ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕ್ಕೆ ಸ್ಪೂರ್ತಿದಾಯಕ ಗಾಂಧೀಜಿ

ಮಹಾತ್ಮಗಾಂಧೀಜಿ 150ನೇ ಜಯಂತಿಯಲ್ಲಿ ಪ್ರಾಚಾರ್ಯ ಮಲ್ಲಿಕಾರ್ಜುನ ಹೇಳಿಕೆ
Last Updated 2 ಅಕ್ಟೋಬರ್ 2019, 14:08 IST
ಅಕ್ಷರ ಗಾತ್ರ

ರಾಯಚೂರು: ಮಹಾತ್ಮ ಗಾಂಧೀಜಿ ಭಾರತಕ್ಕೆ ಮಾತ್ರ ಸೀಮಿತವಲ್ಲ. ಅಹಿಂಸೆ ಹಾಗೂ ಸತ್ಯಾಗ್ರಹದ ಮೂಲಕ ಬ್ರಿಟಿಷರ ಆಳ್ವಿಕೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ವಿಶ್ವಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ ಎಂದು ಯರಮರಸ್‌ನ ಡಯಟ್‌ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಹೇಳಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಹತ್ತಿರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ಬುಧವಾರ ಆಯೋಜಿಸಿದ್ದ ಮಹಾತ್ಮಗಾಂಧೀಜಿಯ 150ನೇ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಚಿಂತನೆಗಳ ಕುರಿತು ಉಪನ್ಯಾಸ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಯಾವುದೇ ಅಧಿಕಾರಕ್ಕೆ ಆಸೆ ಪಡೆದ ನಿಸ್ವಾರ್ಥರಾಗಿ ಜೀವಿಸಿದರು. ನೆಲ್ಸನ್ ಮಂಡೇಲಾ ಸೇರಿದಂತೆ ಅಂತರರಾಷ್ಟ್ರೀಯ ಖ್ಯಾತಿಯವರಿಗೆ ಗಾಂಧಿ ಹೋರಾಟ ಪ್ರೇರಣದಾಯಕವಾಗಿತ್ತು. ಗಾಂಧೀಜಿಯ ಬಗ್ಗೆ ವಿದೇಶಿಯರು ಸೇರಿದಂತೆ ಹಲವು ವಿಶ್ವವಿದ್ಯಾಲಯಗಳು ಸುಧೀರ್ಘವಾಗಿ ಅಧ್ಯಯನ ಮಾಡುತ್ತಿವೆ. ಗಾಂಧೀಜಿಯವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು ಎಂದರು.

ಜಯಂತಿ ನಿಮಿತ್ತ ಗಾಂಧೀಜಿಯ ಪುತ್ಥಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಶಾಸಕ ಡಾ.ಶಿವರಾಜ ಪಾಟೀಲ, ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಉಪ ವಿಭಾಗಾಧಿಕಾರಿ ಸಂತೋಷ, ತಹಶೀಲ್ದಾರ್ ಹಂಪಣ್ಣ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯಿಂದ ಮಹಾತ್ಮಗಾಂಧೀಜಿಯ ಜೀವನ ಚರಿತ್ರೆ ಸಾರುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಬೊಳುವಾರು ಮಹಮದ್ ಕುಂಇ ರಚಿಸಿದ ‘ಪಾಪು ಬಾಪು’ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಸರ್ವಧರ್ಮ ಪ್ರಾರ್ಥನೆಯಲ್ಲಿ ಹಿಂದೂ ಧರ್ಮದ ಬಗ್ಗೆ ಲಕ್ಷ್ಮೀದೇವಿ, ಇಸ್ಲಾಂ ಧರ್ಮದ ಬಗ್ಗೆ ಸಲೀಂ ಪಾಷ, ಕ್ರೈಸ್ತ ಧರ್ಮದ ಬಗ್ಗೆ ರೆವರೆಂಡ್ ವಿಜಯಕುಮಾರ, ಬೌದ್ಧ ಧರ್ಮದ ಬಗ್ಗೆ ವಿದ್ಯಾಸಾಗಾರ್ ಪ್ರಾರ್ಥನೆ ನಡೆಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಜಿ.ರವಿರಾಜ, ನಗರಸಭೆ ಸದಸ್ಯರು, ಸ್ಕೌಟ್ಸ್ ಗೈಡ್ಸ್ ಮತ್ತು ಸೇವಾದಳದ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು. ದಂಡಪ್ಪ ಬಿರಾದಾರ ಸ್ವಾಗತಿಸಿದರು. ಮೊಹಮ್ಮದ್ ಅಲಂಪಾಷ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT