ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಗಳನ್ನು ಸ್ವಚ್ಛಗೊಳಿಸಿದ ಪ್ರತಿನಿಧಿಗಳು

ಡಾ.ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಅನುಕರಣೀಯ ಸೇವಾ ಕಾರ್ಯ
Last Updated 3 ಮಾರ್ಚ್ 2020, 13:28 IST
ಅಕ್ಷರ ಗಾತ್ರ

ರಾಯಚೂರು: ಮುಳ್ಳಿನ ಗಿಡಗಳು, ಕಸಕಡ್ಡಿಗಳಿಂದಾಗಿ ಹಾಳುಸುರಿಯುವ ಮೌನ ಆವರಿಸಿಕೊಂಡಿದ್ದ ನಗರದ ಪ್ರಮುಖ ಸ್ಮಶಾನಗಳಲ್ಲಿ ಇದೀಗ ಬದಲಾವಣೆ ಗಾಳಿ ಬೀಸುತ್ತಿದೆ. ಬೇಡವಾದ ಮುಳ್ಳಿನಗಿಡ, ಕಸದ ರಾಶಿಯನ್ನೆಲ್ಲ ಕೆಲವೇ ಗಂಟೆಗಳಲ್ಲಿ ತೆಗೆದುಹಾಕಿ, ಸ್ವಚ್ಛ ಮಾಡಲಾಗಿದೆ.

ಮಹಾರಾಷ್ಟ್ರದ ರಾಯಘಡ ಜಿಲ್ಲೆ ಅಲಿಭಾಗ್‌ ತಾಲ್ಲೂಕಿನ ರೇವದಂಡಿ ಗ್ರಾಮದ ಡಾ.ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಮುಖ್ಯಸ್ಥರ ಆಜ್ಞೆ ಅನುಸರಿಸಿ ಮಂಗಳವಾರ ನೂರಾರು ಪ್ರತಿನಿಧಿಗಳು ಸ್ವಯಂ ಪ್ರೇರಣೆಯಿಂದ ರಾಯಚೂರಿಗೆ ಬಂದಿದ್ದರು. ಬೆಳಿಗ್ಗೆ 7. 30 ರಿಂದ 11.30 ರವರೆಗೂ ಸ್ಮಶಾನಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ತಮ್ಮದೇ ಬಾಡಿಗೆ ಖಾಸಗಿ ವಾಹನಗಳು ಹಾಗೂ ಮನೆಯಿಂದ ಊಟ ತೆಗೆದುಕೊಂಡು ಬಂದಿದ್ದ 500 ಕ್ಕೂ ಹೆಚ್ಚು ಪ್ರತಿನಿಧಿಗಳು ನಾಲ್ಕು ಪ್ರಮುಖ ಸ್ಮಶಾನಗಳಲ್ಲಿ ಸ್ವಚ್ಛತಾ ಸೇವಾ ಕಾರ್ಯ ಮಾಡಿ ಬದಲಾವಣೆ ಗಾಳಿ ಸೂಸುವಂತೆ ಮಾಡಿದ್ದಾರೆ.

ರೈಲ್ವೆ ನಿಲ್ದಾಣ ಪಕ್ಕದ ಕ್ರಿಶ್ಚಿಯನ್‌ ಧರ್ಮೀಯರ ಸ್ಮಶಾನ, ಹೈದರಾಬಾದ್‌ ರಸ್ತೆಯ ಶಂಶಾಲಂ ದರ್ಗಾ ಪಕ್ಕದ ಸ್ಮಶಾನ, ಕಾಳಿದಾಸ ನಗರದ ಸ್ಮಶಾನ ಹಾಗೂ ನಂದಿಶ್ವರ ದೇವಸ್ಥಾನ ಪಕ್ಕದ ಸ್ಮಶಾನದಲ್ಲಿ ಪ್ರತಿನಿಧಿಗಳು ಸೇವಾ ಕಾರ್ಯ ಕೈಗೊಂಡಿದ್ದರು. ಕಸ ಕತ್ತರಿಸುವುದಕ್ಕೆ ಹಾಗೂ ತೆಗೆದುಹಾಕಲು ಬೇಕಾಗುವ ಸಲಕರಣೆಗಳನ್ನು ಅವರೇ ತಂದಿದ್ದರು. ಎಲ್ಲ ಧರ್ಮೀಯರು ಹಾಗೂ ಎಲ್ಲ ಜಾತಿಯ ಪ್ರತಿನಿಧಿಗಳು ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದು ವಿಶೇಷ.

ಮಹಾರಾಷ್ಟ್ರದ ಸೋಲ್ಲಾಪುರ, ವಿಜಯಪುರ, ಜಮಖಂಡಿ, ಬೆಳಗಾವಿ, ಗದಗ, ಹುಬ್ಬಳ್ಳಿ ಹಾಗೂ ಸ್ಥಳೀಯ ರಾಯಚೂರಿನ ಕೆಲವು ಪ್ರತಿನಿಧಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ‘ಸದ್ಗುರುವಿನ ಆಜ್ಞೆಯಂತೆ ಈ ಕಾರ್ಯ ಮಾಡಲು ಬಂದಿದ್ದೇವೆ. ಯಾವುದೇ ಪ್ರಚಾರ ಬೇಡ. ಸಮಾಜದಲ್ಲಿ ಸೌಹಾರ್ದತೆ, ಸಹಭಾಳ್ವೆ ಹೆಚ್ಚಾಗಬೇಕು ಎನ್ನುವುದು ಗುರುವಿನ ಉದ್ದೇಶ. ಗುರುಗಳು ಹೇಳಿದ ಕಾರ್ಯ ಮಾಡುತ್ತೇವೆ’ ಎನ್ನುವ ಮಾತು ಪ್ರತಿಯೊಬ್ಬರದ್ದು ಆಗಿತ್ತು.

ಟೇಲರಿಂಗ್‌ ಮಾಡುವವರು, ಟಿವಿ ರಿಪೇರಿ ಮಾಡುವವರು, ಹೋಟೆಲ್‌ ಮಾಲೀಕರು, ಪಾನಶಾಪ ನಡೆಸುವವರು... ಹೀಗೆ ನಾನಾ ವೃತ್ತಿ ಮಾಡುವವರು, ಯುವಕರಿಂದ ಹಿಡಿದು ವಯೋವೃದ್ಧರವರೆಗೂ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿವಾರ ‘ಬೈಠಕ್‌’ ಮಾಡಿ ಚರ್ಚಿಸುತ್ತೇವೆ. ಗುರುವಿನ ಸಂದೇಶ ಅನುಸರಿಸಿಕೊಂಡು ತಿಂಗಳಿಗೊಮ್ಮೆ ಸೇವೆ ಮಾಡಲು ಹೋಗುತ್ತೇವೆ. ಕೆಲವು ಕಡೆಗಳಲ್ಲಿ ಸಸಿ ನೆಡುವುದು, ಕೊಳವೆಬಾವಿಗೆ ಮರುಜೀವ ನೀಡುವ ಸೇವಾ ಕಾರ್ಯವನ್ನು ಮಾಡಿದ್ದೇವೆ. ಇದರಲ್ಲಿ ಸಂತೃಪ್ತಿ ಇದೆ. ಯಾರೂ ಈ ಕೆಲಸ ಮಾಡುವುದಕ್ಕೆ ಮುಂದೆ ಬರುವುದಿಲ್ಲ. ಅಂತಹ ಕಾರ್ಯವನ್ನು ಪ್ರತಿಷ್ಠಾನದ ಮುಖ್ಯಸ್ಥರು ಮಾಡಿಸುತ್ತಾರೆ. ಚಟಮುಕ್ತ ಜೀವನಕ್ಕೆ ಪ್ರೇರಣೆ ನೀಡಿದಲ್ಲದೆ, ಸೇವೆಯಿಂದ ಸುಖ ಹೊಂದುವ ಪರಿಪಾಠವನ್ನು ಹೇಳಿಕೊಡುತ್ತಿದ್ದಾರೆ’ ಎಂದು ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದರು.

ಶಂಶಾಲಂ ದರ್ಗಾ ಹತ್ತಿರ ಸ್ಮಶಾನದಲ್ಲಿ ನಡೆದ ಸೇವಾ ಕಾರ್ಯದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಕೈಜೋಡಿಸಿದ್ದರು. ಸ್ಮಶಾನದಲ್ಲಿ ಸಸಿನೆಟ್ಟು ಸೇವಾ ಕಾರ್ಯವನ್ನು ಅಭಿನಂದಿಸಿದರು.

ನಂದೀಶ್ವರ ದೇವಸ್ಥಾನ ಹತ್ತಿರ ಸ್ಮಶಾನದಲ್ಲಿ ನಡೆದ ಸೇವಾ ಕಾರ್ಯವನ್ನು ಉಪವಿಭಾಗಾಧಿಕಾರಿ ಸಂತೋಷ ಕಾಮನಗೌಡ ಅವರು ಉದ್ಘಾಟಿಸಿದರು.

ಪ್ರತಿಷ್ಠಾನದ ಪ್ರತಿನಿಧಿಗಳಾದ ನಿತೀನ್‌ ಗಂಜಾಲಕರ್‌, ವಿಜಯ ಲಕ್ಕಂಡಿ, ಧರ್ಮರಾಜ ಚೌವಾಣ, ಬಸವರಾಜ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT