಗಳಲ್ಲಿ ಕಚೇರಿ ನಡೆಸುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳಿಗೆ ಅಭಿವೃದ್ಧಿಯ ಮನಸಿಲ್ಲ. ಅಧಿಕಾರಿಗಳಿಗೆ ಕೆಲಸದ ಆಸಕ್ತಿ ಇಲ್ಲ. ಪರಿಣಾಮ ಸರ್ಕಾರದ ಹಣ ಪೋಲಾಗುತ್ತಿದೆ.

ಮುದಗಲ್‌ದಲ್ಲಿ ಸಹ ರೈತ ಸಂಪರ್ಕ ಕೇಂದ್ರ, ಖಜಾನೆ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

2020-21 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹ 50 ಲಕ್ಷ ಅನುದಾನದಲ್ಲಿ ರೈತ ಸಂಪರ್ಕ ಕಟ್ಟಡ ನಿರ್ಮಾಣ ಕಾಮಗಾರಿಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಚಾಲನೆ ನೀಡಿದರೂ ಅರ್ಧಕ್ಕೆ ನಿಂತಿದೆ. ಹೀಗಾಗಿ ₹ 14 ಸಾವಿರ ಬಾಡಿಗೆ ಇರುವ ಖಾಸಗಿ ಕಟ್ಟಡದಲ್ಲಿ ಅನಿವಾರ್ಯವಾಗಿ ರೈತ ಸಂಪರ್ಕ ಕೇಂದ್ರ ನಡೆಸಬೇಕಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ದೇವದುರ್ಗ ತಾಲ್ಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ಮತ್ತು ಕಾರ್ಮಿಕ ಇಲಾಖೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಿದ್ದು ಬಹುತೇಕ ಇಲಾಖೆಗಳ ಅಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಆದರೆ ಸಮಾಜ ಕಲ್ಯಾಣ ಇಲಾಖೆಯ ಊದು ವಸತಿ ನಿಲಯ ಮತ್ತು ಪರಿಶಿಷ್ಟ ಪಂಗಡ ಇಲಾಖೆ 1 ವಸತಿ ನಿಲಯ ಬಾಡಿಗೆ ಕಟ್ಟಡ ಕಟ್ಟಡದಲ್ಲಿ ನಡೆಯುತ್ತಿವೆ. ಎಲ್ಲಾ ವಸತಿ ನಿಲಯಗಳ ಕಟ್ಟಡ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ.

ಖಾಸಗಿ ಕಟ್ಟಡಗಳದ್ದೆ ದರ್ಬಾರ್

ಸಿರವಾರ : ಪಟ್ಟಣ ತಾಲ್ಲೂಕು ಕೇಂದ್ರವಾಗಿ 6 ವರ್ಷಗಳಾದರೂ ಕೇವಲ ನಾಲ್ಕು ಇಲಾಖೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ತಹಶೀಲ್ದಾರ್‌ ಕಚೇರಿ ಹೊರತು ಪಡಿಸಿ ಉಳಿದ ಇಲಾಖೆಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ತಹಶೀಲ್ದಾರ್ ಕಚೇರಿಯನ್ನು ನೀರಾವರಿ ಇಲಾಖೆಯ ಸಣ್ಣ ಕೊಠಡಿಯೊಂದರಲ್ಲಿ ನಡೆಸುಲಾಗುತ್ತಿದೆ. ತಾಲ್ಲೂಕು ಪಂಚಾಯಿತಿ, ಖಜಾನೆ ಇಲಾಖೆ, ಸಿಡಿಪಿಒ ಇಲಾಖೆ ಬಾಡಿಗೆ ಕಟ್ಟಡಗಳನ್ನು ಹೊಂದಿವೆ. ತಾಲ್ಲೂಕು ಪಂಚಾಯಿತಿ, ಸಿಡಿಪಿಒ ಕಚೇರಿಗಳು ಇರುವ ಕಟ್ಟಟದ ಮೇಲ್ಭಾಗದ ಕೊಠಡಿಗಳಲ್ಲಿ ಇರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ‌. ತಿಂಗಳಿಗೆ ₹40 ಸಾವಿರ ಬಾಡಿಗೆ ಕಟ್ಟಡದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಕ್ಕೆ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಬೀಳುತ್ತಿದೆ.

ಜಾಗ ಮಂಜೂರಾದರೂ ಕ್ರಮ ಕೈಗೊಳ್ಳಲು ಸಿದ್ಧರಿಲ್ಲ

ಕವಿತಾಳ: ಪಟ್ಟಣದಲ್ಲಿ ಉಪ ತಹಶೀಲ್ದಾರ್ ಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಗಳು ದಶಕಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಟ್ಟಣದ ಹಳೆಯ ಬಸ್ ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿರುವ ಇಲ್ಲಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿನ ಕಟ್ಟಡದಲ್ಲಿರುವ ಉಪ ತಹಶೀಲ್ದಾರ್ ಕಚೇರಿ ಹಾಗೂ ನೆಮ್ಮದಿ ಕೇಂದ್ರಕ್ಕೆ ಮಾಸಿಕ ₹ 11 ಸಾವಿರ ಮತ್ತು ಎಪಿಎಂಸಿ ಗೋದಾಮಿನಲ್ಲಿನ ನೆಮ್ಮದಿ ಕೇಂದ್ರಕ್ಕೆ ಮಾಸಿಕ ₹7500 ಬಾಡಿಗೆ ನೀಡಲಾಗುತ್ತಿದೆ ಎಂದು ಸಂಬ್ಬಂದಪಟ್ಟ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ‘ಉಪ ತಹಶೀಲ್ದಾರ್ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರ್ಕಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮೊರಾರ್ಜಿ ಶಾಲೆಯ ಹತ್ತಿರ ತಲಾ ಒಂದು ಎಕರೆ ಜಾಗ ಮಂಜೂರಾಗಿದ್ದು ಕಟ್ಟಡ ನಿರ್ಮಾಣ ಮಾಡುವ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಗಳು ಕ್ರಮ ಕೈಗೊಳ್ಳುತ್ತಾರೆ’ ಎನ್ನುತ್ತಾರೆ ಗ್ರಾಮ ಆಡಳಿತಾಧಿಕಾರಿ ಸದಾಕ್ ಅಲಿ. ‘ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪಟ್ಟಣದ ಹೊರವಲಯದಲ್ಲಿದ್ದು ಆಟೊ ವ್ಯವಸ್ಥೆ ಇಲ್ಲದೆ ಹಳ್ಳಿಗಳಿಂದ ಬರುವ ಜನರು ಕಾಲ್ನಡಿಗೆಯಲ್ಲಿ ಅಲ್ಲಿಗೆ ಹೋಗಬೇಕಿದೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹತ್ತಿರದಲ್ಲಿ ಕಚೇರಿಗಳನ್ನು ನಿರ್ಮಿಸುವುದು ಅಗತ್ಯ’ ಎಂದು ಸಂಘಟನೆ ಕವಿತಾಳದ ನಿವಾಸಿ ಅಲ್ಲಮಪ್ರಭು ಹೇಳಿದರು.

ವಾಲ್ಮೀಕಿ ಭವನದಲ್ಲಿ ಕಚೇರಿ

ಮಸ್ಕಿ: ನೂತನ ತಾಲ್ಲೂಕು ಕೇಂದ್ರವಾದ ನಂತರ ತಹಶೀಲ್ದಾರ್ ಕಚೇರಿ ತಾಲ್ಲೂಕು ಪಂಚಾಯಿತಿ ಕಚೇರಿ ಮಾತ್ರ ಆರಂಭವಾಗಿವೆ. ತಹಶೀಲ್ದಾರ್ ಕಚೇರಿ ಸರ್ಕಾರಿ ಸಾಮ್ಯದ ಸಾಮರ್ಥ್ಯ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ತಾಲ್ಲೂಕು ಪಂಚಾಯಿತಿ ಕಚೇರಿ ಸರ್ಕಾರ ಅನುದಾನದಲ್ಲಿ ನಿರ್ಮಿಸಿದ ವಾಲ್ಮೀಕಿ‌ ಭವನದಲ್ಲಿ ನಡೆಯುತ್ತಿದೆ. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಯ ಕೊಠಡಿಯೊಂದರಲ್ಲಿ ಆರಂಭಿಸಲಾಗಿದೆ. ಖಜಾನೆ ಇಲಾಖೆ ಕಚೇರಿ ಖಾಸಗಿ ಕಟ್ಟದಲ್ಲಿದೆ. ಅದಕ್ಕೆ ಮಾಸಿಕ ₹ 20 ಸಾವಿರ ಬಾಡಿಗೆ ಪಾವತಿಸಲಾಗುತ್ತಿದೆ. ಸಿವಿಲ್ ಸಂಚಾರಿ ನ್ಯಾಯಾಲಯ ಎಪಿಎಂಸಿ ಕಟ್ಟಡದಲ್ಲಿ ನಡೆಯುತ್ತಿವೆ. ಇದಕ್ಕೆ. ಮಾಸಿಕ ಬಾಡಿಗೆ ₹30 ಸಾವಿರ ಕೊಡಲಾಗುತ್ತಿದೆ. ನೀರಾವರಿ ಇಲಾಖೆಗೆ ಸೇರಿದ ಹತ್ತು ಎಕರೆ ಜಾಗ ಹೊಸ ನ್ಯಾಯಾಲಯ ನಿರ್ಮಾಣಕ್ಕೆ ಪಡೆಯುವ ಸಂಬಂಧ ನೀರಾವರಿ ಇಲಾಖೆ ಹಾಗೂ ಕಾನೂನು ಇಲಾಖೆ ನಡುವೆ ಮಾತುಕತೆ ನಡೆದಿದೆ. ಶೀಘ್ರ ಭೂಮಿ ಕಾನೂನು ಇಲಾಖೆಗೆ ಹಸ್ತಾಂತ ನಡೆಯಲಿದೆ. ಉಳಿದಂತೆ ಯಾವುದೇ ಸರ್ಕಾರಿ ಕಚೇರಿಗಳು ಪ್ರಾರಂಭವಾಗಿಲ್ಲ.

ಬಾಡಿಗೆ ವಿಪರೀತ ಹಣ ವ್ಯಯ

ಸಿಂಧನೂರು: ತುರ್ವಿಹಾಳ ಮತ್ತು ಸಿಂಧನೂರು ಸಿಡಿಪಿಒ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಒಂದಕ್ಕೆ ₹32500 ಹಾಗೂ ಇನ್ನೊಂದಕ್ಕೆ ₹17700 ಬಾಡಿಗೆ ಪಾವತಿಸಲಾಗುತ್ತಿದೆ. ನಿವೇಶನ ಇಲ್ಲದ ಕಾರಣ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರಾಗಿಲ್ಲ ಎನ್ನುತ್ತಾರೆ ಸಿಡಿಪಿಒ ಲಿಂಗನಗೌಡ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳು ಅಳತೆ ಮತ್ತು ತೂಕದ ಇಲಾಖೆ ಕಾರ್ಮಿಕ ನಿರೀಕ್ಷಕರ ಕಚೇರಿ ಸಹಕಾರ ಸಂಘಗಳ ನೋಂದಣಿ ಅಧಿಕಾರಿ‌ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿವೆ. ನಗರ ಆರೋಗ್ಯ ಕೇಂದ್ರವೂ ಬಾಡಿಗೆ ಕಟ್ಟಡದಲ್ಲಿದೆ. ತುರ್ವಿಹಾಳದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ತುರ್ವಿಹಾಳ ವಲಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ

ಸಹಕಾರ: ಬಸವರಾಜ ಭೋಗಾವತಿ, ಮಂಜುನಾಥ ಬಳ್ಳಾರಿ, ಡಿ.ಎಚ್‌.ಕಂಬಳಿ, ಬಸವರಾಜ ನಂದಿಕೋಲಮಠ, ಯಮನೇಶ ಗೌಡಗೇರಾ, ಪ್ರಕಾಶ ಮಸ್ಕಿ, ಅಮರೇಶ ನಾಯಕ, ಶರಣಪ್ಪ ಆನೆಹೊಸೂರು, ಪಿ.ಕೃಷ್ಣ ಸಿರವಾರ

ರಾಯಚೂರಿನ ಟ್ಯಾಂಕ್‌ ಬಂಡ ರಸ್ತೆಯಲ್ಲಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿ
ರಾಯಚೂರಿನ ಟ್ಯಾಂಕ್‌ ಬಂಡ ರಸ್ತೆಯಲ್ಲಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿ
ಕವಿತಾಳದ ಬಾಡಿಗೆ ಗೋದಾಮಿನಲ್ಲಿರುವ ರೈತ ಸಂಪರ್ಕ ಕೇಂದ್ರ
ಕವಿತಾಳದ ಬಾಡಿಗೆ ಗೋದಾಮಿನಲ್ಲಿರುವ ರೈತ ಸಂಪರ್ಕ ಕೇಂದ್ರ
ಮಾನ್ವಿಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿ
ಮಾನ್ವಿಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿ
ದೇವದುರ್ಗ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ
ದೇವದುರ್ಗ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ
ಸಿಂಧನೂರು ಪಟ್ಟಣದಲ್ಲಿರುವ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ
ಸಿಂಧನೂರು ಪಟ್ಟಣದಲ್ಲಿರುವ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT