ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು| ಸದಸ್ಯರ ರಾಜೀನಾಮೆ ಹಿಂದೆ ರಾಜಕೀಯ ಷಡ್ಯಂತ್ರ: ಎಂ.ರಹೆಮದ್‍ಪಾಷಾ ಆರೋಪ

ಆರ್.ಎಚ್.ನಂ.1 ಕ್ಯಾಂಪ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ರಹೆಮದ್‍ಪಾಷಾ ಆರೋಪ
Published 5 ಆಗಸ್ಟ್ 2023, 15:27 IST
Last Updated 5 ಆಗಸ್ಟ್ 2023, 15:27 IST
ಅಕ್ಷರ ಗಾತ್ರ

ಸಿಂಧನೂರು: ‘ತಾಲ್ಲೂಕಿನ ಆರ್.ಎಚ್.ನಂ.1 ಕ್ಯಾಂಪ್ ಗ್ರಾಮ ಪಂಚಾಯಿತಿಯ 15 ಸದಸ್ಯರ ಸಾಮೂಹಿಕ ರಾಜೀನಾಮೆ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ರಹೆಮದ್‍ಪಾಷಾ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 38 ಜನ ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆ.2 ರಂದು ಚುನಾವಣೆ ನಡೆದಿದೆ. ಬಂಗಾಲಿ ಸಮುದಾಯದ ಯಾರಾದರೂ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎಂದು ನಾನು ಹೇಳಿದ್ದೆ ಆದರೆ ಎಲ್ಲರೂ ಒಮ್ಮತದಿಂದ ನೀವೇ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಎಂದು ಒತ್ತಡ ಹಾಕಿದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ 19 ಮತ ಪಡೆದು ಗೆಲುವು ಸಾಧಿಸಿದ್ದೇನೆ. ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಪ್ರದೀಪ್‌ಗೆ 17 ಹಾಗೂ ವಿಶ್ವನಾಥಗೆ 1 ಮತ ಬಿದ್ದಿತ್ತು’ ಎಂದು ವಿವರಿಸಿದರು.

‘19 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರಿಂದ ನಾನು ಆಯ್ಕೆಯಾಗಿದ್ದೇನೆ. ಇನ್ನುಳಿದ 15 ಜನ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿಗ ಸದಸ್ಯರು ಎಂದು ಗುರುತಿಸಿಕೊಂಡಿದ್ದಾರೆ. ಅವರೇ ಈಗ ರಾಜೀನಾಮೆ ನೀಡಿದ್ದಾರೆ. ಇನ್ನುಳಿದ 4 ಜನ ತಟಸ್ಥ ಸ್ಥಿತಿಯಲ್ಲಿದ್ದಾರೆ. ರಾಜೀನಾಮೆ ನೀಡಿದ ಎಲ್ಲರೊಂದಿಗೂ ಮುಕ್ತವಾಗಿ ಚರ್ಚಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಲಾಗುವುದು. ಒಂದು ವೇಳೆ ರಾಜೀನಾಮೆ ಸ್ವೀಕರಿಸಲೇಬೇಕು ಎಂದು ಹಟ ಹಿಡಿದರೆ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು’ ಎಂದರು.

ಬಾದರ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿಲೀಪ್‍ಕುಮಾರ ಬಿಶ್ವಾಸ, ಆರ್.ಎಚ್.ನಂ.1 ಕ್ಯಾಂಪ್‌ನ ಸದಸ್ಯರಾದ ಸಾಧನ್ ಸನಾ ಹಾಗೂ ಸಿರೀಲ್ ಮಾತನಾಡಿ ‘ಕಳೆದ 53 ವರ್ಷಗಳಿಂದ ಜಾತಿ, ಧರ್ಮ ಮರೆತು ಎಲ್ಲರೂ ಶಾಂತಿ, ಸೌಹಾರ್ದದಿಂದ ಬದುಕುತ್ತಿದ್ದೇವೆ. ಆದರೆ ಕೆಲವರು ಹಿಂದೂ-ಮುಸ್ಲಿಂ ಹೆಸರಿನಲ್ಲಿ ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದಾರೆ. ಈಗ ಕಾಂಗ್ರೆಸ್ ಬೆಂಬಲಿತ ಅಲ್ಪಸಂಖ್ಯಾತ ಸಮುದಾಯದ ಎಂ.ರಹೆಮದ್‍ಪಾಷಾ ಅಧ್ಯಕ್ಷರಾಗಿರುವುದನ್ನು ಸಹಿಸಿಕೊಳ್ಳದೆ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಪ್ರಚೋದನೆಗೆ ಒಳಗಾಗಿ 15 ಜನ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಆದರೆ ಕೆಲವರು ಮೊಬೈಲ್ ಕರೆ ಮಾಡಿ ರಾಜೀನಾಮೆ ಸ್ವೀಕಾರ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

‘15 ಗ್ರಾಮ ಪಂಚಾಯಿತಿ ಸದಸ್ಯರು ರಾಜೀನಾಮೆ ನೀಡುವ ಮೂಲಕ ಮತ ಹಾಕಿ ಗೆಲ್ಲಿಸಿದ ಜನರಿಗೆ ದ್ರೋಹ ಬಗೆದಿದ್ದಾರೆ. ಜೊತೆಗೆ ದ್ವೇಷದ ರಾಜಕಾರಣ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಕಡಿಮೆ ಮಾಡುವ ಕುತಂತ್ರ ಇದಾಗಿದೆ’ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಕಾಸ್ ಅಧಿಕಾರಿ, ಮುಖಂಡ ರಫುಲ್ ಬಿಶ್ವಾಸ್ ಸೇರಿದಂತೆ 19 ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT