ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು | ಕೆಳಭಾಗಕ್ಕೆ ನೀರು ಹರಿಸಲು ಒತ್ತಾಯ

ಡಿಸೈನ್ ಪ್ರಕಾರ ಪೈಪ್‍ಗಳ ಅಳವಡಿಕೆಗೆ ಆಗ್ರಹ: ನೀರಾವರಿ ಇಲಾಖೆಯ ಕಚೇರಿ ಎದುರು ಧರಣಿ
Published 18 ಜೂನ್ 2024, 14:28 IST
Last Updated 18 ಜೂನ್ 2024, 14:28 IST
ಅಕ್ಷರ ಗಾತ್ರ

ಸಿಂಧನೂರು: ಎಲ್ಲ ವಿತರಣಾ ಕಾಲುವೆಗಳಿಗೆ ಡಿಸೈನ್ ಪ್ರಕಾರ ಪೈಪ್‍ಗಳನ್ನು ಅಳವಡಿಸಿ, ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕ ಮಂಗಳವಾರ ನಗರದ ಪಿಡಬ್ಲ್ಯುಡಿ ಕ್ಯಾಂಪಿನಲ್ಲಿರುವ ನೀರಾವರಿ ಇಲಾಖೆಯ ಉಪವಿಭಾಗದ ಕಚೇರಿಯ ಎದುರು ಧರಣಿ ನಡೆಸಿತು.

‘46ನೇ ವಿತರಣಾ ಕಾಲುವೆ ವ್ಯಾಪ್ತಿಯ ಚಿರತನಾಳ ಗ್ರಾಮ ಟೆಲೆಂಡ್‍ಗೆ ಒಳಪಟ್ಟಿದ್ದು, ವಿತರಣಾ ಕಾಲುವೆಯ ಒಳಭಾಗದ 17 ಹಂಚಿಕೆ ಪೈಪುಗಳು ಡಿಸೈನ್ ಮತ್ತು ನಕ್ಷೆ ಪ್ರಕಾರ ಇಲ್ಲ. ಟೆಲೆಂಡ್‍ಗೆ ಗೇಜ್ ಅಳವಡಿಸದೆ ಇರುವುದರಿಂದ ಗ್ರಾಮದ ರೈತರಿಗೆ ನೀರು ಸಿಗುತ್ತಿಲ್ಲ’ ಎಂದು ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು ದೂರಿದರು.

‘ವಿತರಣಾ ಕಾಲುವೆ 54ರ 3ಆರ್ ಒಳಭಾಗದಲ್ಲಿ ಸುಮಾರು 14 ಪೈಪ್‍ಗಳು ಡಿಸೈನ್ ಪ್ರಕಾರ ಇಲ್ಲ. ಟ್ರ್ಯಾಕ್ಟರ್, ಆಯಿಲ್ ಎಂಜಿನ್, ಸೈಫಾನ್ ಪೈಪ್ ಮುಖಾಂತರ ಅನಧಿಕೃತಗಾಗಿ ಕಾಲುವೆ ನೀರು ಬಳಸಿಕೊಳ್ಳಲಾಗುತ್ತಿದೆ. ಮುಖ್ಯಕಾಲುವೆ 119ನೇ ಸಲಹಾ ಸಮಿತಿಯಲ್ಲಿ ಹೇಳಿರುವ ಆನ್-ಆಫ್ ಪದ್ಧತಿಯನ್ನು ರೈತರು ಒಪ್ಪುವುದಿಲ್ಲ. ಪ್ರಭಾವಿ ರಾಜಕಾರಣಿಗಳು ಮುಖ್ಯಕಾಲುವೆಯಿಂದ ಎಡಭಾಗದಲ್ಲಿ ಅಕ್ರಮ ನೀರಾವರಿ ಮಾಡಿಕೊಂಡಿದ್ದು, ಇದನ್ನು ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಮಲ್ಲಾಪೂರ ಹಾಗೂ ದೇವರಗುಡಿ ಗ್ರಾಮದ 2 ಸಾವಿರ ಎಕರೆ ನೀರಾವರಿಗಾಗಿ ದೇವರಗುಡಿ ಪಿಕ್‍ಅಪ್ ಯೋಜನೆ ಮಾಡಲಾಗಿದೆ. ಹಿಂದಿನ ಗುತ್ತಿಗೆದಾರರು ಪೈಪ್‍ಗಳ ಮಧ್ಯ ರಿಂಗ್ ಜೋಡಿಸಿಲ್ಲ. ನೀರು ಲಿಕೇಜ್ ಆಗುತ್ತಿರುವುದರಿಂದ ಈ ಯೋಜನೆ ನಿಂತು ಹೋಗಿದೆ. ಕೂಡಲೇ ನೀರು ಲಿಕೇಜ್ ಬಂದ್ ಮಾಡಿ ದೇವರಗುಡಿ ಪಿಕ್‍ಅಪ್‍ಗೆ ಮರುಜೀವ ನೀಡಬೇಕು’ ಎಂದು ಒತ್ತಾಯಿಸಿದರು.

‘ಬೂತಲದಿನ್ನಿ ಗ್ರಾಮದ ಸೀಮೆಯಲ್ಲಿ ಬರುವ 7ಆರ್ ಕಾಲುವೆಯನ್ನು ಸ್ವಚ್ಛಗೊಳಿಸಿ, ದುರಸ್ತಿ ಮಾಡಬೇಕು. ಕಳೆದ ವರ್ಷ ರೈತರು ತಮ್ಮ ಸ್ವಂತ ಹಣಕಾಸಿನ ನೆರವಿನಿಂದ ₹40 ಸಾವಿರ ಖರ್ಚು ಮಾಡಿ ಕಾಲುವೆ ಸ್ವಚ್ಛ ಮಾಡಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕರಿಗೆ ಮಾಹಿತಿ ನೀಡಲಾಗಿತ್ತು. ರೈತರು ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವುದಾಗಿ ತಿಳಿಸಿದರು. ಆದರೆ ಇಲ್ಲಿಯವರೆಗೆ ಮರುಪಾವತಿ ಮಾಡಿಲ್ಲ’ ಎಂದರು.

ಧರಣಿ ಸ್ಥಳಕ್ಕೆ ಬಂದ ಮಸ್ಕಿ ಉಪವಿಭಾಗದ ಎಇಇ ದಾವಲಸಾಬ, ತುರ್ವಿಹಾಳ ಉವಿಭಾಗದ ಎಇಇ ಹನುಮಂತಪ್ಪ, ಸಿಂಧನೂರು ಉಪವಿಭಾಗದ ಅಧೀಕ್ಷಕ ಶಿವಕುಮಾರ ಹಾಗೂ ತಾ.ಪಂ ಎಡಿಎಲ್‍ಆರ್ ಆಲಂಬಾಷಾ ಅವರು ಮನವಿ ಪತ್ರ ಸ್ವೀಕರಿಸಿ ಕೆಲಕಾಲ ಚರ್ಚಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ವಿರೂಪಾಕ್ಷಿಗೌಡ ಕಲ್ಲೂರು, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ ಮಾವಿನಮಡ್ಗು, ನಾಗೇಶಗೌಡ ಕಲ್ಲೂರು, ಬಾವಿಕಟ್ಟಿ ಯಂಕೋಬ, ನಾಗಪ್ಪ ಹಂಚಿನಾಳ, ಜಗನ್ನಾತರೆಡ್ಡಿ, ವೀರೇಶ ಪಾಟೀಲ ಚಿರತನಾಳ, ಶರಣಪ್ಪ ಚಿರತನಾಳ, ಗೋನಪ್ಪ ದೇವರಗುಡಿ, ಮಲ್ಲಿಕಾರ್ಜುನ ಮುಳ್ಳೂರು, ಬಸವರಾಜ ಮಾಲಿಪಾಟೀಲ, ಎಂ.ಗೋಪಾಲಕೃಷ್ಣ, ಶರಭಣ್ಣ ನಾಗಾಲಾಪೂರ, ಯಂಕಪ್ಪ ಕೆಂಗಲ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT