ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದಿಸದಿದ್ದರೆ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ: ನಾಗರಾಜ ಪೂಜಾರ್

Published 18 ಅಕ್ಟೋಬರ್ 2023, 14:04 IST
Last Updated 18 ಅಕ್ಟೋಬರ್ 2023, 14:04 IST
ಅಕ್ಷರ ಗಾತ್ರ

ಸಿಂಧನೂರು: 2023-24ನೇ ಸಾಲಿಗೆ ಆನ್‍ಲೈನ್ ಕೌನ್ಸೆಲಿಂಗ್ ಮೂಲಕ ನೇಮಕಗೊಂಡು ಕೆಲಸಕ್ಕೆ ವರದಿ ಮಾಡಿಕೊಂಡ ಎಲ್ಲ ಅತಿಥಿ ಉಪನ್ಯಾಸಕರಿಗೆ ಅಕ್ಟೋಬರ್ 7ರಿಂದ ವೇತನ ಸಹಿತ ಹಾಜರಾತಿ ನೀಡಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಬುಧವಾರ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.

‘ಕರ್ನಾಟಕ ರಾಜ್ಯದ 410 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರನ್ನು ಸೇವೆಗೆ ಆಯ್ಕೆ ಮಾಡಿಕೊಳ್ಳುವಾಗ 10 ತಿಂಗಳ ಸೇವೆಗೆಂದು ಆದೇಶದಲ್ಲಿ ತಿಳಿಸಿದ್ದಾರೆ. ಆದರೆ, ಎಲ್ಲರಿಗೂ 10 ತಿಂಗಳ ಸೇವೆ ಹಾಗೂ ಸಂಬಳ ಸಿಗುವುದಿಲ್ಲ. ಕೆಲವರಿಗೆ ಮಾತ್ರ ಈ ಭಾಗ್ಯ ಸಿಗಲಿದೆ. ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಒಂದೇ ರೀತಿಯ ವೇಳಾಪಟ್ಟಿ ಇರದ ಕಾರಣ ನೇಮಕ ಮತ್ತಿತರ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಜೊತೆಗೆ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ’ ಎಂದು ಎಐಸಿಸಿಟಿಯು ಜಿಲ್ಲಾ ಘಟಕದ ಸಂಚಾಲಕ ನಾಗರಾಜ ಪೂಜಾರ್ ದೂರಿದರು.

ಕಲ್ಯಾಣ ಕರ್ನಾಟಕದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡಿದ್ದರು. ಅವರಿಗೆ ಕೆಲಸ ಮತ್ತು ಸಂಬಳ ನೀಡುತ್ತಿಲ್ಲ. ಕೆಲಸವಿಲ್ಲದೆ ಕೆಲವು ಉಪನ್ಯಾಸಕರು ಜೀವನ ನಿರ್ವಹಿಸಲು ಆಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ ಸಂಗತಿ. ಹೀಗಾಗಿ ಕಳೆದ ವರ್ಷ ಅನುಸರಿಸಿದಂತೆ ಅತಿಥಿ ಉಪನ್ಯಾಸಕರಿಗೆ ಕೆಲಸ ಹಾಗೂ ವೇತನ ನೀಡಬೇಕು. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಬಾಕಿ ವೇತನ ಕೊಡಬೇಕು. ಸೇವೆ ಖಾಯಂ ಮಾಡಬೇಕು ಎಂದು ಸಮುದಾಯ ಸಂಘಟನೆ ಸಂಚಾಲಕ ಎಸ್.ದೇವೇಂದ್ರಗೌಡ ಆಗ್ರಹಿಸಿದರು.

ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡದೇ, ಕಾರ್ಪೋರೇಟ್ ಕಂಪನಿಗಳಿಗೆ ಮಣೆ ಹಾಕಿ ಖಾಸಗೀಕರಣ ಮಾಡಲು ಹುನ್ನಾರ ನಡೆಸಿದೆ. ಉಪನ್ಯಾಸಕರು, ಬುದ್ದಿಜೀವಿಗಳು ಬೀದಿಗಿಳಿದು ಹೋರಾಡಿದರೆ ಕ್ರಾಂತಿಯಾಗಲಿದೆ. ತಕ್ಷಣವೇ ಅತಿಥಿ ಉಪನ್ಯಾಸಕರ ಸಮಸ್ಯೆ ಸರಿಪಡಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮನವಿ ಪತ್ರ ಸ್ವೀಕರಿಸಿದರು. ಒಕ್ಕೂಟದ ಮುಖಂಡರಾದ ವೆಂಕನಗೌಡ ಗದ್ರಟಗಿ, ಶೇಕ್ಷಾಖಾದ್ರಿ, ಚಂದ್ರಶೇಖರ ಗೊರಬಾಳ, ಬಸವಂತರಾಯಗೌಡ ಕಲ್ಲೂರು, ಶರಭಣ್ಣ ನಾಗಲಾಪೂರ, ಬಸವರಾಜ ಬಾದರ್ಲಿ, ರಮೇಶ ಪಾಟೀಲ್ ಬೇರಿಗಿ, ಬಿ.ಎನ್.ಯರದಿಹಾಳ, ಜಗದೀಶ ಸುಕಾಲಪೇಟ, ಬಸವರಾಜ ಕೊಂಡಿ, ಪರಶುರಾಮ ಭಂಡಾರಿ, ಎಂ.ಎಸ್.ರಾಜಶೇಖರ, ಡಾ.ವಸೀಮ್ ಅಹ್ಮದ್, ಚಾಂದ್, ಉಪನ್ಯಾಸಕರಾದ ಡಾ.ಬಸವರಾಜ ಪಿ.ನಾಯಕ, ಶಂಕರ್ ಗುರಿಕಾರ, ಬಸವರಾಜ ಬಳಿಗಾರ, ಪರಶುರಾಮ ಮಲ್ಲಾಪುರ, ಶಂಕರ್ ವಾಲಿಕಾರ್, ರಾಮಣ್ಣ ಹಿರೇಬೇರಿಗಿ, ನಾರಾಯಣ ಬೆಳಗುರ್ಕಿ, ಹುಸೇನಬಾಷಾ, ಜಯಪ್ಪ ಗೊರೇಬಾಳ, ರುದ್ರಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT