ಸೋಮವಾರ, ಮೇ 23, 2022
27 °C
ಬಾಯಾರಿಕೆಯಿಂದ ಬಳಲುವವರ ಒಡಲಿಗೆ ಉಚಿತ ತಂಪುಪಾನೀಯ, ಮಜ್ಜಿಗೆ, ನೀರಿನ ಸೇವೆ

ಬಿಸಿಲಿಗೆ ಬಳಲಿದವರಿಗೆ ದಾನಿಗಳ ಉಪಚಾರ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಬೇಸಿಗೆ ಬಿಸಿಲಿಗೆ ಬಾಯಾರಿಕೆಯಿಂದ ಬಳಲುವವರಿಗೆ ಜಿಲ್ಲೆಯಾದ್ಯಂತ ಸಾಕಷ್ಟು ದಾನಿಗಳು ಉಚಿತವಾಗಿ ತಂಪುಪಾನೀಯ ಹಾಗೂ ಜೀವಜಲ ಕೊಟ್ಟು ಉಪಚರಿಸುತ್ತಿದ್ದಾರೆ.

ಯಾವುದೇ ಪ್ರಚಾರವಿಲ್ಲದೆ, ಅಪೇಕ್ಷೆಯಿಲ್ಲದೆ ತಮ್ಮಷ್ಟಕ್ಕೆ ತಾವೇ ಅರವಟಿಗೆಗಳನ್ನು ಇಟ್ಟು ಶುದ್ಧ ನೀರು ಪೂರೈಸುತ್ತಿದ್ದಾರೆ. ಜನರು ಉಚಿತ ಉಪಚಾರದ ಅನುಕೂಲತೆ ಪಡೆದುಕೊಳ್ಳಲಿ ಎನ್ನುವ ಕಾರಣಕ್ಕಾಗಿ ಕೆಲವು ದಾನಿಗಳು ಪ್ರಚಾರಕ್ಕೂ ಹಣ ವ್ಯಯಿಸುತ್ತಿರುವುದು ವಿಶೇಷ. ಪ್ರತಿಯೊಂದು ಧರ್ಮದವರು ದಾನದಲ್ಲಿ ನಿರತರಾಗಿದ್ದಾರೆ.

ಗ್ರಾಮೀಣ ಭಾಗಗಳಿಂದ ಬರುವ ಜನರು ಮತ್ತು ಪ್ರವಾಸಿಗರು ಸಾಮಾನ್ಯವಾಗಿ ಬಿಸಿಲಿನಬಾಧೆಗೆ ಒಳಗಾಗುತ್ತಾರೆ. ಪದೇ ಪದೇ ಆಗುವ ಬಾಯಾರಿಕೆ ತಣಿಸಿಕೊಳ್ಳುವುದಕ್ಕೆ ನೀರು ಖರೀದಿಸುವುದು ಕೂಡಾ ಕೆಲವರಿಗೆ ಅಸಾಧ್ಯ. ಅಂಥವರಿಗೆಂದೇ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣ, ಸೂಪರ್‌ ಮಾರ್ಕೆಟ್‌, ತೀನ್‌ ಕಂದಿಲ್‌, ಮಹಾವೀರ್‌ ಸರ್ಕಲ್‌, ಗಂಜ್‌ ಸರ್ಕಲ್‌, ಎಪಿಎಂಸಿ ಗಂಜ್‌, ಬಸನಭಾವಿ ವೃತ್ತ, ಕೃಷಿ ವಿವಿ ಎದುರು ಸೇರಿದಂತೆ ವಿವಿಧೆಡೆ ನೀರಿನ ಅರವಟಿಗೆ ಸ್ಥಾಪಿಸಲಾಗಿದೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಜನರಿಗೆ ಉಚಿತವಾಗಿ ತಂಪು ಕೊಡುವ ಕಾರ್ಯವನ್ನು ಕೆಲವರು ವೃತದಂತೆ ಅಳವಡಿಸಿಕೊಂಡು ಮುಂದುವರಿಸಿದ್ದಾರೆ. ಶರಬತ್‌, ಮಜ್ಜಿಗೆ, ತಂಪಾದ ಮಡಿಕೆ ನೀರು.. ಹೀಗೆ ದಣಿದವರ ಒಡಲು ತಂಪಾಗಿರಲೆಂದು ಬಯಸುವವರು ಇದ್ದಾರೆ

ನೀರಿನ ಅರವಟಿಗೆ ಉದ್ಘಾಟನೆ

ದೇವದುರ್ಗ: ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ನಾಲ್ಕು ವರ್ಷದಿಂದ ಪಟ್ಟಣದ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ ವತಿಯಿಂದ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸುವ ಮೂಲಕ ಬಿಸಿಲಿಗೆ ಬಸವಳಿದ ಪಟ್ಟಣದ ಜನತೆಯ ದಾಹ ತಣಿಸಲಾಗುತ್ತಿದೆ.

‘ಮಾರ್ಚ್‌ ಬಳಿಕ ದಿನೇ ದಿನೇ ಬಿಸಿಲ ತಾಪ ಹೆಚ್ಚುತ್ತಿದೆ. ಪಟ್ಟಣದ ಪ್ರದೇಶದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಿಂದ ನಾನಾ ಕೆಲಸಗಳಿಗೆ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ಅಲ್ಲಲ್ಲಿ ಅರವಟಿಗೆ ಸ್ಥಾಪಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ವೀರೇಶ ಎನ್.ಹೊಸೂರು ಅವರು.

ಸಮಾಜ ಸೇವಕರು

ಸಿರವಾರ: ಬೇಸಿಗೆಯಲ್ಲಿ ಪಟ್ಟಣಕ್ಕೆ ಬರುವ ಹಳ್ಳಿ ಜನರಿಗೆ ವ್ಯಾಪಾರಕ್ಕೆ ಮನೆಯಿಂದ ಮಾರುಕಟ್ಟೆಗೆ ಬರುವ ಗ್ರಾಹಕರಿಗೆ ನೀರಿನ ದಾಹ ತೀರಿಸಲು ಹಲವಾರು ಸಂಘ ಸಂಸ್ಥೆಗಳು ಶುದ್ಧ ಕುಡಿಯುವ ನೀರಿನ ಅರವಟಿಗೆ ತೆರೆಯುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. 

ಪಟ್ಟಣದ ಬಸ್ ನಿಲ್ದಾಣ, ಬಸವ ವೃತ್ತ, ಚಿತ್ರ ಮಂದಿರ, ಮಾನ್ವಿ ಕ್ರಾಸ್ ಸೇರಿದಂತೆ ಮುಖ್ಯರಸ್ತೆಯುದ್ದಕ್ಕೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ 15 ಕ್ಕೂ ನೀರಿನ ಅರವಟಿಗೆಗಳನ್ನು ತೆರೆಯಲಾಗಿದೆ. ಕೆಲವು ಕಡೆ ಒಬ್ಬರೇ ನೀರಿನ ಅರವಟಿಗೆ ತೆರೆದರೆ ಕೆಲವು ಸಂಘ ಸಂಸ್ಥೆಗಳು ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. 

'ಕಳೆದ ಐದು ವರ್ಷಗಳಿಂದ ಶುದ್ದ ಕುಡಿಯುವ ನೀರಿನ ಅರವಟಿಗೆಯನ್ನು ಟೇಲರ್ ಅಂಗಡಿ ಮುಂದೆಯೇ ತೆರೆಯುತ್ತಿದ್ದು, ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ನೀರಿನ ದಾಹ ತೀರಿಸಲು ಸಹಕಾರಿಯಾಗಿದೆ. ಇದರಿಂದ ನಾವು ಸಣ್ಣ ಪ್ರಮಾಣ ಸೇವೆ ಸಲ್ಲಿಸಲು ಸಹಕಾರಿಯಾಗಿದೆ' ಎನ್ನುತ್ತಾರೆ ವಿಕಲಚೇತನರ ತಾಲ್ಲೂಕು ಘಟಕದ ಅಧ್ಯಕ್ಷ ನರಸಪ್ಪ ಟೇಲರ್ ಅವರು.
ದಾಹ ನೀಗಿಸಲು ಮುಂದಾದ ಕೈಗಳು

ಮಸ್ಕಿ: ಸುಡು ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರಿಗೆ ತಣ್ಣನೆಯ ಕುಡಿಯುವ ನೀರು ಒದಗಿಸಲು ಹಲವಾರು ಜನ ಮುಂದೆ ಬಂದಿದ್ದಾರೆ.

ಪಟ್ಟಣದಲ್ಲಿ ಪ್ರತಾಪಗೌಡ ಪಾಟೀಲ ಪೌಂಡೇಷನ್ ಕಡೆಯಿಂದ ಪ್ರಮುಖ ವಾಲ್ಮೀಕಿ ವೃತ್ತ, ಹಳೆಯ ಬಸ್ ನಿಲ್ದಾಣ ಹಾಗೂ ಅಶೋಕ ವೃತ್ತದಲ್ಲಿ ನೀರಿನ ಅರವಟಿಗೆ ಆರಂಭಿಸಲಾಗಿದೆ.

ದೇವದುರ್ಗದ ಶಾಸಕ ಕೆ. ಶಿವನಗೌಡ ನಾಯಕ ಹೆಸರಿನಲ್ಲಿ ಅವರ ಅಭಿಮಾನಿಗಳು ಪ್ರಮುಖ ಸ್ಥಳಗಳಲ್ಲಿ ನೀರಿನ ಅರವಟ್ಟಿಗೆ ಆರಂಬಿಸಿ ಜನರಿಗೆ‌ ನೀರಿನ ದಾಹ ತೀರಿಸಲು ಮುಂದಾಗಿದ್ದಾರೆ.

ಜಿಲ್ಲಾ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಪಟ್ಟಣದ ಸರ್ಕಲ್ ಇನ್ ಸ್ಪೆಕ್ಟರ್ ಹಾಗೂ ಸಬ್ ಇನ್ ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿ ಠಾಣೆಯ ಮುಂಗಾದ ಹೆದ್ದಾರಿ ಪಕ್ಕದಲ್ಲಿ ತಂಪು ನೀರು ಕೊಡುವ ಅರವಟಿಗೆ ಆರಂಭಿಸಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಆರಂಭಿಸಿದ ನೀರಿನ ಅರವಟಿಗೆ  ವ್ಯಾಪಾರಕ್ಕೆ ಬರುವ ನೂರಾರು ಜನರ ನೀರಿನ‌ ದಾಹ ತೀರಿಸುತ್ತಿದೆ. ಹಲವಾರು ಸಮಾಜದ ಸಂಘಟನೆಗಳು ಸಹ ವಿವಿಧೆಡೆ ನೀರಿನ ಅರವಟ್ಟಿಗೆ ಅರಂಭಿಸುವ ಮೂಲಕ ಬೇಸಿಗೆಯ ಸಂಕಷ್ಟದಲ್ಲಿ ನೀರು ಒದಗಿಸುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.