ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಪಿ ಹೆಸರಲ್ಲಿ ವಂಚನೆ: ಬಿತ್ತನೆ ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿ

ಬಿತ್ತನೆ ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿ ಬ್ಲ್ಯಾಕ್‌ಮೇಲ್
ಅಕ್ಷರ ಗಾತ್ರ

ಲಿಂಗಸುಗೂರು: ಮುಂಗಾರು ಬಿತ್ತನೆ ಕಾರ್ಯ ಚುರುಕುಗೊಂಡಿದ್ದು ಮಾರುಕಟ್ಟೆಯಲ್ಲಿ ಬಿತ್ತನೆ ಬೀಜಗಳ ಮಾರಾಟ ಮನಸೋ ಇಚ್ಛೆ ನಡೆಯುತ್ತಿದ್ದು, ರೈತರು ಹಣ ಹಿಡಿದು ಪ್ಯಾಕೆಟ್‍ ಬೀಜ ಪಡೆಯಲು ಹರಸಾಹಸ ಪಡುತ್ತಿರುವ ಚಿತ್ರಣ ಸಾಮಾನ್ಯವಾಗಿದೆ.

ಕೃಷಿ ಇಲಾಖೆಯು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೇಡಿಕೆ ಆಧಾರಿತ ಸೂರ್ಯಕಾಂತಿ ಬಿತ್ತನೆ ಬೀಜ ಪೂರೈಸುತ್ತಿಲ್ಲ. ಗಂಗಾ ಕಾವೇರಿ ಮತ್ತು ಕಾವೇರಿ ಸಂಕ್ರಾಂತಿ ಪ್ಯಾಕೆಟ್‍ ರಿಯಾಯಿತಿ ದರದಲ್ಲಿ ನೀಡುತ್ತಿದ್ದು ಸಾಕಾಗುತ್ತಿಲ್ಲ. ಪ್ರತಿ ವರ್ಷ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರದಲ್ಲಿ ಮಾರುತ್ತಿದ್ದ ಇಲಾಖೆ ಈ ಬಾರಿ ಅತ್ಯಂತ ಕಡಿಮೆ ದರದಲ್ಲಿ ಪೂರೈಸುತ್ತಿರುವುದು ಸಂತಸದ ಸಂಗತಿ..

ರೈತ ಸಂಪರ್ಕ ಕೇಂದ್ರದಲ್ಲಿ ಗಂಗಾ ಕಾವೇರಿ ₹1790 ನಿಗದಿ ಮಾಡಿದೆ. ಇದಕ್ಕೆ ಶೇ 50 ರಿಯಾಯಿತಿ ನೀಡಿ ₹ 1630 ಮತ್ತು ಶೇ 90ರ ರಿಯಾಯಿತಿ ದರದಲ್ಲಿ ₹1550ಕ್ಕೆ ಪೂರೈಸಲಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಗಂಗಾ ಕಾವೇರಿ ಪ್ಯಾಕೆಟ್‍ ₹ 2600 ರಿಂದ ₹ 2800ಕ್ಕೆ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.

ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಗೆ ಕಾರಣವಾದ ಮೈ ಸೀಡ್‍ ಕಂಪನಿಯ ‘ತೇಜ್‍’ ಸೂರ್ಯಕಾಂತಿ ಪ್ಯಾಕೇಟ್‌ನ ಎಂ.ಆರ್‍.ಪಿ ದರ ₹ 4700 ಇದ್ದು ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ₹ 2200, ₹ 3000, ₹ 3500 ಸೇರಿದಂತೆ ದಿನಕ್ಕೊಂದು ದರದಲ್ಲಿ ಮಾರಾಟ ಆಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಸ್ಯಾಂಡೋಜ್‍ ಕಂಪನಿಯ ಬೀಜ ಎಂ.ಆರ್‍.ಪಿ ರೂ 2600 ಇದ್ದು ಮಾರುಕಟ್ಟೆಯಲ್ಲಿ ₹ 3100 ರಿಂದ ₹ 3200 ವರೆಗೆ ಹೆಚ್ಚಿನ ದರ ಪಡೆದು ಮಾರಾಟ ಮಾಡುತ್ತಿದ್ದಾರೆ. ಐಟಿಸಿ ಕಂಪನಿ ಬೀಜ ಎಂ.ಆರ್‍.ಪಿ ದರ ₹ 2400 ಇದ್ದು ಮಾರುಕಟ್ಟೆಯಲ್ಲಿ ₹ 3000 ದಿಂದ ₹ 3200 ವರೆಗೆ ಮನಸೋ ಇಚ್ಛೆ ಮಾರಾಟ ಮಾಡುತ್ತಿರುವ ಬಗ್ಗೆ ರೈತರು ದೂರಿದ್ದಾರೆ.

‘ಗಂಗಾಕಾವೇರಿ ಎಂ.ಆರ್‌.ಪಿ ದರ ₹ 2500 ಇದ್ದು ಮಾರುಕಟ್ಟೆಯಲ್ಲಿ ₹ 2800, ₹ 3000, ₹ 3100 ರಂತೆ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಕೃಷಿ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಎಂ.ಆರ್‍.ಪಿ ಹೆಚ್ಚಿಸಿ ವಂಚಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ’ ಎಂದು ರೈತ ಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ಇಲಾಖೆ ಉಪ ನಿರ್ದೇಶಕಿ ಎನ್‍.ಸರಸ್ವತಿ ಮಾತನಾಡಿ, ‘ಮಾರುಕಟ್ಟೆಯಲ್ಲಿ ಅಂಗಡಿ ಮಾಲೀಕರು ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮನಸೋ ಇಚ್ಛೆ ಮಾರಾಟ ಮಾಡುತ್ತಿರುವ ದೂರುಗಳು ಬಂದಿವೆ. ಸಹಾಯಕ ಕೃಷಿ ನಿರ್ದೇಶಕರ ನೇತೃತ್ವ ತಂಡವೊಂದನ್ನು ರಚಿಸಿದ್ದು ಗುಪ್ತ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ. ಹೆಚ್ಚುವರಿ ದರಕ್ಕೆ ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT