ಭಾನುವಾರ, ಜೂನ್ 26, 2022
21 °C
ಐದು ವರ್ಷಗಳಿಂದ ಸಸಿಗಳನ್ನು ನೆಡುತ್ತಾ ಬಂದಿರುವ ಸಂಸ್ಥೆ

‘ಗ್ರೀನ್‌ ರಾಯಚೂರ’ನಿಂದ ವರ್ಷವಿಡೀ ಪರಿಸರ ದಿನ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಬಿಸಿಲು ಹೆಚ್ಚಾಗಿರುವ ರಾಯಚೂರು ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸಿ ಹಸಿರುಮಯ ಮಾಡುವ ಸಂಕಲ್ಪದೊಂದಿಗೆ ‘ಗ್ರೀನ್‌ ರಾಯಚೂರು’ ಸಂಸ್ಥೆಯು ಕಳೆದ ಐದು ವರ್ಷಗಳಿಂದಲೂ ಪರಿಸರ ದಿನ ಆಚರಿಸುತ್ತಲೇ ಬಂದಿರುವುದು ವಿಶೇಷ.

ಪ್ರತಿ ಭಾನುವಾರ ಸಸಿಗಳನ್ನು ನೆಡುವ ಕಾರ್ಯಕ್ರಮ ಮಾಡುವುದರ ಜೊತೆಗೆ ಅವುಗಳನ್ನು ಪೋಷಣೆಗೂ ಕ್ರಮ ಕೈಗೊಂಡಿದೆ. ಮಾವಿನಕೆರೆ ರಸ್ತೆ, ವಿವೇಕಾನಂದ ವೃತ್ತ, ನಗರೇಶ್ವರ ದೇವಸ್ಥಾನ, ಗಾಂಧಿವೃತ್ತ ಸೇರಿದಂತೆ ಬಡಾವಣೆಗಳ ಮಾರ್ಗದುದ್ದಕ್ಕೂ ಸಸಿಗಳನ್ನು ನೆಟ್ಟು ಬೆಳೆಸಿರುವುದು ಗಮನ ಸೆಳೆಯುತ್ತದೆ. ಎಲ್ಲಿ ನೋಡಿದರೂ ಕಾಂಕ್ರಿಟ್‌ ಕಟ್ಟಡಗಳು ಕಣ್ತುಂಬುತ್ತಿದ್ದ ರಾಯಚೂರು ನಗರದಲ್ಲಿ ಈಗ ಬೆಳೆಯುವ ಹಂತದಲ್ಲಿರುವ ಮರಗಳು ಮುದ ನೀಡುತ್ತಿವೆ.

2016 ರಲ್ಲಿ ಸ್ಥಾಪಿಸಿರುವ ಸಂಸ್ಥೆಗೆ ಉದ್ಯಮಿ ಕೊಂಡಾ ಕೃಷ್ಣಮೂರ್ತಿ ಅವರು ಗೌರವ ಅಧ್ಯಕ್ಷರಾಗಿದ್ದಾರೆ. ಪರಿಸರ ಎಂಜಿನಿಯರ್‌ ಸರಸ್ವತಿ ಕಿಲಕಿಲೆ ಅವರು ಅಧ್ಯಕ್ಷರಾಗಿದ್ದು, ರಾಜೇಂದ್ರಕುಮಾರ್‌ ಶಿವಾಳೆ ಕಾರ್ಯದರ್ಶಿ, ಡಾ. ಸಿ.ವಿ.ಪಾಟೀಲ, ವೆಂಕಟಕೃಷ್ಣ, ಲಾಲಜಿ ಪಟೇಲ್‌ ಅವರು ಉಪಾಧ್ಯಕ್ಷರು, ಕೆ.ಸಿ.ವೀರೇಶ, ವಿಜಯರಾಜು ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದುವರೆಗೂ ರಾಯಚೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 1.04 ಲಕ್ಷ ಸಸಿಗಳನ್ನು ನೆಡಲಾಗಿದೆ. ಅವುಗಳಲ್ಲಿ ಶೇ 60 ಕ್ಕಿಂತಲೂ ಹೆಚ್ಚು ಪೋಷಣೆ ಆಗಿವೆ. 2017 ಮತ್ತು 2018 ರಲ್ಲಿ ‘ಬೀಜದುಂಡೆ ಕಾರ್ಯಕ್ರಮ’ವನ್ನು ಮಾಡಿ ಮಳೆಗಾಲ ಆರಂಭವಾಗುವ ಪೂರ್ವದಲ್ಲಿ ಪರಿಸರದಲ್ಲಿ ಚೆಲ್ಲಲಾಗಿತ್ತು. ಇದರಿಂದ ಅಷ್ಟೊಂದು ಯಶಸ್ಸು ಬರಲಿಲ್ಲ. ಮಳೆ ಅಭಾವ ಕಾರಣದಿಂದ ಸಸಿಗಳು ಸಮರ್ಪಕವಾಗಿ ಬೆಳೆಯಲಿಲ್ಲ. ಹೀಗಾಗಿ ಮುಂದುವರಿಸಲಿಲ್ಲ ಎಂದು ಪದಾಧಿಕಾರಿಗಳ ವಿವರಣೆ.

2018 ರಲ್ಲಿ ಶಿಲ್ಪಾ ಮೆಡಿಕೇರ್‌ ಕಂಪೆನಿಯವರು ಗ್ರೀನ್‌ ರಾಯಚೂರಗೆ ಸಹಕಾರ ನೀಡುತ್ತಾ ಬಂದಿದೆ. ಸಸಿಗಳನ್ನು ಖರೀದಿಸಲು, ಪೋಷಣೆಗೆ ಕಂಪೆನಿ ನೆರವು ನೀಡುತ್ತಿದೆ. ಕಂಪೆನಿಯ ಮುಖ್ಯಸ್ಥ ವಿಷ್ಣುಕಾಂತ್‌ ಬೂತಡಾ ಹಾಗೂ ಕೊಂಡಾ ಕೃಷ್ಣಮೂರ್ತಿ ಅವರು ಒಟ್ಟಾಗಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಸಂಕಲ್ಪ ಮಾಡಿದ್ದು, ಇಬ್ಬರು ಮಹನೀಯರು ಪರಿಸರಪರ ಕಾರ್ಯಕ್ರಮಗಳಿಗೆ ಮುಖ್ಯ ಆಧಾರವಾಗಿ ನಿಂತಿದ್ದಾರೆ.

‘ಸಸಿಗಳನ್ನು ನೆಡುವುದು ಬರೀ ಅರಣ್ಯ ಇಲಾಖೆಯವರ ಕೆಲಸ ಎನ್ನುವ ತಿಳಿವಳಿಕೆ ಜನರಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ ಜನರು ಕೂಡಾ ಸಸಿಗಳನ್ನು ನೆಡುವುದು, ಮರಗಳನ್ನು ಬೆಳೆಸುವುದಕ್ಕೆ ಮಹತ್ವ ನೀಡುತ್ತಿದ್ದಾರೆ. ಮದುವೆ, ಜನ್ಮದಿನಾಚರಣೆ ಸಂದರ್ಭದಲ್ಲಿ ಸಸಿಗಳನ್ನು ನೆಡುವ ಪರಿಪಾಠ ಆರಂಭವಾಗಿದೆ’ ಎಂದು ರಾಜೇಂದ್ರಕುಮಾರ್‌ ಹೇಳಿದರು.

‘ಗ್ರೀನ್‌ ರಾಯಚೂರು ಮಾಡುವ ಕೆಲಸದ ಬಗ್ಗೆ ಅನೇಕ ಜನರು ನಕಾರಾತ್ಮಕವಾಗಿ ಮಾತನಾಡಿಕೊಳ್ಳುತ್ತಿದ್ದರು. ಆದರ ಬಗ್ಗೆ ತಲೆಕೆಡಿಸಿಕೊಳ್ಳದೆ ಶ್ರಮದಾನ ಮಾಡುತ್ತಾ ಬಂದಿದ್ದರಿಂದ ಅನೇಕ ಮರಗಳು ಬೆಳೆದಿವೆ. ಪ್ರತಿ ವಾರದಿಂದ ಒಂದೊಂದು ಸ್ಥಳ ಆಯ್ಕೆ ಮಾಡಿಕೊಂಡು ಸಸಿಗಳನ್ನು ನೆಡುತ್ತಾ ಬಂದಿದ್ದೇವೆ. ಬರೀ ಮರಗಳನ್ನು ನೆಟ್ಟು ಹೋಗುತ್ತಾರೆ, ಪೋಷಣೆ ಮಾಡುವುದಿಲ್ಲ ಎನ್ನುವ ಅಪವಾದ ಇತ್ತು. ನಿರಂತರ ಕಾಳಜಿ ಇಟ್ಟುಕೊಂಡಿದ್ದರ ಪರಿಣಾಮದಿಂದಲೆ ಸಸಿಗಳನ್ನು ಬೆಳೆಸುವುದಕ್ಕೆ ಸಾಧ್ಯವಾಗಿದೆ’ ಎಂದರು.

ಸಸಿಗಳಿಗೆ ನೀರುಣಿಸಲು ಒಂದು ಟ್ರ್ಯಾಕ್ಟರ್‌, ಒಂದು ಟ್ಯಾಂಕರ್‌ ಇವೆ. ಶಾಸಕ ಡಾ.ಶಿವರಾಜ ಪಾಟೀಲ ಅವರು ಒಂದು ಟ್ಯಾಂಕರ್‌ ಕೊಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು