ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲಗಳಿಗೆ ತೆರಳಿ ರೈತರ ಸಮಸ್ಯೆ ಆಲಿಸಿ: ಸಚಿವ ಚೆಲುವರಾಯಸ್ವಾಮಿ

ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಚೆಲುವರಾಯ ಸ್ವಾಮಿ ಸೂಚನೆ
Published 6 ನವೆಂಬರ್ 2023, 14:16 IST
Last Updated 6 ನವೆಂಬರ್ 2023, 14:16 IST
ಅಕ್ಷರ ಗಾತ್ರ

ರಾಯಚೂರು: ‘ರಾಜ್ಯದಲ್ಲಿ ತೀವ್ರ ಬರ ಆವರಿಸಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಸರ್ಕಾರ ಈಗಾಗಲೇ ಸಮೀಕ್ಷೆ ನಡೆಸಿ ಬರಗಾಲ ತಾಲ್ಲೂಕುಗಳ ಪಟ್ಟಿ ಪ್ರಕಟಿಸಿದೆ. ಬರ ಸಮೀಕ್ಷಾ ವರದಿ ಸಲ್ಲಿಕೆಯಾಗಿದೆ. ಪರಿಹಾರ ಘೋಷಣೆ ಮಾಡಬೇಕಿದೆ ಎಂದರು.

‘ಜಿಲ್ಲಾ ಮಟ್ಟದಲ್ಲಿ ಕುಡಿಯುವ ನೀರು, ವಿದ್ಯುತ್, ಕೃಷಿ ಹಾಗೂ ಇತರೆ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಯಾವುದೇ ಇಲಾಖೆಗೆ ಸಂಬಂಧಿಸಿದ ರೈತರ ದೂರುಗಳಿದ್ದರೂ ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ನಿರ್ಲಕ್ಷ ವಹಿಸಬಾರದು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ನೆರವಾಗಬೇಕು’ ಎಂದು ಸಲಹೆ ನೀಡಿದರು.

‘ಫಸಲ್ ಬಿಮಾ ಯೋಜನೆಯಡಿ ರೈತರು ಹೆಸರು ನೋಂದಣಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಶೇಕಡ 98ರಷ್ಟು ಹಣವನ್ನು ಸರ್ಕಾರವೇ ಸಂದಾಯ ಮಾಡುತ್ತದೆ. ಬೆಳೆ ವಿಮೆ ಮಾಡಿಸಿದ ರೈತರಿಗೆ ಪರಿಹಾರ ಸಿಗದಿದ್ದಾಗ ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಸಹಜವಾಗಿ ಹಿಂಜರಿಯುತ್ತಾರೆ. ರೈತರ ಸಂದೇಹ, ಗೊಂದಲ ನಿವಾರಣೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು’ ಎಂದು ಹೇಳಿದರು.

ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ‘ಫಸಲ್ ಬಿಮಾ ಯೋಜನೆಯಡಿ ಬೆಳೆ ನೋಂದಣಿ ಮಾಡಿಕೊಂಡ ರೈತರಿಗೆ ಸಮರ್ಪಕ ಪರಿಹಾರ ಸಿಗುತ್ತಿಲ್ಲ. ವಿಮಾ ಕಂಪನಿಗಳಿಂದ ಮೋಸವಾಗುವ ಅನೇಕ ಪ್ರಕರಣಗಳು ದಾಖಲಾಗಿವೆ. ರೈತರ ಪರಿಹಾರ ತಲುಪದಿರಲು ಕಾರಣ ತಿಳಿದು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು’ ಎಂದು ಸೂಚಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ‘ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಬಿತ್ತನೆ ಗುರಿ 5,41,953 ಹೆಕ್ಟೇರ್ ಪ್ರದೇಶದ ಬದಲು ಕೇವಲ 4,56,092 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 52,452 ರೈತರು ನೋಂದಣಿ ಮಾಡಿದ್ದಾರೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಮಾನ್ವಿ ಶಾಸಕ ಹಂಪಯ್ಯ ನಾಯಕ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿಯ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಐಎಎಸ್ ಪ್ರೊಬೆಷನರಿ ಅಧಿಕಾರಿ ಸಾಹಿತ್ಯ ಆಲದಕಟ್ಟೆ ಇದ್ದರು.

‘ಗೃಹಲಕ್ಷ್ಮಿ: ಸಮಸ್ಯೆ ಪರಿಹರಿಸಿ’:

ಸಭೆಯಲ್ಲಿ ಸಚಿವರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಚರ್ಚಿಸುತ್ತ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯಡಿ ಅನೇಕ ಮಹಿಳೆಯರಿಗೆ ಪ್ರೋತ್ಸಾಹಧನ ಸಿಗುತ್ತಿಲ್ಲ ಎಂಬ ದೂರುಗಳು ಬಂದಿವೆ. ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಆದರೂ ಕೆಲ ಸಣ್ಣಪುಟ್ಟ ಸಮಸ್ಯೆಯಿದ್ದರೆ ಪರಿಹರಿಸಿಕೊಳ್ಳಬೇಕು. ಶೇ90ರಷ್ಟು ಜನ ಯೋಜನೆಯ ಪ್ರಯೋಜನ ಪಡೆದರೂ ಶೇ10ರಷ್ಟು ಜನ ವಂಚಿತರಾಗಿದ್ದಲ್ಲಿ ಯೋಜನೆ ಸಫಲವಾಗದೇ ಟೀಕೆಗೆ ಗುರಿಯಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನೆಯ ಬಗ್ಗೆ ಸಚಿವ ಎನ್.ಎಸ್.ಬೋಸರಾಜು ಕಾಳಜಿ ವಹಿಸಿದ್ದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT