ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಸರ್ಕಾರಿ ಆಸ್ಪತ್ರೆಗಳಿಗೆ ಬೇಕಿದೆ ಇನ್ನಷ್ಟು ಸೌಲಭ್ಯ

Published 5 ಫೆಬ್ರುವರಿ 2024, 7:06 IST
Last Updated 5 ಫೆಬ್ರುವರಿ 2024, 7:06 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಒಟ್ಟು‌ 50 ಪ್ರಾಥಮಿಕ ಆರೋಗ್ಯ ಕೇಂದ್ರ, 6 ಸಮುದಾಯ ಆರೋಗ್ಯ ಕೇಂದ್ರ ಹಾಗೂ 4 ತಾಲ್ಲೂಕು ಆರೋಗ್ಯ ಕೇಂದ್ರಗಳು ಇವೆ. ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇವತ್ತಿಗೂ ಪೂರ್ಣಪ್ರಮಾಣದಲ್ಲಿ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲ. ವೈದ್ಯರ ಕೊರತೆಯೇ ಹೆಚ್ಚು ಕಾಡುತ್ತಿದೆ.

ವೈದ್ಯರು, ವೈದ್ಯಕೀಯ ಸಿಬ್ಬಂದಿ, ಟೆಕ್ನಿಷಿಯನ್‌ಗಳನ್ನು ನೇಮಕ ಮಾಡದ ಕಾರಣ ವೈದ್ಯಕೀಯ ಉಪಕರಣಗಳು ತುಕ್ಕು ಹಿಡಿಯುವ ಸ್ಥಿತಿಗೆ ಬಂದಿವೆ. ಬೆರಳೆಣಿಕೆಯಷ್ಟು ವೈದ್ಯರು ಮಾತ್ರ ಉತ್ತಮ ಸೇವೆ ಒದಗಿಸುತ್ತಿದ್ದಾರೆ. ಬಹುತೇಕ ವೈದ್ಯರು ಕಚೇರಿ ಸಮಯದಲ್ಲೇ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಕೊಡುತ್ತಿರುವ ಕಾರಣ ರೋಗಿಗಳು ಪರದಾಡುವಂತಹ ಸ್ಥಿತಿ ಇದೆ.

50 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 50 ಆಂಬುಲೆನ್ಸ್ ಇರಬೇಕು. ಆದರೆ ಅನೇಕ ಕಡೆಗಳಲ್ಲಿ ಆಂಬುಲೆನ್ಸ್​ಗಳೇ ಇಲ್ಲ. ಇದೇ ಕಾರಣಕ್ಕೆ ಅಪಘಾತ ಆದಾಗ, ಹೆರಿಗೆಗೆ ಆಸ್ಪತ್ರೆಗೆ ಹೋಗಲು ಆಂಬುಲೆನ್ಸ್ ಇಲ್ಲದ ಕಾರಣ ಜನ ಅಕ್ಷರಶಃ ಪರದಾಡುತ್ತಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೆಚ್ಚು ಸಮಸ್ಯೆಯಾಗಿತ್ತು. ಆಂಬುಲೆನ್ಸ್‌ಗಳ ಕೊರತೆ, ಆಂಬುಲೆನ್ಸ್‌ ಇದ್ದರೂ ವೆಂಟಿಲೇಟರ್ ಇಲ್ಲದಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿತ್ತು. ಜಿಲ್ಲೆಯಲ್ಲಿ ಈಗಲೂ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ನಿರ್ಲಕ್ಷ್ಯ ವಹಿಸಿದರೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ.

ಅನೇಕ ಹುದ್ದೆಗಳು ಖಾಲಿ
ಕವಿತಾಳ: ಪ್ರತಿನಿತ್ಯ 200ಕ್ಕೂ ಅಧಿಕ ಹೊರ ರೋಗಿಗಳು ಚಿಕಿತ್ಸೆಗೆ ಬರುವ ಕವಿತಾಳದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್‌ ಮತ್ತು ತಜ್ಞ ವೈದ್ಯರ ಕೊರತೆ ಇದೆ.

30 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗೆ ಎಂಬಿಬಿಎಸ್‌, ಸ್ತ್ರೀರೋಗ ತಜ್ಞ, ಅರಿವಳಿಕೆ ತಜ್ಞ, ದಂತ ವೈದ್ಯರ ಹುದ್ದೆಗಳ ಮಂಜೂರಾತಿ ಇದೆ. ಸದ್ಯ ಆಡಳಿತ ವೈದ್ಯಾಧಿಕಾರಿಯಾಗಿ ಒಬ್ಬ ಎಂಬಬಿಎಸ್‌ ವೈದ್ಯರನ್ನು ಎರವಲು ಸೇವೆ ಮೇಲೆ ನಿಯೋಜಿಸಿದ್ದರೂ ಆಡಳಿತಾತ್ಮಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಆಸ್ಪತ್ರೆಗೆ ಬಂದು ರೋಗಿಗಳನ್ನು ಪರೀಕ್ಷಿಸಿದ ಉದಾಹರಣೆಗಳು ಇಲ್ಲ. ಹೊರಗುತ್ತಿಗೆ ಆಧಾರದಲ್ಲಿ ಒಬ್ಬ ಎಂಬಿಬಿಎಸ್‌ ವೈದ್ಯರಿದ್ದಾರೆ. ಒಬ್ಬರು ಆಯುಷ್‌ ವೈದ್ಯರು ಹಾಗೂ ಒಬ್ಬರು ಮಕ್ಕಳ ತಜ್ಞ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಸಂಜೆ ಮತ್ತು ರಾತ್ರಿ ವೇಳೆ ತುರ್ತು ಸಂದರ್ಭಗಳಲ್ಲಿ ಎಂಬಿಬಿಎಸ್‌ ವೈದ್ಯರು ಸಿಗದೆ ರೋಗಿಗಳು ಚಿಕಿತ್ಸೆಗೆ ಪರದಾಡುವ ಪರಿಸ್ಥಿತಿ ಇದೆ.

24x7 ಲಭ್ಯವಾಗುವಂತೆ ಕಾಯಂ ಎಂಬಿಬಿಎಸ್‌ ವೈದ್ಯರು ಸೇರಿದಂತೆ ತಜ್ಞ ವೈದ್ಯರನ್ನು ನೇಮಿಸಬೇಕು ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞರ ಕೊರತೆ

ಮಾನ್ವಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ತಜ್ಞರು, ಇತರ ಸಿಬ್ಬಂದಿ ಹಾಗೂ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ.

ಫಿಜಿಶಿಯನ್, ಎಲುಬು ಕೀಲುಗಳ ತಜ್ಞ, ಕಿವಿ ಮತ್ತು ಮೂಗು ತಜ್ಞ, ಚರ್ಮರೋಗ ತಜ್ಞರಿಲ್ಲ. ರೆಡಿಯೊಲಾಜಿಸ್ಟ್ ಇಲ್ಲ. ಮುಖ್ಯವಾಗಿ ನಾಲ್ಕು ಜನ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಅವಶ್ಯಕತೆ ಇದ್ದು, ಒಬ್ಬರೆ ಕಾರ್ಯನಿರ್ವಹಿಸುತ್ತಿದ್ದಾರೆ. ಐವರು ಶುಶ್ರೂಷಕರ ಹಾಗೂ 6 ಅಟೆಂಡ‌‌ರ್ ಹುದ್ದೆಗಳು ಖಾಲಿ ಇವೆ. ಇತರೆ 7 ಹುದ್ದೆ ಸೇರಿ ಒಟ್ಟು 26 ಹುದ್ದೆಗಳು ಭರ್ತಿಯಾಗಬೇಕಿದೆ.

ತಾಯಿ ಮಕ್ಕಳ ಆಸ್ಪತ್ರೆಯ 15 ಹುದ್ದೆಗಳಲ್ಲಿ ಕೇವಲ ಒಬ್ಬ ರೆಡಿಯಾಲಾಜಿಸ್ಟ್ ಅವರನ್ನು ಮಾತ್ರ ನೇಮಿಸಲಾಗಿದೆ. ಉಳಿದ 14 ಹುದ್ದೆ ಖಾಲಿ ಇವೆ. ಸಾರ್ವಜನಿಕ ಆಸ್ಪತ್ರೆಯ ವೈದ್ಯ ಮತ್ತು ಸಿಬ್ಬಂದಿ ಪೈಕಿ ಕೆಲವರನ್ನು ತಾಯಿ ಮಕ್ಕಳ ಆಸ್ಪತ್ರೆಗೆ ನೇಮಕ ಮಾಡದಿರುವುದು ರೋಗಿಗಳ ಸಮರ್ಪಕ ಸೇವೆಗೆ ಸಮಸ್ಯೆಯಾಗಿದೆ.

‘ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳ ಕುರಿತು ಇಲಾಖೆಯ ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಾನ್ವಿ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಅರವಿಂದ ಹೇಳುತ್ತಾರೆ.

ತುಕ್ಕುಹಿಡಿದ ವೈದ್ಯಕೀಯ ಸಲಕರಣೆ

ಸಿರವಾರ: ಪಟ್ಟಣ ತಾಲ್ಲೂಕು ಕೇಂದ್ರವಾಗಿ ಏಳು ವರ್ಷ ಗತಿಸಿದರೂ ಸಾವಿರಾರು ಬಡ ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಅಥವಾ ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಗಳಿಗೆ ತೆರಳುವುದು ಅನಿವಾರ್ಯವಾಗಿದೆ.

ಮೂರು ವರ್ಷಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿಯೇ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಿ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ. ಇಲ್ಲಿ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ನೇಮಕವಾಗದ ಕಾರಣ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ. ಇದೀಗ ವೈದ್ಯಕೀಯ ಸಲಕರಣೆಗಳು ತುಕ್ಕು ಹಿಡಿದಿವೆ.‌

ನಾಯಿ ಕಚ್ಚಿದರೂ ರಾಯಚೂರಿಗೆ ಹೋಗಬೇಕು

ಶಕ್ತಿನಗರ: ಜೇಗರಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಇದೆ. ಆದರೆ, ನಾಯಿ ಕಚ್ಚಿದರೂ ಲಸಿಕೆಗೆ ರಾಯಚೂರಿಗೆ ಹೋಗಬೇಕು. ಈ ಸಮುದಾಯ ಕೇಂದ್ರಕ್ಕೆ 54 ಸಿಬ್ಬಂದಿ ಮತ್ತು ಐದು ವೈದ್ಯರ ಹುದ್ದೆ ಮಂಜೂರಾಗಿದೆ. ದಿನಪೂರ್ತಿ ಇಲ್ಲಿ ಸೇವೆ ದೊರಕಬೇಕು. ಆದರೆ 22 ಸಿಬ್ಬಂದಿ ಮಾತ್ರ ಇದ್ದಾರೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಡ್ಡಾಯವಾಗಿ ಸ್ತ್ರೀರೋಗ ತಜ್ಞರು ಇರಬೇಕು. ಆದರೆ ಇಲ್ಲಿ ಈ ತಜ್ಞರು ವಾರಕ್ಕೆ ಎರಡು ಸಾರಿ ಬಂದು ಹೋಗುತ್ತಾರೆ. ಉಳಿದ ವೈದ್ಯರು ಬೆಳಿಗ್ಗೆ ಬಂದು ಮಧ್ಯಾಹ್ನದ ವರೆಗೆ ಇದ್ದರೆ ಅದೇ ಹೆಚ್ಚು. ಸಂಜೆ ಸಮುದಾಯ ಆರೋಗ್ಯ ಕೇಂದ್ರ ಮುಚ್ಚಿರುತ್ತದೆ. ರಾತ್ರಿಯಂತೂ ಒಬ್ಬ ವೈದ್ಯರೂ ಇರುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇಲ್ಲ. 28 ಸಿಬ್ಬಂದಿ ಇದ್ದಾರೆ. ಅದರಲ್ಲಿ ಪ್ರಭಾರಿ ವೈದ್ಯರು ಇದ್ದ ಕಾರಣ ಎರಡು ದಿನಕ್ಕೊಂದು ಬಾರಿ ಬರುತ್ತಾರೆ. ಸ್ಟಾಫ್ ಕೋಣೆ ಇಲ್ಲದ ಕಾರಣ, ಸಿಬ್ಬಂದಿ ವಾಸಿಸಲು ತೊಂದರೆ ಆಗಿದೆ. ಸ್ಟಾಫ್ ಕಟ್ಟಡ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಇದೆ ಎಂದು ಜೇಗರಕಲ್ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಜ್ವಲ್ ಹೇಳುತ್ತಾರೆ.

ಆಸ್ಪತ್ರೆಯಲ್ಲಿ ಹೆಚ್ಚಿದ ಕಳ್ಳರ ಹಾವಳಿ

ದೇವದುರ್ಗ: ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ನಾಲ್ಕು ವರ್ಷಗಳ ಅವಧಿಯಲ್ಲಿ ಸುಧಾರಣೆ ಕಂಡಿದೆ. ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಡಾ.ಬನದೇಶ್ವರ ಅಧಿಕಾರ ವಹಿಸಿಕೊಂಡ ನಂತರ ಸ್ವಚ್ಛತೆ, ಆಕ್ಸಿಜನ್ ಪ್ಲಾಂಟ್, ಆಸ್ಪತ್ರೆಯ ದುರಸ್ತಿ ಕಾರ್ಯ ನಡೆದಿದೆ. ಆಯುಷ್‌ ವಿಭಾಗ ಪ್ರಾರಂಭವಾಗಿದೆ ಮತ್ತು ತುರ್ತು ಚಿಕಿತ್ಸಾ ವಿಭಾಗಕ್ಕೆ ನೂತನ ಕಟ್ಟಡ ಭರದಿಂದ ನಡೆದಿದೆ.

ಪ್ರತಿದಿನ 150ಕ್ಕೂ ಹೆಚ್ಚು ಹೊರ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಾರೆ. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಆಸ್ಪತ್ರೆಯ ವಿವಿಧ ತಜ್ಞ ವೈದ್ಯರ ಹುದ್ದೆಗಳು ಭರ್ತಿಯಾಗಿವೆ. ದಂತ ವೈದ್ಯರು, ನೇತ್ರ ತಜ್ಞರು, ಮಕ್ಕಳ ತಜ್ಞ, ಸರ್ಜನ್‌ ಮತ್ತು ಸ್ತ್ರೀರೋಗ ಅರಿವಳಿಕೆ ತಜ್ಞರ ಹುದ್ದೆಗಳು ಭರ್ತಿಯಾಗಿವೆ. ಇದರಿಂದ ತಾಲ್ಲೂಕಿನ ಜನರಿಗೆ ಉತ್ತಮ ಆರೋಗ್ಯ ಸಿಗುತ್ತದೆ. ಪ್ರತಿ ಮಂಗಳವಾರ ಸಂತಾನಶಕ್ತಿ ಹರಣ ಚಿಕಿತ್ಸೆಗೆ ನೆರೆಯ ತಾಲ್ಲೂಕುಗಳಿಗೂ ಮಾದರಿಯಾಗಿದೆ. ಸುರಪುರ, ಶಹಾಪುರ, ಹುಣಸಗಿ, ವಡಗೇರಾ ಮತ್ತು ಸಿರವಾರ ತಾಲ್ಲೂಕಿನ ಜನರು ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುತ್ತಾರೆ.

ಕೆಲ ವೈದ್ಯರು ಸ್ವಂತ ಕ್ಲಿನಿಕ್ ಹೊಂದಿದ್ದು ಹೆಚ್ಚು ಸಮಯ ತಮ್ಮ ಕ್ಲಿನಿಕ್‌ಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬ ಆರೋಪವು ಸಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸಾರ್ವಜನಿಕ ಆಸ್ಪತ್ರೆಗೆ ಬರುವ ಹೊರ ರೋಗಿಗಳಿಗೆ ಭದ್ರತೆ ಇಲ್ಲ. ಚಿಕಿತ್ಸೆ ಎಂದು ಆಸ್ಪತ್ರೆಗೆ ಬರುವ ರೋಗಿಗಳ ಕುಟುಂಬದ ಸದಸ್ಯರ ಬಂಗಾರದ ಆಭರಣಗಳು, ಮೊಬೈಲ್ ಫೋನಗಳು ಕಳ್ಳತನವಾಗಿವೆ. ಬೀದಿನಾಯಿ ಮತ್ತು ಮಂಗಗಳು ಹಾವಳಿ ಹೆಚ್ಚುತ್ತಿವೆ. ಆಸ್ಪತ್ರೆಯ ಬಲಭಾಗದಲ್ಲಿ ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಆಸ್ಪತ್ರೆಯ ಹಿಂಭಾಗದ ವಾರ್ಡಿನ ನಿವಾಸಿಗರು ಆಸ್ಪತ್ರೆಯಲ್ಲಿ ಓಡಾಡುತ್ತಾರೆ. ಸ್ಲಂ ಏರಿಯಾ ಆದಕಾರಣ ಕೆಲ ಪುಂಡ ಪೋಕರಿಗಳು ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ ಉದಾಹರಣೆಗಳು ಇವೆ.

ಮೇಲ್ದರ್ಜೆಗೆ ಏರದ ಸಮುದಾಯ ಕೇಂದ್ರ

ಮಸ್ಕಿ: ತಾಲ್ಲೂಕು ಕೇಂದ್ರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತಾಲ್ಲೂಕು ಆಸ್ಪತ್ರೆಯಾಗಿ ಮೇ‍ಲ್ದರ್ಜೆಗೆ ಏರಿಲ್ಲ.

ಸುಮಾರು 30 ಸಾವಿರದಷ್ಟು ಜನಸಂಖ್ಯೆ ಇರುವ ಪಟ್ಟಣ ಕೇವಲ ಆರು ಹಾಸಿಗೆ ಆಸ್ಪತ್ರೆ ಸೌಲಭ್ಯ ಹೊಂದಿದೆ. ಆಸ್ಪತ್ರೆಯಲ್ಲಿ ತಜ್ಞವೈದ್ಯರ ನೇಮಕ ಮಾಡಿಲ್ಲ. ಹಿರಿಯ ಆರೋಗ್ಯ ಸಹಾಯಕರು ಸೇರಿ ನಾಲ್ಕು ಹುದ್ದೆಗಳು ಖಾಲಿ ಇವೆ. ‘ಡಿ’ ಗ್ರೂಪ್ ನೌಕರರ ನೇಮಕಾತಿಯೂ ಇಲ್ಲದ ಕಾರಣ ಆಸ್ಪತ್ರೆಗೆ ಬರುವ ರೋಗಿಗಳು ಚಿಕಿತ್ಸೆಗೆ ಪರದಾಡಬೇಕಾಗಿದೆ.

ಆರು ಹಾಸಿಗೆಗಳ ಆಸ್ಪತ್ರೆಯನ್ನು 24 ಹಾಸಿಗೆಗಳ ಆಸ್ಪತ್ರೆಯನ್ನಾಗಿಸುವ ಸಲುವಾಗಿ ಈಗಿರುವ ಸಮುದಾಯ ಕೇಂದ್ರದ ಪಕ್ಕದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಆದರೆ, ಜಾಗದ ವಿವಾದ ಸೃಷ್ಟಿಯಾಗಿ ಕಾಮಗಾರಿ ಸ್ಥಗಿತಗೊಂಡಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಇಲಾಖೆಯಿಂದ ವರ್ಷಕ್ಕೆ ₹1.25 ಲಕ್ಷ ಮೊತ್ತದ ಔಷಧ ಮತ್ತು ಗುಳಿಗೆ ಪೂರೈಕೆಯಾಗುತ್ತದೆ. 30 ಸಾವಿರದಷ್ಟು ಇರುವ ಪಟ್ಟಣದ ಈ ಆಸ್ಪತ್ರೆಗೆ ಪೂರೈಕೆಯಾಗುವ ಔಷಧಗಳು ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಯೇ ಹೇಳುತ್ತಾರೆ.

ಸರ್ಕಾರಿ ಸಂಬಳ; ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ!

ಸಿಂಧನೂರು: 100 ಹಾಸಿಗೆಗಳ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸರ್ಕಾರಿ ಸಂಬಳ ಪಡೆದರೂ ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಗಳಲ್ಲೇ ಹೆಚ್ಚು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ವೈದ್ಯಕೀಯ ಸೌಲಭ್ಯಗಳು ದೊರಕುತ್ತಿಲ್ಲ.

ಆಸ್ಪತ್ರೆಯಲ್ಲಿ ಇಸಿಜಿ, ಬ್ಲಡ್ ಬ್ಯಾಂಕ್ ಇಲ್ಲ. ಎಕ್ಸರೇ ಇದೆ. ಆದರೆ ರೋಗಿಗಳಿಗೆ ವರದಿ ಕೊಡುವುದಿಲ್ಲ. ಸರ್ಜನ್ ಇದ್ದರೂ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ. ಕಣ್ಣು, ಎಲುಬು ಮತ್ತು ಕೀಲು, ಇಎನ್‍ಟಿ ತಜ್ಞರಿದ್ದರೂ ನಮ್ಮ ಪಾಲಿಗೆ ಇಲ್ಲದಂತಾಗಿದೆ ಎಂದು ಮೆಹಬೂಬಿಯ ಕಾಲೊನಿಯ ಚಂದ್ರಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

‘ಸರ್ಕಾರಿ ಆಸ್ಪತ್ರೆಯಲ್ಲಿ ರೇಡಿಯೊಲಾಜಿಸ್ಟ್ ಇಲ್ಲದ ಕಾರಣ ಸ್ಕ್ಯಾನಿಂಗ್‍ಗಾಗಿ ಖಾಸಗಿ ಸೆಂಟರ್‌ಗಳಿಗೆ ಕಳಿಸಬೇಕಾಗಿದೆ. 10 ಡಿ ಗ್ರೂಪ್‌ ಸಿಬ್ಬಂದಿ ಇಲ್ಲ. ಇದರಿಂದ ಚಿಕಿತ್ಸೆಗೆ ತೊಂದರೆ ಆಗುತ್ತಿದೆ’ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಬಹುತೇಕ ವೈದ್ಯರು ಹೊರಗಡೆ ಖಾಸಗಿ ಕ್ಲಿನಿಕ್‌ಗಳನ್ನು ತೆರೆದಿದ್ದಾರೆ. ಅರ್ಧ ತಾಸು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದರೆ ಒಂದು ತಾಸು ತಮ್ಮ ಸ್ವಂತ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ಬಂದಿದ್ದಾರೆ ಎಂದು ಸಿಬ್ಬಂದಿ ಫೋನ್ ಮಾಡಿದರೆ ಮಾತ್ರ ಬರುತ್ತಾರೆ. ಇಲ್ಲ ಅಂದ್ರೆ ತಮಗೆ ತಿಳಿದಾಗ ಬಂದು ಹೋಗುತ್ತಾರೆ’ ಎಂದು ಬಸವರಾಜ ಮರಾಠ, ಯಮನಪ್ಪ ಮುಬ್ರುಂಕರ್ ದೂರುತ್ತಾರೆ.

ನಿಯಮದ ಪ್ರಕಾರ ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಕರ್ತವ್ಯ ಮುಗಿದ ನಂತರ ಖಾಸಗಿ ಕ್ಲಿನಿಕ್‍ಗಳಲ್ಲಿ ಕೆಲಸ ಮಾಡಲು ಅವಕಾಶವಿದೆ. ಆದರೆ ಕೆಲ ವೈದ್ಯರು ಸರ್ಕಾರಿ ಆಸ್ಪತ್ರೆಯ ಅವಧಿಯಲ್ಲಿಯೇ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ದುರಸ್ತಿ, ಚಿಕಿತ್ಸಾ ಸಾಮಗ್ರಿ ಹಾಗೂ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಾಗಲೇ ₹2 ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಕರೆಯಬೇಕಾಗಿದೆ’ ಎಂದು ಸಿಂಧನೂರು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ ಹೇಳುತ್ತಾರೆ.

ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 40 ಹಾಗೂ ರಿಮ್ಸ್‌ ಒಂದರಲ್ಲೇ 45 ಸಾಮಾನ್ಯ ವೈದ್ಯರ ಕೊರತೆ ಇದೆ. ಇವುಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ತಜ್ಞವೈದ್ಯರ ನೇಮಕಾತಿಗೆ ಸರ್ಕಾರ ಆಸಕ್ತಿ ತೋರಿಸಿಲ್ಲ. ಹೀಗಾಗಿ ಸಮಸ್ಯೆ ಮುಂದುವರಿದಿದೆ.

ಸಹಕಾರ: ಪ್ರಕಾಶ ಮಸ್ಕಿ, ಡಿ.ಎಚ್‌.ಕಂಬಳಿ, ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ, ಅಮರೇಶ ನಾಯಕ, ಉಮಾಪತಿ ರಾಮೋಜಿ, ಮಂಜುನಾಥ ಬಳ್ಳಾರಿ, ಪಿ.ಕೃಷ್ಣ ಸಿರವಾರ

ದೇವದುರ್ಗದಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೀದಿನಾಯಿ ಮಲಗಿರುವುದು
ದೇವದುರ್ಗದಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೀದಿನಾಯಿ ಮಲಗಿರುವುದು
ಮಸ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರ
ಮಸ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರ
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ
ಸಿರವಾರದ ಆರೋಗ್ಯ ಮತ್ತು ಕ್ಷೇಮ ಕೇಂದ್ರ
ಸಿರವಾರದ ಆರೋಗ್ಯ ಮತ್ತು ಕ್ಷೇಮ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT