ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿಕೊಟ್ಟ ನಿಂಬೆ, ತೆಂಗು, ಗೋಡಂಬಿ

20 ಎಕರೆಯಲ್ಲಿ ಮಿಶ್ರ ಬೇಸಾಯ ಮಾಡಿದ ರೈತ ಕೃಪಾಸಾಗರ ಪಾಟೀಲ್
Last Updated 8 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮಾನ್ವಿ: ಪಟ್ಟಣದ ಮುಖಂಡ ಕೃಪಾಸಾಗರ ಪಾಟೀಲ್ ತೋಟಗಾರಿಕೆ ಕೃಷಿಯಲ್ಲಿ ಖುಷಿ ಕಾಣುವ ಮೂಲಕ ಯಶಸ್ವಿ ರೈತರಾಗಿದ್ದಾರೆ.

ದಶಕಗಳಿಂದ ತಾಲ್ಲೂಕಿನ ಸಾಮಾಜಿಕ ಸಂಘ, ಸಂಸ್ಥೆಗಳ ಜತೆ ಗುರುತಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿರುವ ಕೃಪಾಸಾಗರ ಅವರು, ಈಗ ಪ್ರಗತಿಪರ ರೈತರಾಗಿ ಇತರರಿಗೆ ಮಾದರಿಯಾಗಿದ್ದಾರೆ.

ಮಾನ್ವಿ ಪಟ್ಟಣದ ಹೊರವಲಯದ ಮಲ್ಲಿನಮಡುಗು ರಸ್ತೆಗೆ ಹೊಂದಿಕೊಂಡು ಇರುವ ತಮ್ಮ 60 ಎಕೆರೆ ಜಮೀನಿನಲ್ಲಿ ಸುಮಾರು ಎರಡು ದಶಕಗಳಿಂದ ಅವರು ಭತ್ತ, ಜೋಳ, ಹತ್ತಿ ಮುಂತಾದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು. ‌

ನಿರಂತರ ಮಳೆ ಕೊರತೆ, ಕಾಲುವೆ ನೀರಿನ ಸಮಸ್ಯೆಯಿಂದ ಬೇಸತ್ತ ಅವರು ಕೆರೆ ನಿರ್ಮಾಣ ಮತ್ತು ಕೊಳವೆಬಾವಿಗಳನ್ನು ಬಳಸಿಕೊಂಡು ಹನಿ ನೀರಾವರಿ ಪದ್ಧತಿ ಮೂಲಕ ಎರಡು ವರ್ಷಗಳಿಂದ 20 ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೇಸಾಯ ಆರಂಭಿಸಿದ್ದಾರೆ.

7ಎಕರೆ ಜಮೀನಿಲ್ಲಿ ಪೇರಲ, 5 ಎಕರೆ ಜಮೀನಿನಲ್ಲಿ ನಿಂಬೆ ಹಾಗೂ ತೆಂಗು ಮಿಶ್ರ ಬೆಳೆ, 2 ಎಕರೆಯಲ್ಲಿ ಗೋಡಂಬಿ ಹಾಗೂ 5ಎಕರೆಯಲ್ಲಿ ಅಂಜೂರ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. 1 ಎಕರೆಯಲ್ಲಿ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಯುವ ಯೋಜನೆ ಹೊಂದಿದ್ದಾರೆ. ಹತ್ತು ತಿಂಗಳ ಅವಧಿಯಲ್ಲಿ ಬೆಳೆದ ಪೇರಲ ಗಿಡಗಳು ಹಣ್ಣಿನ ಫಸಲು ಹಂತ ತಲುಪಿವೆ. ಪೇರಲ ಹಣ್ಣಿನ ಗಿಡಗಳ ನಿರ್ವಹಣೆಗೆ ಹತ್ತು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು 1ಎಕರೆಗೆ ಸುಮಾರು ₹ 3ಸಾವಿರ ಖರ್ಚು ಮಾಡಿರುವ ಅವರು ಪ್ರತಿ ಗಿಡದಲ್ಲಿ ಸುಮಾರು 30ಕೆಜಿ ತೂಕದ ಪೇರಲ ಹಣ್ಣುಗಳನ್ನು ಬೆಳೆದಿದ್ದಾರೆ.

1 ಎಕರೆಗೆ 10 ಟನ್‌ ಉತ್ತಮ ಪೇರಲ ಹಣ್ಣಿನ ಫಸಲು ಬರುವ ನಿರೀಕ್ಷೆ ಮತ್ತು ಹಣ್ಣುಗಳ ಮಾರಾಟದಿಂದ ಪ್ರತಿ ಎಕರೆಗೆ ₹ 3ರಿಂದ ₹ 3.5ಲಕ್ಷ ಆದಾಯ ಗಳಿಸುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.

ಎರಡು ವರ್ಷಗಳ ಹಿಂದೆ ಮಂಜರ್ಲಾ ಗೋಶಾಲೆಯಿಂದ 4 ಆಕಳುಗಳನ್ನು ತಂದು ಹೈನುಗಾರಿಕೆ ಆರಂಭಿಸಿದ್ದ ಅವರು ತೋಟದಲ್ಲಿ ಕುರಿ ಸಾಕಾಣಿಕೆಗೆ ಸಿದ್ಧತೆ ನಡೆಸಿದ್ದಾರೆ.

ಕೃಷಿ ತಜ್ಞ ವಿಜಯಸಾರಥಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ, ಇಲಾಖೆಯ ಸವಲತ್ತುಗಳನ್ನು ಅವರು ಸದ್ಬಳಕೆ ಮಾಡಿಕೊಂಡಿದ್ದಾರೆ. ಮೋಸಂಬಿ, ಪೇರಲ, ಗೋಡಂಬಿ ಬೆಳೆಯಲು ಸರ್ಕಾರದ ಪ್ರೋತ್ಸಾಹ ಧನ ಪಡೆದಿದ್ದಾರೆ.

ತೋಟಗಾರಿಕೆ ಇಲಾಖೆಯ ನೆರವಿನಿಂದ ತೋಟದಲ್ಲಿ ಸಮುದಾಯ ಕೆರೆ ಹಾಗೂ ಹಣ್ಣುಗಳ ಪ್ಯಾಕಿಂಗ್‌ಗಾಗಿ ಸುಸಜ್ಜಿತ ‘ಪ್ಯಾಕ್‌ ಹೌಸ್‌’ ನಿರ್ಮಿಸಿದ್ದಾರೆ. ಮಾನ್ವಿ ಪಟ್ಟಣದಲ್ಲಿ ಸಮಾನಮನಸ್ಕ ರೈತರ ಜತೆ ಸೇರಿಕೊಂಡು ನಿಸರ್ಗಧಾಮ ತೋಟಗಾರಿಕೆ ಬೆಳೆಗಾರರ ಸಂಘವನ್ನು ಅವರು ಸ್ಥಾಪಿಸಿದ್ದಾರೆ.

‘ನಮ್ಮಲ್ಲಿ ರೈತರು ಭತ್ತ, ಹತ್ತಿ ಮತ್ತಿತರ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಭಾಗದ ಭೂಮಿಯ ಮಣ್ಣು, ಹವಾಗುಣ ತೋಟಗಾರಿಕೆ ಬೆಳೆಗಳಿಗೆ ಪೂರಕವಾಗಿವೆ. ಇತರ ಬೆಳೆಗಳ ನಿರ್ವಹಣಾ ವೆಚ್ಚ, ಪರಿಶ್ರಮ ತೋಟಗಾರಿಕೆ ಬೆಳೆಗಳಿಗೆ ಸಮಾನವಾಗಿದೆ. ಆದರೆ ತೋಟಗಾರಿಕೆ ಕೃಷಿಯಲ್ಲಿ ಹೆಚ್ಚು ತಾಳ್ಮೆ ಹಾಗೂ ಬೆಳೆಗಳ ಕುರಿತು ನಿರಂತರ ಕಾಳಜಿ ಅವಶ್ಯ’ ಎಂದು ಕೃಪಾಸಾಗರ ಪಾಟೀಲ್‌ ಅಭಿಪ್ರಾಯಪಡುತ್ತಾರೆ.

ಸಂಘದ ಚಟುವಟಿಕೆಗಳ ಮೂಲಕ ತೋಟಗಾರಿಕೆ ಬೆಳೆಗಳ ಕುರಿತು ರೈತರಲ್ಲಿ ಜಾಗೃತಿ ಮತ್ತು ಅಗತ್ಯ ತರಬೇತಿ, ಸರ್ಕಾರದ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಸಂಕಲ್ಪ ಮಾಡಿದ್ದಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT