ಬುಧವಾರ, ನವೆಂಬರ್ 13, 2019
23 °C
ಜಿಲ್ಲೆಯಾದ್ಯಂತ ‘ಕಲ್ಯಾಣ ಕರ್ನಾಟಕ ಉತ್ಸವ’ ದಿನಾಚರಣೆ ಸಂಭ್ರಮ

ಪ್ರಾದೇಶಿಕ ಅಸಮಾನತೆ ತೊಲಗಿಸಲು ಸರ್ಕಾರ ಬದ್ಧ: ಡಿಸಿಎಂ ಗೋವಿಂದ ಕಾರಜೋಳ

Published:
Updated:
Prajavani

ರಾಯಚೂರು: ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡಿರುವುದು ಭಾವನಾತ್ಮಕ ವಿಷಯವಾಗಿದ್ದು, ಹಿಂದುಳಿದಿರುವಿಕೆ ಆಧರಿಸಿ ಈ ಭಾಗಕ್ಕೆ ಸಿಗಬೇಕಾಗ ಅನುದಾನದಲ್ಲಿ ಯಾವುದೇ ಅನ್ಯಾಯ ಆಗುವುದಿಲ್ಲ. ಪ್ರಾದೇಶಿಕ ಅಸಮಾನತೆ ನಿವಾರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಇತಿಹಾಸ ತಜ್ಞರ ಭಾವನೆ ಆಧರಿಸಿ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಮಾಡಲಾಗಿದೆ. ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಮತ್ತಷ್ಟು ಬಲಪಡಿಸಲಾಗುವುದು. ಅಜ್ಞಾನ, ಅನಕ್ಷರತೆ, ಬಡತನ, ಅನಾರೋಗ್ಯ, ಅಪೌಷ್ಟಿಕತೆ ಇವೆಲ್ಲವುಗಳಿಂದ ವಿಮೋಚನೆ ಪಡೆಯುವ ಅಗತ್ಯವಿದೆ. ಎಲ್ಲರೂ ಸೇರಿ ಕೆಲಸ ಮಾಡಿದಾಗ ಮಾತ್ರ ಅದನ್ನು ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರವಾಹದಿಂದಾದ ಬೆಳೆಹಾನಿ, ಆಸ್ತಿಹಾನಿ ಹಾಗೂ ಜೀವಹಾನಿಗೆ ಸಾಂತ್ವನ ಹೇಳುವ ಕೆಲಸವಾಗಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಯಮಗಳನ್ನು ಮೀರಿ ಪ್ರವಾಹದಿಂದ ತತ್ತರಿಸಿದ ಪ್ರತಿ ಕುಟುಂಬಕ್ಕೂ ₹10 ಸಾವಿರ ಜಮಾಗೊಳಿಸಲಾಗಿದೆ. ಜಿಲ್ಲೆಯ ಐದು ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟಾರೆ ₹243 ಕೋಟಿ ಅಂದಾಜು ನೆರೆ ಹಾನಿಯನ್ನು ಲೆಕ್ಕ ಹಾಕಲಾಗಿದೆ. ಈಗಾಗಲೇ ಒಟ್ಟು ₹39 ಕೋಟಿಗೆ ಬೇಡಿಕೆ  ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಪ್ರಸ್ತುತ ₹12.87 ಕೋಟಿ ಜಮಾ ಇದೆ, ಬೆಳೆ ಪರಿಹಾರ ಹಾಗೂ ಮನೆಗಳ ನಿರ್ಮಾಣಕ್ಕೆ ಹಂತ ಹಂತವಾಗಿ ಹಣ ಬಳಸಿಕೊಳ್ಳಲಾಗುತ್ತಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2019–20ನೇ ಸಾಲಿಗೆ ಮೈಕ್ರೋ ಯೋಜನೆಯಡಿ ₹ 161 ಕೋಟಿ ಹಾಗೂ ಮ್ಯಾಕ್ರೋ ಯೋಜನೆಯಡಿ ₹70 ಕೋಟಿ ಸೇರಿದಂತೆ ಒಟ್ಟಾರೆ ₹231 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ₹1,014 ಕೋಟಿ ಮಂಜೂರಾಗಿದೆ. ಅದರಲ್ಲಿ 2,857 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 1,583 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಡಿಎಆರ್ ವಿಭಾಗದ ಅಧಿಕಾರಿ ಕೇದಾರನಾಥ ಅವರ ನೇತೃತ್ವದಲ್ಲಿ ಪೊಲೀಸ್, ವಿವಿಧ ಶಾಲೆಗಳ ಮಕ್ಕಳು ಪರೇಡ್‌ ನಡೆಸಿ ಗೌರವವಂದನೆ ಸಲ್ಲಿಸಿದರು. ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಶಾಸಕ ಡಾ.ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ,  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಇದ್ದರು.

ಪ್ರತಿಕ್ರಿಯಿಸಿ (+)